ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತ ವ್ಯಕ್ತಿಯ ಹೆಸರಲ್ಲಿ ಇನ್ನೊಬ್ಬನ ಸೃಷ್ಟಿಸಿ ಕ್ರಯಪತ್ರ: ಮೂವರ ವಿರುದ್ಧ ಪ್ರಕರಣ

Last Updated 8 ಸೆಪ್ಟೆಂಬರ್ 2021, 4:08 IST
ಅಕ್ಷರ ಗಾತ್ರ

ಸಾಗರ: ಮರಣ ಹೊಂದಿರುವ ವ್ಯಕ್ತಿಯ ಹೆಸರಿನಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಸೃಷ್ಟಿಸಿ ಕ್ರಯಪತ್ರ ನೋಂದಣಿ ಮಾಡಿಸುವ ಮೂಲಕ ವಂಚನೆ ನಡೆಸಿದ ಆರೋಪದ ಮೇಲೆ ಇಲ್ಲಿನ ನಗರ ಠಾಣೆ ಪೊಲೀಸರು ಮೂವರ ವಿರುದ್ಧ ಸೋಮವಾರ ಮೊಕದ್ದಮೆ ದಾಖಲಿಸಿದ್ದಾರೆ.

ವಕೀಲರಾದ ಎಚ್.ಎನ್.ದಿವಾಕರ್, ಮಂಡಗಳಲೆ ಗ್ರಾಮದ ಈಶ್ವರ, ಗಾಳಿಪುರ ಗ್ರಾಮದ ರಮೇಶ್ ಪ್ರಕರಣದ ಆರೋಪಿಗಳು. ಬಲೆಗಾರು ಗ್ರಾಮದ ರಾಜೇಂದ್ರ ಡಿ.ಎಸ್. ಎಂಬುವವರು ನೀಡಿರುವ ದೂರಿನ ಆಧಾರದ ಮೇಲೆ ಈ ಮೊಕದ್ದಮೆ ದಾಖಲಾಗಿದೆ.

ಸಾಗರದ ಲೋಹಿಯಾ ನಗರದಲ್ಲಿ ಸೊರಬ ತಾಲ್ಲೂಕಿನ ಉಳವಿ ಗ್ರಾಮದ ಕಲೀಲ್ ಸಾಬ್ ಎಂಬುವವರಿಗೆ ಆಶ್ರಯ ನಿವೇಶನ ಮಂಜೂರಾಗಿತ್ತು. ನಂತರ 2007ನೇ ಸಾಲಿನಲ್ಲಿ ಕಲೀಲ್ ಸಾಬ್ ಮೃತರಾದರು. ಆದಾಗ್ಯೂ ಅವರ ಪತ್ನಿ ಆ ನಿವೇಶನದ ಖಾತೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡಿರಲಿಲ್ಲ.

2016ರಲ್ಲಿ ದೂರುದಾರರಾದ ರಾಜೇಂದ್ರ ಅವರಿಗೆ ಆರೋಪಿಗಳು ₹ 6.80 ಲಕ್ಷಕ್ಕೆ ಆ ನಿವೇಶನವನ್ನು ಮಾರಾಟ ಮಾಡಿಸಿದ್ದಾರೆ. ಆ ಹಣವನ್ನು ವಕೀಲರಾದ ಎಚ್.ಎನ್.ದಿವಾಕರ್ ಅವರ ಖಾತೆಗೆ ಜಮಾ ಮಾಡಲಾಗಿದೆ ಎಂದು ದೂರಲಾಗಿದೆ. ಈ ಸಂದರ್ಭದಲ್ಲಿ ಮೃತಪಟ್ಟಿರುವ ಕಲೀಲ್ ಬದಲಿಗೆ ಬೇರೊಬ್ಬ ವ್ಯಕ್ತಿ ಕ್ರಯಪತ್ರ ನೋಂದಣಿಗೆ ಹಾಜರಾಗಿ, ‘ತಾನೇ ಕಲೀಲ್’ ಎಂದು ನಂಬಿಸಿ ವ್ಯವಹಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

2020ರಲ್ಲಿ ರಾಜೇಂದ್ರ ಅವರು ತಾವು ಖರೀದಿಸಿದ ನಿವೇಶನವನ್ನು ಬಲೆಗಾರು ಗ್ರಾಮದ ಸವಿತಾ ಡಿ.ಬಿ. ಎಂಬುವವರಿಗೆ ಮಾರಾಟ ಮಾಡಿದರು. ಈ ನಡುವೆ ನಿವೇಶನದ ಮೂಲ ಮಾಲೀಕರಾದ ಕಲೀಲ್ ಸಾಬ್ ಅವರ ಪತ್ನಿ ಫಾತಿಮಾ ತಮ್ಮ ಪತಿಯ ಹೆಸರಿನಲ್ಲಿದ್ದ ನಿವೇಶನದ ಖಾತೆಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡು ಆ ಸ್ವತ್ತನ್ನು ಕುಸುಮಾ ಭಂಡಾರಿ ಎಂಬುವವರಿಗೆ ಮಾರಾಟ ಮಾಡಿದ್ದಾರೆ.

ಕುಸುಮಾ ಭಂಡಾರಿ ಅವರು ಆ ನಿವೇಶನದಲ್ಲಿ ಮನೆ ನಿರ್ಮಿಸಲು ಮುಂದಾದಾಗ ಸವಿತಾ ಅವರು ಸ್ಥಳಕ್ಕೆ ಬಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಮಗಾರಿ ನಿಲ್ಲಿಸುವಂತೆ ನಗರಸಭೆ ಅಧಿಕಾರಿಗಳು ಸೂಚಿಸಿದ್ದರು. ಕುಸುಮಾ ಭಂಡಾರಿ ಅವರು ಈ ವಿಷಯವನ್ನು ಶಾಸಕ ಎಚ್.ಹಾಲಪ್ಪ ಹರತಾಳು ಅವರ ಗಮನಕ್ಕೆ ತಂದಾಗ ಶಾಸಕರು ನಗರಸಭೆ ಕಚೇರಿಗೆ ಭೇಟಿ ನೀಡಿ ಒಂದೇ ನಿವೇಶನಕ್ಕೆ ಸಂಬಂಧಿಸಿದಂತೆ ಎರಡು ಕ್ರಯಪತ್ರ ನೋಂದಣಿಯಾಗಿರುವ ಬಗ್ಗೆ ಪರಿಶೀಲನೆ ನಡೆಸಿ ತಪ್ಪಿತಸ್ಥರನ್ನು ಕಂಡುಹಿಡಿಯುವ ಉದ್ದೇಶದಿಂದ ಪೊಲೀಸರಿಗೆ ದೂರು ನೀಡುವಂತೆ ಪೌರಾಯುಕ್ತರಿಗೆ ಸೂಚಿಸಿದ್ದರು.

ಇದೀಗ ಸತ್ತಿರುವ ವ್ಯಕ್ತಿ ಬದುಕಿದ್ದಾನೆ ಎಂದು ನಂಬಿಸಿ ಕ್ರಯಪತ್ರ ನೋಂದಣಿ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಥಮ ವರದಿ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT