ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ಕಿಚ್ಚು ಹಚ್ಚಿದ ಈಸೂರು: ಬಿ.ವೈ. ರಾಘವೇಂದ್ರ

ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ಉದ್ಘಾಟಿಸಿದ ಸಂಸದ
Last Updated 29 ಮೇ 2022, 4:44 IST
ಅಕ್ಷರ ಗಾತ್ರ

ಈಸೂರು (ಶಿಕಾರಿಪುರ): ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ದೇಶಕ್ಕೆ ಹಚ್ಚಿದ ಗ್ರಾಮ ಈಸೂರು ಎಂದು ಸಂಸದ ಬಿ.ವೈ. ರಾಘವೇಂದ್ರ ಶ್ಲಾಘಿಸಿದರು.

ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಈಸೂರು ಗ್ರಾಮ ಪಂಚಾಯಿತಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆಯೋಜಿಸಿದ್ದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಜಾದಿ ಕಾ ಅಮೃತ ಮಹೋತ್ಸವ್‌ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರರ ನೆಲ ಈಸೂರಿನಲ್ಲಿ ಕಾರ್ಯಕ್ರಮ ನಡೆದಿದೆ. ದೇಶಕೋಸ್ಕರ ಜೀವ ತ್ಯಾಗ ಮಾಡಿದ ಹೋರಾಟಗಾರ ಪುಣ್ಯಭೂಮಿ ಈಸೂರು. ದೇಶದ ಸ್ವಾತಂತ್ರ್ಯ ಹೋರಾಟದ ಗ್ರಾಮಗಳ ಪಟ್ಟಿಯಲ್ಲಿ ಈಸೂರು ಸೇರ್ಪಡೆಯಾಗಿದೆ. ಈಸೂರಿನ ಹೋರಾಟಗಾರರು ‘ಏಸೂರು ಕೊಟ್ಟರೂ ಈಸೂರು ಬಿಡೆವು’ ಎಂದು ಬ್ರಿಟಿಷರ ವಿರುದ್ಧ ಸೆಟೆದು ನಿಂತು, ಬ್ರಿಟಿಷರ ಗುಂಡೇಟಿಗೆ ಬಲಿಯಾಗಿ ಹುತಾತ್ಮರಾದರು. ಈ ಹೋರಾಟಗಾರರ ಸ್ಮರಣೆ ಮಾಡಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಗ್ರಾಮ ಈಸೂರು ಎಂದು ಶ್ಲಾಘಿಸಿದರು.

‘ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಪ್ರತಿಫಲವಾಗಿ ಪ್ರಸ್ತುತ ನಾವು ನೆಮ್ಮದಿ ಜೀವನ ನಡೆಸುತ್ತಿದ್ದೇವೆ. ಈ ಹೋರಾಟಗಾರರು ನಮ್ಮ ಯುವ ಪೀಳಿಗೆಗೆ ಪ್ರೇರಣೆಯಾಗಬೇಕು. ಜಾತಿ, ಪಕ್ಷರಹಿತವಾಗಿ ದೇಶಕ್ಕಾಗಿ ಹೋರಾಡುವವರಿಗೆ ಬೆಂಬಲ ನೀಡಬೇಕು. ದೇಶದ ಹಲವು ಸಮಸ್ಯೆಗಳನ್ನು ಪ್ರಧಾನಿ ನರೇಂದ್ರ ಮೋದಿ ಬಗೆಹರಿಸಿದ್ದಾರೆ. ಈಸೂರು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಕಾಮಗಾರಿ ₹ 5 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆತರಲು ಪ್ರಯತ್ನ ನಡೆಸಲಾಗುವುದು’ ಎಂದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ‘ಅನೇಕ ರಾಜರು, ರಾಣಿಯರು, ಗಾಂಧೀಜಿ, ಸುಭಾಷ್ ಚಂದ್ರಬೋಸ್, ಭಗತ್ ಸಿಂಗ್ ಸೇರಿ ಹಲವು ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ಜೀವ ತ್ಯಾಗ ಮಾಡಿದ್ದಾರೆ. ಯುವಪೀಳಿಗೆ ಸಂವಿಧಾನ ನಮಗೆ ನೀಡಿರುವ ಹಕ್ಕುಗಳು ಮತ್ತು ಕರ್ತವ್ಯದ ಬಗ್ಗೆ ಜವಾಬ್ದಾರಿ ಹೊಂದಬೇಕು’ ಎಂದು ಸಲಹೆ ನೀಡಿದರು.

ಉಪನ್ಯಾಸಕ ಪ್ರಕಾಶ್ ಮಲ್ಪೆ, ‘ಕರ್ನಾಟದಕ ಕಲಿಗಳು ರಾಷ್ಟ್ರಕ್ಕೆ ಮಾದರಿಯಾಗುವ ರೀತಿ ಹೋರಾಟ ನಡೆಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರಕ್ಕೆ ಪ್ರೇರಣೆ ನೀಡಿದವರು ಈಸೂರು ಗ್ರಾಮದ ಹೋರಾಟಗಾರರು’ ಎಂದು ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎನ್. ವೈಶಾಲಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ನಿರ್ದೇಶಕ ಬಿ.ಡಿ. ಭೂಕಾಂತ್, ಸ್ವಾತಂತ್ರ್ಯ ಹೋರಾಟಗಾರ ದೇವೇಂದ್ರಪ್ಪ, ತಹಶೀಲ್ದಾರ್ ಎಂ.ಪಿ. ಕವಿರಾಜ್, ತಾಲ್ಲೂಕು ಪಂಚಾಯಿತಿ ಇಒ ಪರಮೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಕಿರಣ್ ಕುಮಾರ್ ಹರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶರ್ಮಿಳಾಬಾನು, ಬಿಜೆಪಿ ಮುಖಂಡರಾದ ಚುರ್ಚಿಗುಂಡಿ ರುದ್ರಮುನಿ, ನಿಂಬೆಗೊಂದಿ ಸಿದ್ದಲಿಂಗಪ್ಪ, ರುದ್ರಪಯ್ಯ, ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT