ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಬಿ.ಇಡಿ: 5 ತಿಂಗಳಾದರೂ ಬಾರದ ಫಲಿತಾಂಶ, ಆತಂಕ!

ತಾಂತ್ರಿಕ ಸಮಸ್ಯೆ; ಪ್ರಶಿಕ್ಷಣಾರ್ಥಿಗಳ ಭವಿಷ್ಯ ಅತಂತ್ರ
Published 8 ಜೂನ್ 2024, 1:20 IST
Last Updated 8 ಜೂನ್ 2024, 1:20 IST
ಅಕ್ಷರ ಗಾತ್ರ

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ 17 ಬಿ.ಇಡಿ ಕಾಲೇಜುಗಳ 911 ಪ್ರ–ಶಿಕ್ಷಣಾರ್ಥಿಗಳು 4ನೇ ಸೆಮಿಸ್ಟರ್ ಪರೀಕ್ಷೆಯನ್ನು ಬರೆದು 5 ತಿಂಗಳೇ ಕಳೆದಿದ್ದರೂ, ಇನ್ನೂ ಫಲಿತಾಂಶ ಬಾರದ ಕಾರಣ ಪರೀಕ್ಷಾರ್ಥಿಗಳ ಭವಿಷ್ಯ ಅತಂತ್ರಕ್ಕೀಡಾಗಿದೆ.

2022–23ನೇ ಸಾಲಿನ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಅಂತಿಮ ಸೆಮಿಸ್ಟರ್‌ನ ಪರೀಕ್ಷೆಗಳು ಕಳೆದ ಜನವರಿ 10ರಂದು ಮುಕ್ತಾಯವಾಗಿದೆ. ಆದರೆ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.

ಈ ಮಧ್ಯೆ ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಕಳೆದ ಮೇ 30ರಂದು ಅರ್ಜಿ ಕರೆದಿದೆ. ಬಿ.ಇಡಿ ಮುಗಿಸಿದರೂ ಫಲಿತಾಂಶ ಬಾರದೇ, ಅಂಕಪಟ್ಟಿ ಸಿಗದೇ ಹುದ್ದೆಗೆ ಅರ್ಜಿ ಹಾಕಲು ಸಾಧ್ಯವಿಲ್ಲ. ಇನ್ನೊಂದೆಡೆ ಶೈಕ್ಷಣಿಕ ವರ್ಷ ಆರಂಭವಾಗಿದೆ. ‘ಖಾಸಗಿ ಶಾಲೆಗಳಲ್ಲಿ ನೇಮಕಾತಿಗೆ ಅರ್ಜಿ ಕರೆದರೂ ನಮಗೆ ಹಾಕಲು ಆಗುತ್ತಿಲ್ಲ. ಇದು ನನ್ನಂತೆಯೇ ನೌಕರಿ ನಿರೀಕ್ಷೆಯಲ್ಲಿರುವ ಎಲ್ಲರಿಗೂ ಆಗಿರುವ ತೊಂದರೆ’ ಎಂದು ಪ್ರಶಿಕ್ಷಣಾರ್ಥಿ ಶಿವಮೊಗ್ಗದ ಕೆ.ವಿ.ಲೇಖನ ಅಳಲು ತೋಡಿಕೊಳ್ಳುತ್ತಾರೆ.

ನೌಕರಿಗೆ ಅರ್ಜಿ ಹಾಕಲಷ್ಟೇ ಅಲ್ಲ, ಸ್ನಾತಕೋತ್ತರ (ಎಂ.ಇಡಿ) ಪದವಿ ಸೇರ್ಪಡೆ ಹಾಗೂ ಬಿ.ಇಡಿ ಕಾಲೇಜುಗಳಿಗೆ ಹೊಸ ಶೈಕ್ಷಣಿಕ ವರ್ಷಕ್ಕೆ ವಿಶ್ವವಿದ್ಯಾಲಯದಿಂದ ಸಂಯೋಜನೆ ನೀಡಲು ಫಲಿತಾಂಶ ಬಾರದಿರುವುದು ಅಡ್ಡಿಯಾಗಿದೆ. ಸಂಯೋಜನೆ ಸಿಗದೇ ಬಿ.ಇಡಿ ಕೋರ್ಸ್‌ಗೆ ಹೊಸದಾಗಿ ದಾಖಲಾತಿ ಪ್ರಕ್ರಿಯೆಯೂ ಸಾಧ್ಯವಾಗಿಲ್ಲ. 

ತಾಂತ್ರಿಕ ತೊಂದರೆ:

ಉನ್ನತ ಶಿಕ್ಷಣ ಇಲಾಖೆಯ ಯುಯುಸಿಎಂಎಸ್‌ (University Unified collegiate administration system) ವ್ಯವಸ್ಥೆಯಡಿ ವಿಶ್ವವಿದ್ಯಾಲಯದ ಪದವಿಗಳ ಫಲಿತಾಂಶ, ರ‍್ಯಾಂಕ್‌ ಘೋಷಣೆ ಹಾಗೂ ಅಂಕಪಟ್ಟಿ ವಿತರಣೆ ವ್ಯವಸ್ಥೆ ಅರಂಭಿಸಲಾಗಿದೆ.

ಅಂಕಗಳನ್ನು ಗ್ರೇಡ್‌ ವ್ಯವಸ್ಥೆಗೆ ಪರಿವರ್ತಿಸುವಲ್ಲಿ ತಂತ್ರಾಂಶದಲ್ಲಿ ಎದುರಾದ ತಾಂತ್ರಿಕ ತೊಂದರೆ ಸಮಸ್ಯೆಗೆ ಕಾರಣ ಎಂದು ವಿಶ್ವವಿದ್ಯಾಲಯದ ಮೂಲಗಳು ಹೇಳುತ್ತವೆ. ತ್ವರಿತವಾಗಿ ಫಲಿತಾಂಶ ನೀಡಬೇಕೆಂಬ ಮನವಿಗೂ ಸ್ಪಂದಿಸಿಲ್ಲ. ಜೊತೆಗೆ ಕೆಲವು ಕಾಲೇಜುಗಳ ಪ್ರಾಚಾರ್ಯರು ವಿದ್ಯಾರ್ಥಿಗಳಿಗೆ ಆಂತರಿಕ ಅಂಕ ಹಾಕಲು ಮಾಡಿದ ವಿಳಂಬ ಹಾಗೂ ತಪ್ಪುಗಳೂ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.

ಯುಯುಸಿಎಂಎಸ್‌ ವ್ಯವಸ್ಥೆಯಿಂದ ಬರೀ ಬಿ.ಇಡಿ ಕೋರ್ಸ್‌ನ ಪರೀಕ್ಷೆ ಫಲಿತಾಂಶಕ್ಕೆ ತೊಂದರೆ ಆಗಿಲ್ಲ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೂರು ವರ್ಷಗಳ ಹಿಂದೆ ಪರೀಕ್ಷೆ ಬರೆದವರ ಫಲಿತಾಂಶವೂ ಈಚೆಗೆ ಪ್ರಕಟವಾಗಿದೆ. ಅದಕ್ಕೂ ವಿ.ವಿ. ಪರೀಕ್ಷಾಂಗ ವಿಭಾಗದಿಂದ ಸತತ ಒತ್ತಡ ಹಾಕಿ ಕೆಲಸ ಮಾಡಿಸಿಕೊಳ್ಳಲಾಗಿದೆ.

‘ಪ್ರಶಿಕ್ಷಣಾರ್ಥಿಗಳು, ವಿದ್ಯಾರ್ಥಿ ಸಂಘಟನೆಯವರು ಫಲಿತಾಂಶ ಕೇಳಿಕೊಂಡು ನಮ್ಮ ಬಳಿ ಬರುತ್ತಿದ್ದಾರೆ. ಸಂಕಷ್ಟ ತೋಡಿಕೊಳ್ಳುತ್ತಿದ್ದಾರೆ. ಯುಯುಸಿಎಂಎಸ್ ವಿಭಾಗಕ್ಕೆ ಕರೆ ಮಾಡಿದರೆ ಅಲ್ಲಿ ಯಾರೂ ಸ್ವೀಕರಿಸುವುದಿಲ್ಲ. ಕುವೆಂಪು ವಿಶ್ವವಿದ್ಯಾಲಯ ಮಾತ್ರವಲ್ಲ ರಾಜ್ಯದ ಎಲ್ಲ ವಿ.ವಿಗಳ ಬಿ.ಇಡಿ ವಿದ್ಯಾರ್ಥಿಗಳಿಗೂ ಇದೇ ತೊಂದರೆ ಆಗಿದೆ’ ಎಂದು ಕುವೆಂಪು ವಿ.ವಿ ಪರೀಕ್ಷಾಂಗ ವಿಭಾಗದ ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT