ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಜಿಲ್ಲೆಯ ಮೊದಲ ಜೇನು ಮೇಳ 13ರಿಂದ

ಜಿ.ಪಂ. ಆವರಣದಲ್ಲಿ 10 ಮಳಿಗೆಗಳ ನಿರ್ಮಾಣ: ಜೇನು ಸಾಕಣೆ ಕುರಿತು ಕಾರ್ಯಾಗಾರ
Last Updated 9 ನವೆಂಬರ್ 2019, 14:30 IST
ಅಕ್ಷರ ಗಾತ್ರ

ರಾಮನಗರ: ಜೇನು ಸಾಕಣೆಯತ್ತ ರೈತರನ್ನು ಆಕರ್ಷಿಸುವ ಸಲುವಾಗಿ ತೋಟಗಾರಿಕೆ ಇಲಾಖೆಯು ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜೇನು ಮೇಳವನ್ನು ಹಮ್ಮಿಕೊಂಡಿದೆ. ಇದೇ 13 ಹಾಗೂ 14ರಂದು ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಈ ಮೇಳ ನಡೆಯಲಿದೆ.

ಜೇನು ಕೃಷಿಯಲ್ಲಿನ ಅವಕಾಶಗಳು, ಅದರಿಂದ ಆಗುವ ಲಾಭಗಳ ಕುರಿತು ಈ ಮೇಳವು ರೈತರಿಗೆ ಮಾಹಿತಿ ನೀಡಲಿದೆ. ಮಾರುಕಟ್ಟೆ, ಬೇಡಿಕೆ ಹಾಗೂ ಪೂರೈಕೆಗಳ ಬಗ್ಗೆಯೂ ಮಾಹಿತಿ ಒದಗಿಸಲಿದೆ. ಈ ಮೂಲಕ ರೈತರ ಕೈ ಬಲಪಡಿಸುವ ಪ್ರಯತ್ನ ನಡೆಯಲಿದೆ.

ಅನುಭವಿ ರೈತರು ಮತ್ತು ಉದ್ಯಮಿಗಳು ಕಾರ್ಯಾಗಾರದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಜೊತೆಗೆ ಹತ್ತು ಮಳಿಗೆಗಳಲ್ಲಿ ಜೇನು ಹಾಗೂ ಅದರ ಉಪ ಉತ್ಪನ್ನಗಳ ಮಾರಾಟವೂ ನಡೆಯಲಿದೆ. ರಾಮನಗರದ ಜೊತೆಗೆ ಬಳ್ಳಾರಿ, ಚಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳ ಆಯ್ದ ಯಶಸ್ವಿ ರೈತರು ಉತ್ಪನ್ನದ ಮಾರಾಟದ ಜೊತೆಗೆ ತಮ್ಮ ಯಶಸ್ಸಿನ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇದರೊಟ್ಟಿಗೆ, ಜೇನು ಸಾಕುವವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತೂ ಮಾಹಿತಿ ನೀಡಲಾಗುತ್ತದೆ.

ಜಿಲ್ಲೆಯ ಹಲವು ರೈತರು ಜೇನು ಸಾಕಾಣಿಕೆಯನ್ನು ಕಸುಬಾಗಿಸಿಕೊಂಡು ಬೇರೆ ಕಡೆಗಳಿಗೆ ಮಾರಾಟ ಮಾಡುವ ಹಂತಕ್ಕೆ ಬಂದಿದ್ದರೂ, ಹೆಚ್ಚಿನ ರೈತರು ಜೇನು ಕೃಷಿಯಿಂದ ದೂರವೇ ಉಳಿದಿದ್ದಾರೆ. ಇಂತಹವರನ್ನು ಸೆಳೆಯುವ ಮೊದಲ ಪ್ರಯತ್ನ ಇದಾಗಿದೆ. ಇದು ಹಲವು ರೈತರಿಗೆ ಪ್ರೇರಣೆ ಆಗಲಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು.

ಉತ್ತಮ ಮಾರುಕಟ್ಟೆ: ಮಾರುಕಟ್ಟೆಯಲ್ಲಿ ಶುದ್ಧ ಜೇನು ತುಪ್ಪಕ್ಕೆ ಸಾಕಷ್ಟು ಬೇಡಿಕೆ ಇದೆ. ರಾಮನಗರ ಜಿಲ್ಲೆಯು ಬೆಂಗಳೂರಿಗೆ ಹತ್ತಿರವಿದ್ದು, ಉತ್ತಮ ಮಾರುಕಟ್ಟೆ ಹೊಂದಿದೆ. ಅಲ್ಲದೇ ಇಲ್ಲಿ ಬೆಂಗಳೂರು– ಮೈಸೂರು, ಬೆಂಗಳೂರು -–ಮಂಗಳೂರು, ಬೆಂಗಳೂರು– -ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಇಲ್ಲಿಯೂ ಮುಕ್ತ ವ್ಯಾಪಾರಕ್ಕೆ ಅವಕಾಶ ಇದೆ. ರೈತರು ಜೇನಿನ ನೇರ ಮಾರಾಟದಿಂದ ಉತ್ತಮ ಲಾಭ ಪಡೆಯಬಹುದಾಗಿದೆ.

ಪರಾಗ ಸ್ಪರ್ಶಕ್ಕೆ ಅನುಕೂಲ

ಜೇನು ಸಾಕಣೆ ಕೇವಲ ಲಾಭಕ್ಕೆ ಮಾತ್ರವಲ್ಲದೇ ಜಮೀನಿನಲ್ಲಿ ಉತ್ತಮ ಬೆಳೆಯನ್ನು ಪಡೆಯಲು ಸಹಕಾರಿ ಆಗಿದೆ. ಜೇನು ಹುಳುಗಳಿಂದ ಹೊಲದಲ್ಲಿ ಪರಾಗ ಸ್ಪರ್ಶ ಪ್ರಕ್ರಿಯೆಯು ಹೆಚ್ಚಿ ಉತ್ತಮ ಗುಣಮಟ್ಟ ಹಾಗೂ ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ. ಜೊತೆಗೆ ರೈತರ ಆದಾಯವೂ ಹೆಚ್ಚುತ್ತದೆ.

‘ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಮಾವು ಮತ್ತು ತೆಂಗನ್ನು ಬೆಳೆಯುತ್ತಿದ್ದಾರೆ. ಇಂತಹ ತೋಟಗಳು ಜೇನು ಸಾಕಣೆಗೆ ಪ್ರಶಸ್ತವಾಗಿವೆ. ಇದರಿಂದ ಪರಾಗ ಸ್ಪರ್ಶವೂ ಉತ್ತಮವಾಗಿ ಇಳುವರಿಯೂ ಶೇ 10ರವರೆಗೆ ಹೆಚ್ಚುತ್ತದೆ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಜೆ. ಗುಣವಂತ.

***

ಮೇಳದಲ್ಲಿ ಜೇನು ಸಾಕಣೆ ಜೊತೆಗೆ ಅದರ ಉಪ ಉತ್ಪನ್ನಗಳ ಮೌಲ್ಯವರ್ಧನೆ, ಸರ್ಕಾರಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು
–ಜೆ. ಗುಣವಂತ,ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT