ಶುಕ್ರವಾರ, ಮಾರ್ಚ್ 5, 2021
30 °C
ಗಣಿ ಸ್ಫೋಟ: ತನಿಖೆಗೆ ಆಗ್ರಹ

ಗಣಿಗಾರಿಕೆ ನಿಷೇಧಿಸಿ: ಹೋರಾಟಗಾರ ವಾಟಾಳ್‌ ನಾಗರಾಜ್ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಗಣಿ ಸ್ಫೋಟ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವುದರ ಜತೆಗೆ ರಾಜ್ಯದಲ್ಲಿ ಗಣಿಗಾರಿಕೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಭಾನುವಾರ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್‌ ನೇತೃತ್ವದಡಿ ಪ್ರತಿಭಟನೆ ನಡೆಯಿತು.

ನಗರದ ಐಜೂರು ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ವಾಟಾಳ್ ನಾಗರಾಜ್‌ ಮಾತನಾಡಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹದ್ದುಮೀರಿ ನಡೆದುಕೊಳ್ಳುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಯಾವುದೇ ಕಾರಣಕ್ಕೂ ಠಾಕ್ರೆ ವಾದ ಒಪ್ಪುವ ಪ್ರಶ್ನೆಯೇ ಇಲ್ಲ. ಮತ್ತೊಮ್ಮೆ ಈ ರೀತಿ ಹೇಳಿಕೆ ನೀಡಬಾರದು. ಎಂಇಎಸ್ ಅನ್ನು ಹದಿನೈದು ದಿನದೊಳಗೆ ನಿಷೇಧ ಮಾಡಬೇಕು. ಮಹಾರಾಷ್ಟ್ರ ಏಕೀಕರಣ ಸಮಿತಿ ಕರ್ನಾಟಕದಲ್ಲಿ ಇರಬಾರದು. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಹೇಳಿದರು.

ಮರಾಠ ಅಭಿವೃದ್ಧಿ ನಿಗಮ, ಉದ್ಧವ್ ಠಾಕ್ರೆ ಹೇಳಿಕೆ ಖಂಡಿಸಿ ಹಾಗೂ ಮಹಾರಾಷ್ಟ್ರ ಏಕೀಕರಣ ನಿಷೇಧಕ್ಕೆ ಆಗ್ರಹಿಸಿ ಜ. 30ರಂದು ರಾಜ್ಯದಲ್ಲಿ ರೈಲು ಬಂದ್ ಮಾಡಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಿದ್ದೇ ಅಕ್ರಮ ಗಣಿಗಾರಿಕೆಗಳಿಂದ. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದವರು ಬಿಎಸ್‌ವೈ ಸಂಪುಟದಲ್ಲಿ ಮಂತ್ರಿಗಳಾಗಿದ್ದವರು. ಬಳ್ಳಾರಿ ಗಣಿ ಮಾಲೀಕರು, ಬಿಎಸ್‌ವೈ ಅವರನ್ನು ಅಧಿಕಾರಕ್ಕೆ ತಂದರು. ಶಿವಮೊಗ್ಗದಲ್ಲಿ ನಡೆದಿರುವುದು ಭಾರೀ ದೊಡ್ಡ ದುರಂತ. ಈ ವಿಚಾರದಲ್ಲಿ ಅಕ್ರಮ ಸಕ್ರಮ ಮಾಡಿಕೊಳ್ಳಲು ಅವಕಾಶ ಉಂಟೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿರುವ ಎಲ್ಲ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು. ಗಣಿಗಾರಿಕೆಯಲ್ಲಿ ಸತ್ತವರಿಗೆ ಕನಿಷ್ಠ ₹ 1 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕರುನಾಡ ಸೇನೆಯ ರಾಜ್ಯ ಉಪಾಧ್ಯಕ್ಷ ಎಂ. ಜಗದೀಶ್, ಪದಾಧಿಕಾರಿಗಳಾದ ಗಾಯತ್ರಿ ಬಾಯಿ, ಜಯಕುಮಾರ್, ಜಯರಾಮು, ತ್ಯಾಗರಾಜ್, ರಮೇಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು