ಗುರುವಾರ , ಫೆಬ್ರವರಿ 9, 2023
29 °C
ರಾಮನಗರಕ್ಕೆ 16 ರಾಷ್ಟ್ರಗಳ 22 ಅಂತರರಾಷ್ಟ್ರೀಯ ಪ್ರತಿನಿಧಿಗಳ ಭೇಟಿ

ವಿದೇಶಿಗರಿಂದ ಪ್ರಾದೇಶಿಕ ಅಧ್ಯಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ರೂರಲ್ ಡೆವಲಪ್‌ಮೆಂಟ್ ಮತ್ತು ಪಂಚಾಯತ್ ರಾಜ್ ಸಂಸ್ಥೆಯಿಂದ 16 ರಾಷ್ಟ್ರಗಳ 22 ಅಂತರರಾಷ್ಟ್ರೀಯ ಪ್ರತಿನಿಧಿಗಳು ಬುಧವಾರ ಜಿಲ್ಲೆಗೆ ಭೇಟಿ ನೀಡಿದ್ದು, ಜಿಲ್ಲೆಯಲ್ಲಿ ಕೈಗೊಂಡ ವಿಶೇಷ ಚಟುವಟಿಕೆಗಳ ಕುರಿತು ಅಧ್ಯಯನ ನಡೆಸಿದರು.

ಗ್ರಾಮೀಣಾ ಭಾರತದ ಪರಿವರ್ತನೆ, ಉತ್ತಮ ಆಡಳಿತ ಮತ್ತು ವೈವಿಧ್ಯಮಯ ಕೌಶಲಗಳ ಅಧ್ಯಯನಕ್ಕಾಗಿ ವಿದೇಶಿಗರ ಈ ತಂಡವು ಜಿಲ್ಲೆಯಲ್ಲಿ ಕ್ಷೇತ್ರ ಪರಿಚಯ ಭೇಟಿ ಕೈಗೊಂಡಿತ್ತು.

ಈ ತಂಡವು ಮೊದಲಿಗೆ ರಾಮನಗರ ತಾಲ್ಲೂಕಿನ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿಗೆ ಭೇಟಿ ಕೊಟ್ಟಿತು. ಅಲ್ಲಿ ಈ ಪ್ರತಿನಿಧಿಗಳಿಗೆ ಗ್ರಾಮ ಪಂಚಾಯಿತಿ ಆಡಳಿತ ನಿರ್ವಹಣೆ, ಯೋಜನೆಗಳ ಅನುಷ್ಠಾನ, ತೆರಿಗೆ ಸಂಗ್ರಹ, ಇ-ಆಡಳಿತ, ಬಾಪೂಜಿ ಸೇವೆ ಕೇಂದ್ರ, ಪಂಚತಂತ್ರ, ಇ-ಸ್ವತ್ತು, ಇ-ಬೆಳಕು, ಐಪಿಜಿಆರ್‌ಎಸ್, ನರೇಗಾ, ಇ –ಗ್ರಾಮ ಸ್ವರಾಜ್ ಹಾಗೂ ಸ್ವಚ್ಛ ಭಾರತ್ ಮಿಷನ್ ಯೋಜನೆಗಳ ಕುರಿತು ವಿವರಿಸಲಾಯಿತು. ಗ್ರಾ.ಪಂ ವ್ಯಾಪ್ತಿಯಲ್ಲಿ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಹಾಗೂ ಆಡಳಿತ ವ್ಯವಸ್ಥೆಯ ಕುರಿತು ಪ್ರತಿನಿಧಿಗಳು ಮಾಹಿತಿ ಪಡೆದರು.

ಶ್ಯಾನುಮಂಗಲ ಗ್ರಾಮದಲ್ಲಿ ಸ್ಮಾರ್ಟ್ ಅಂಗನವಾಡಿಗೆ ಭೇಟಿ ನೀಡಿ ಅಲ್ಲಿನ ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆ ಬಗ್ಗೆ ತಿಳಿದುಕೊಂಡರು. ನಂತರ ಜಿ.ಪಂ ಭವನಕ್ಕೆ ಭೇಟಿ ನೀಡಿದ ಸದಸ್ಯರಿಗೆ ಜಿ.ಪಂ ಸಿಇಒ ದಿಗ್ವಿಜಯ್ ಬೋಡ್ಕೆ ಕೈಗೊಂಡ ವಿಶೇಷ ಚಟುವಟಿಕೆ ಮತ್ತು ಯೋಜನೆಯ ಮಾಹಿತಿ ನೀಡಿದರು.

ಜಿ.ಪಂ ಉಪ ಕಾರ್ಯದರ್ಶಿ ಟಿ.ಕೆ. ರಮೇಶ್ ಹಾಗೂ ರಾಮನಗರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರದೀಪ್, ಸಹಾಯಕ ನಿರ್ದೇಶಕ ರೂಪೇಶ್ ಕುಮಾರ್, ಸಹಾಯಕ ಯೋಜನಾ ನಿರ್ದೇಶಕ ಲೋಕೇಶ್ ಹಾಗೂ ನರೇಗಾ ಶಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

 

ಗೊಂಬೆ ತಯಾರಿಕೆ ವೀಕ್ಷಣೆ: ಸಂವಾದ

ಹರೀಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಸಹಾಯ ಸಂಘದ ಮಹಿಳೆಯರೇ ನಿರ್ಮಿಸಿರುವ ಸಂಜೀವಿನಿ ಕಟ್ಟಡವನ್ನು ಪ್ರತಿನಿಧಿಗಳ ತಂಡವು ವೀಕ್ಷಿಸಿತು. ಈ ಸಂದರ್ಭ ಮಹಿಳೆಯರ
ಜೊತೆ ಸಂವಾದ ನಡೆಸಿತು. ಚನ್ನಪಟ್ಟಣ ತಾಲ್ಲೂಕಿನ ಕ್ರಾಫ್ಟ್ ಪಾರ್ಕ್, ಸ್ವ ಸಹಾಯ ಸಂಘದ ಮಹಿಳೆಯರೇ ನಿರ್ವಹಿಸುತ್ತಿರುವ ರಕ್ಷಾ ಆಯಿಲ್ ಮಿಲ್‌ಗೂ ಜನಪ್ರತಿನಿಧಿಗಳ ತಂಡವು ಭೇಟಿ ನೀಡಿತು.

ಯಾವ್ಯಾವ ದೇಶದ ಪ್ರತಿನಿಧಿಗಳು?

ಅಭಿವೃದ್ಧಿಶೀಲ ಹಾಗೂ ಹಿಂದುಳಿದ ರಾಷ್ಟ್ರಗಳ ಕೃಷಿ, ಸಾರ್ವಜನಿಕ ಆಡಳಿತ, ಕಾರ್ಮಿಕ, ಮಹಿಳಾ ಸಬಲೀಕರಣ, ಪೌರಾಡಳಿತ, ಶಿಕ್ಷಣ, ಜಲಸಂಪನ್ಮೂಲ ಮೊದಲಾದ ಇಲಾಖೆಗೆ ಸಂಬಂಧಿಸಿದ ಈ ಪ್ರತಿನಿಧಿಗಳು ಈ ನಿಯೋಗದಲ್ಲಿದ್ದರು.

ಅರ್ಜೇಂಟೈನಾದ ಕೃಷಿ ಇಲಾಖೆ ಪ್ರತಿನಿಧಿ ಸೆಲೆನಾ ಆ್ಯಂಡ್ರೆಸ್ಸಿ, ಕ್ಯುಬಾದ ಲಾರಿಟ್ಜಾ ಪೆರಿಸ್‌, ಕೀನ್ಯಾದ ಯಾಸ್ಮಿನ್‌ ಮೊಹಮ್ಮದ್ ಅದಾನ್‌ ಹಾಗೂ ಇಬ್ರಾಹಿಂ, ಉಗಾಂಡದ ಸೈದತ್ ನಮುತೆಬಿ, ಮಾಲ್ಡೀವ್ಸ್‌ನ ಫರ್ನಾ ಅಬ್ದುಲ್‌ ಫೆಜು, ಶ್ರೀಲಂಕಾದ ರೇವತಿ ತನುಶನ್‌, ಉದಯರಾಜ್‌ ರಾಜದೊರೈ, ಸುಡಾನ್‌ನ ಕೇಟ್‌ ಸೈಮನ್‌ ಹಾಗೂ ಗ್ಯಾಟ್ರಿಕ್‌, ತಜಕಿಸ್ತಾನದ ಅಸ್ಲಿದ್ದೀನ್‌ ಐನುದ್ದೀನ್‌ ಹಾಗೂ ಸುಕ್ರೋಬ್‌, ಜಾಂಬಿಯಾದ ಮೊಹಮ್ಮದ್ ಬವ, ಇಥಿಯೋಪಿಯಾದ ಮೆಕಿ ತಹಿರ್, ಮೊಜಾಂಗ್ವೆಯ ಬೆನ್‌ಲಿಲ್ಡೊ, ತಾಂಜೆನಿಯಾದ ಸುಲೈಮಾನ್ ಹಮದ್, ನೈಜಿರಿಯಾದ ನುರುದ್ದೀನ್‌ ಅಮುದಾ, ಮಲಾವಿಯ ವಿಲಿಯಂ ಈ ತಂಡದಲ್ಲಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.