ಶನಿವಾರ, ಜೂನ್ 19, 2021
21 °C
ಸುರೇಖಾ ಮುರಳೀಧರ್ ಉಪ ಮೇಯರ್ ಸ್ಥಾನಕ್ಕೆ ಆಯ್ಕೆ

ಶಿವಮೊಗ್ಗ: ಸುವರ್ಣಾ ಶಂಕರ್‌ಗೆ ಪಾಲಿಕೆ ಮೇಯರ್ ಗಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸುವರ್ಣ ಶಂಕರ್ ಮೇಯರ್, ಸುರೇಖಾ ಮುರಳೀಧರ್ ಉಪ ಮೇಯರ್ ಸ್ಥಾನಕ್ಕೆ ಆಯ್ಕೆಯಾದರು.

ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸುವರ್ಣ ಶಂಕರ್‌, ಕಾಂಗ್ರೆಸ್‌ನಿಂದ ಯಮುನಾ ರಂಗೇಗೌಡ ಕಣಕ್ಕೆ ಇಳಿದಿದ್ದರು. ಸುವರ್ಣ ಶಂಕರ್ 26 ಮತಗಳನ್ನು ಪಡೆದು ವಿಜಯಮಾಲೆ ಧರಿಸಿದರೆ, ಯಮುನಾ ರಂಗೇಗೌಡ 12 ಮತಗಳನ್ನು ಪಡೆದು ಪರಾಭವಗೊಂಡರು.

ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸುರೇಖಾ ಮುರಳೀಧರ್, ಕಾಂಗ್ರೆಸ್ ನಿಂದ ಮೆಹಕ್ ಶರೀಫ್ ಸ್ಪರ್ಧಿಸಿದ್ದರು. ಸುರೇಖಾ 26 ಪತಗಳನ್ನು ಪಡೆದ ಸುರೇಖಾ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. 12 ಮತಗಳನ್ನು ಪಡೆದ ಮೆಹಕ್‌ ಪರಾಭವಗೊಂಡರು.

ಮೇಯರ್ ಸ್ಥಾನ ಬಿಸಿಎಂ ‘ಬಿ’ ವರ್ಗದ ಮಹಿಳೆಗೆ, ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿತ್ತು.  35 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿಯ 23 (ಮೂವರು ಪಕ್ಷೇತರರು ಸೇರಿ), ಕಾಂಗ್ರೆಸ್‌ನ 8 (ಒಬ್ಬರು ಪಕ್ಷೇತರರು ಸೇರಿ), ಜೆಡಿಎಸ್‌ನ 2 ಎಸ್‌ಟಿಪಿಐನ ಒಬ್ಬರು ಇದ್ದಾರೆ. ಬಿಜೆಪೇತರ ಎಲ್ಲ ಪಕ್ಷಗಳೂ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿದ್ದವು.

ಒಬ್ಬರು ಸಂಸದರು (ಬಿಜೆಪಿ), ಇಬ್ಬರು ಶಾಸಕರು (ಬಿಜೆಪಿ), ವಿಧಾನ ಪರಿಷತ್‌ನ ಮೂವರು ಸದಸ್ಯರು (ಇಬ್ಬರು ಬಿಜೆಪಿ, ಒಬ್ಬರು ಕಾಂಗ್ರೆಸ್‌) ಸೇರಿ ಒಟ್ಟು 41 ಸದಸ್ಯರು ಮತದಾನದ ಹಕ್ಕು ಹೊಂದಿದ್ದರು. ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಅಶೋಕ್‌ ನಾಯ್ಕ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಹಾಜರಿದ್ದರು. ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಆಯನೂರು ಮಂಜುನಾಥ್ ಗೃರುಹಾಜರಾಗಿದ್ದರು.

ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ವಿ.ಪ್ರಸಾದ್ ಚುನಾವಣಾಧಿಕಾರಿ ಕಾರ್ಯನಿರ್ವಹಿಸಿದರು.

ಸ್ಥಾಯಿ ಸಮಿತಿ; ಕಾಂಗ್ರೆಸ್ ಅಸಮಾಧಾನ: ನಗರಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಲೋಪ ನಡೆದಿದೆ ಎಂದು ಕಾಂಗ್ರೆಸ್, ಜೆಡಿಎಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಪಾಲಿಕೆ ಸಭಾಂಗಣದಲ್ಲಿ 4 ಸ್ಥಾಯಿ ಸಮಿತಿ ಚುನಾವಣೆಗೆ ಬಿಜೆಪಿ ಸದಸ್ಯರು ನಿಗದಿತ ಸಮಯ ಮೀರಿದ ಬಳಿಕ ನಾಮಪತ್ರ ಸಲ್ಲಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬೆಳಿಗ್ಗೆ 9.30ರ ಒಳಗೆ ನಾಮಪತ್ರ ಸಲ್ಲಿಸಲು ಅವಕಾಶವಿತ್ತು. ನಾಮಪತ್ರ ಸಲ್ಲಿಕೆ ಅವಧಿ ಮುಗಿದ ಬಳಿಕ 4 ಸ್ಥಾಯಿ ಸಮಿತಿಗಳಿಗೆ ಬಿಜೆಪಿ ಸದಸ್ಯರು ನಾಮಪತ್ರ ಸಲ್ಲಿಸಿದ್ದಾರೆ.  ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಕಾರ್ಯಕರ್ತರನ್ನೂ ಸಭಾಂಗಣದ ಒಳಗೆ ಬಿಡಲಾಗಿದೆ ಎಂದು ದೂರಿದರು.

ಆತಂಕ ಸೃಷ್ಟಿಸಿದ್ದ ಜಾತಿ ಪ್ರಮಾಣ ಪತ್ರ: ನಗರ ಪಾಲಿಕೆ ಮೇಯರ್‌ ಸ್ಥಾನದ ಆಕಾಂಕ್ಷಿಗಳಾಗಿದ್ದ ಸುವರ್ಣಾ ಶಂಕರ್ ಮತ್ತು ಅನಿತಾ ರವಿಶಂಕರ್ ಅವರ ಜಾತಿ ಪ್ರಮಾಣಪತ್ರದ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಸಿಂಧುತ್ವ ಪ್ರಶ್ನಿಸಿ ಕೆಲವರು ಉಪ ವಿಭಾಗಾಧಿಕಾರಿಗೆ ದೂರು ನೀಡಿದ್ದರು. ಸುವರ್ಣಾ ಶಂಕರ್ ಜಾತಿ ಮೀಸಲಾತಿ ಅಡಿ ಬರುವುದಿಲ್ಲ. ಅನಿತಾ ರವಿಶಂಕರ್ ಎರಡು ವರ್ಷಗಳ ಹಿಂದೆಯೇ ಜಾತಿ ಪ್ರಮಾಣಪತ್ರ ಪಡೆದುಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಸುವರ್ಣ ಅವರ ಪ್ರಕರಣದಲ್ಲಿ ಹೈಕೋರ್ಟ್‌ ತಡೆ ನೀಡಿದರೆ, ಅನಿತಾ ಅವರ ವಿರುದ್ಧದ ಅರ್ಜಿಯನ್ನು ಉಪ ವಿಭಾಗಾಧಿಕಾರಿ ತರಿಸ್ಕರಿಸಿದ್ದರು. ಈ ಎಲ್ಲ ಗೊಂದಲಗಳ ಮಧ್ಯೆ ಬಿಜೆಪಿ ಸದಸ್ಯರು ಮೈಸೂರಿಗೆ ಪ್ರವಾಸಕ್ಕೆ ತೆರಳಿದ್ದರು. ಬುಧವಾರ ರಾತ್ರಿ ಶಿವಮೊಗ್ಗಕ್ಕೆ ಮರಳಿದ ನಂತರ ಕಣಕ್ಕೆ ಇಳಿಯಲು ಜಿಲ್ಲಾ ವರಿಷ್ಠರು ಸುವರ್ಣಾ ಶಂಕರ್ ಅವರಿಗೆ ಹಸಿರು ನಿಶಾನೆ ತೋರಿದ್ದರು.

ಸಂಭ್ರಮಾಚಾರಣೆ: ಮೇಯರ್ ಉಪ ಮೇಯರ್ ಆಯ್ಕೆಯ ನಂತರ  ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು