ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ವರ್ಷಧಾರೆಗೆ ಬೆಳೆಹಾನಿ: ಅನ್ನದಾತನಿಗೆ ವಿಮೆ, ಪರಿಹಾರ ನಿರೀಕ್ಷೆ

Published : 9 ಸೆಪ್ಟೆಂಬರ್ 2024, 6:22 IST
Last Updated : 9 ಸೆಪ್ಟೆಂಬರ್ 2024, 6:22 IST
ಫಾಲೋ ಮಾಡಿ
Comments

ಶಿವಮೊಗ್ಗ: ಮಲೆನಾಡಿನಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಅಡಿಕೆ ಅಲ್ಲದೇ ಆಹಾರ ಬೆಳೆಗಳಾದ ಭತ್ತ, ಮೆಕ್ಕೆಜೋಳ, ಜೋಳ, ರಾಗಿ, ಅಲಸಂದೆ, ತೊಗರಿ, ಹೆಸರು, ಉದ್ದು, ಶೇಂಗಾ ಹಾಗೂ ತರಕಾರಿ ಬೆಳೆಗಳು ತೀವ್ರ ಹಾನಿಗೀಡಾಗಿವೆ.

ಪ್ರಸಕ್ತ ವರ್ಷ ಮುಂಗಾರು ಸಮೃದ್ಧಿಯಾಗಿ ಸುರಿದ ಕಾರಣ ಬಿತ್ತನೆಯೂ ಸಕಾಲಕ್ಕೆ ನಡೆದಿತ್ತು. 47,000 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 74,916 ಹೆಕ್ಟೇರ್‌ನಲ್ಲಿ ಭತ್ತ ಸೇರಿ 1.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 20ಕ್ಕೂ ಅಧಿಕ ಬೆಳೆಗಳ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. 63,760 ಹೆಕ್ಟೇರ್ ಭತ್ತ, 44,299 ಹೆಕ್ಟೇರ್ ಮೆಕ್ಕೆಜೋಳ ಸೇರಿ 1,09,344 ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳನ್ನು ಬಿತ್ತಲಾಗಿದೆ. ಜುಲೈ ತಿಂಗಳಲ್ಲಿ ಸುರಿದ ವಿಪರೀತ ಮಳೆಯಿಂದ 5,447 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ.

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ಸಣ್ಣಪುಟ್ಟ ಚೆಕ್ ಡ್ಯಾಂ, ದೊಡ್ಡ ಕೆರೆಗಳು ತುಂಬಿ ಹರಿದವು. ಸಾವಿರಾರು ಹೆಕ್ಟೇರ್ ಕೃಷಿ ಭೂಮಿ ಜಲಾವೃತವಾಗಿತ್ತು. ಇದರಿಂದಲೂ ಬೆಳೆ ಹಾನಿ ಸಂಭವಿಸಿ ರೈತರಿಗೆ ಸಂಕಷ್ಟ ತಂದಿದೆ.

ಜಿಲ್ಲೆಯಲ್ಲಿ 1,770 ಹೆಕ್ಟೇರ್‌ನಲ್ಲಿ ಭತ್ತದ ಬೆಳೆ, ಮೆಕ್ಕೆಜೋಳ 3,676 ಹೆಕ್ಟೇರ್‌ನಷ್ಟು ಹಾನಿಗೀಡಾಗಿದೆ. ಇದರಲ್ಲಿ ಸಾಗರ, ಸೊರಬ ಮತ್ತು ಶಿಕಾರಿಪುರ ತಾಲ್ಲೂಕಿನಲ್ಲೇ ಅತ್ಯಧಿಕ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಸಾಗರದಲ್ಲಿ 740 ಹೆಕ್ಟೇರ್ ಭತ್ತ, 298 ಹೆಕ್ಟೇರ್ ಮೆಕ್ಕೆಜೋಳ, ಶಿಕಾರಿಪುರ ತಾಲೂಕಿನಲ್ಲಿ 1,350 ಹೆಕ್ಟೇರ್ ಮೆಕ್ಕೆಜೋಳ, ಸೊರಬ ತಾಲೂಕಿನಲ್ಲಿ 1,022 ಹೆಕ್ಟೇರ್ ಭತ್ತ, 2,028 ಹೆಕ್ಟೇರ್ ಮೆಕ್ಕೆಜೋಳ ಬೆಳೆ ಹಾನಿಗೀಡಾಗಿದೆ. ಹೊಸನಗರ, ತೀರ್ಥಹಳ್ಳಿ ತಾಲ್ಲೂಕುಗಳಲ್ಲೂ ಭತ್ತ ಹಾನಿಗೀಡಾಗಿದೆ. ಶಿವಮೊಗ್ಗ, ಭದ್ರಾವತಿ ತಾಲ್ಲೂಕುಗಳಲ್ಲಿ ಬೆಳೆ ಹಾನಿ ಕುರಿತು ವರದಿಯಾಗಿಲ್ಲ.

ಅತಿವೃಷ್ಟಿಯಿಂದ ಮೆಕ್ಕೆಜೋಳ ಸೇರಿ ಹಲವು ಬೆಳೆಗಳು ಹಾಳಾಗಿದ್ದು, ವಿಮೆಯ ನಿರೀಕ್ಷೆಯಲ್ಲಿದ್ದಾರೆ.

ಶಿಕಾರಿಪುರ ತಾಲ್ಲೂಕಿನ ಕೃಷಿಭೂಮಿಯಲ್ಲಿ ಮೆಕ್ಕೆಜೋಳ ಬೆಳೆ ಹಾನಿ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿರುವುದು.
ಶಿಕಾರಿಪುರ ತಾಲ್ಲೂಕಿನ ಕೃಷಿಭೂಮಿಯಲ್ಲಿ ಮೆಕ್ಕೆಜೋಳ ಬೆಳೆ ಹಾನಿ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿರುವುದು.
ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಭತ್ತ ಮೆಕ್ಕೆಜೋಳ ಸೇರಿ 5447 ಹೆಕ್ಟೇರ್ ಪ್ರದೇಶದಲ್ಲಿನ ಆಹಾರ ಬೆಳೆಗೆ ಹಾನಿಯಾಗಿದೆ. ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಈಗಾಗಲೇ ಬೆಳೆ ಹಾನಿ ವರದಿ ಸಲ್ಲಿಸಲಾಗಿದೆ.
ಎಂ.ಕಿರಣ್‌ಕುಮಾರ್ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಮೊಗ್ಗ
ಬೆಳೆ ಹಾನಿ ವಿವರ... ತಾಲ್ಲೂಕು; ಭತ್ತ; ಮೆಕ್ಕೆಜೋಳ (ಹೆಕ್ಟೇರ್‌ನಲ್ಲಿ) ಸಾಗರ; 740; 298ಶಿಕಾರಿಪುರ; ಶೂನ್ಯ; 1350ಸೊರಬ; 1022; 2022ಒಟ್ಟು; 1770; 3676

ಭತ್ತಕ್ಕೆ ವ್ಯಾಪಕ ಹಾನಿ ಎಂ. ರಾಘವೇಂದ್ರ

ಸಾಗರ: ತಾಲ್ಲೂಕಿನಲ್ಲಿ ಈ ವರ್ಷ ಜುಲೈ ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಕಾರಣ ಪ್ರಮುಖ ಆಹಾರ ಬೆಳೆಗಳಾದ ಭತ್ತ ಮೆಕ್ಕೆಜೋಳಕ್ಕೆ ವ್ಯಾಪಕ ಹಾನಿ ಉಂಟಾಗಿದೆ. ಕೃಷಿ ಇಲಾಖೆಯ ಮೂಲಗಳ ಪ್ರಕಾರ ತಾಲ್ಲೂಕಿನಲ್ಲಿ 1850 ಎಕರೆ ಭತ್ತ 745 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಗೆ ಹಾನಿ ಸಂಭವಿಸಿದೆ. ಈ ಸಂಬಂಧ ಸಮೀಕ್ಷೆ ನಡೆಸಿರುವ ಇಲಾಖೆ ಜಿಲ್ಲಾ ಆಡಳಿತಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ. ತಾಳಗುಪ್ಪ ಹೋಬಳಿಯಲ್ಲಿ ವರದಾ ನದಿ ಪ್ರವಾಹದಿಂದ ಅಂದಾಜು 1200 ಎಕರೆ ಭತ್ತದ ಗದ್ದೆ ಜಲಾವೃತಗೊಂಡಿತ್ತು. ಭತ್ತದ ಸಸಿ ಹಲವು ದಿನಗಳ ಕಾಲ ನೀರಿನಲ್ಲಿ ಮುಳುಗಿದ್ದರೂ ತಾಳಿಕೊಳ್ಳುವ ಗುಣ ಹೊಂದಿರುವ ನಾಟಿ ತಳಿಗಳನ್ನು ಈ ಭಾಗದ ರೈತರು ಬಳಸುತ್ತಾದ್ದಾರೂ ಮಳೆಯ ರಭಸ ನಷ್ಟದ ಪ್ರಮಾಣ ಹೆಚ್ಚುವಂತೆ ಮಾಡಿದೆ. ಆನಂದಪುರಂ ಕಸಬಾ ಹೋಬಳಿಯ ಖುಷ್ಕಿ ಭೂಮಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು ಈ ಬೆಳೆಗಾರರಿಗೆ ಬೆಳೆ ನಷ್ಟದ ಬಿಸಿ ಜೋರಾಗಿಯೇ ತಟ್ಟಿದೆ. ವಾಣಿಜ್ಯ ಬೆಳೆಯಾದ ಅಡಿಕೆಗೆ ಕೊಡುವಷ್ಟು ಮಹತ್ವವನ್ನು ಇತರೆ ಬೆಳೆಗಳ ರೋಗ ನಿರ್ವಹಣೆ ಕೀಟಬಾಧೆ ತಡೆಯುವಲ್ಲಿ ಭತ್ತ ಜೋಳದ ಬೆಳೆಗಾರರು ನೀಡದೆ ಇರುವುದು ಕೂಡ ಬೆಳೆ ನಷ್ಟದ ಪ್ರಮಾಣ ಹೆಚ್ಚಾಗಲು ಕಾರಣ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. ತಾಲ್ಲೂಕಿನ ಕೆಲವೆಡೆ ಭತ್ತದ ಬೆಳೆಯ ಮರುನಾಟಿ ಮಾಡಲು ಇನ್ನೂ ಅವಕಾಶವಿದೆ ಎನ್ನುವುದು ಸಮಾಧಾನದ ಸಂಗತಿಯಾಗಿದೆ. ನಷ್ಟ ಅನುಭವಿಸಿರುವ ಅನ್ನದಾತರು ಸರ್ಕಾರದಿಂದ ಶೀಘ್ರ ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ಮೆಕ್ಕೆಜೋಳ ಇಳುವರಿ ಇಲ್ಲದೇ ಆತಂಕ ಎಚ್‌.ಎಸ್‌.ರಘು

ಶಿಕಾರಿಪುರ: ತಾಲ್ಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ ಮೆಕ್ಕೆಜೋಳ ಬೆಳೆದ ರೈತರು ಇಳುವರಿ ಇಲ್ಲದೇ ನಷ್ಟಕ್ಕೀಡಾಗುವ ಆತಂಕದಲ್ಲಿದ್ದಾರೆ. ತಾಲ್ಲೂಕಿನಲ್ಲಿ ಅಂದಾಜು 19000 ಹೆಕ್ಟೇರ್ ಭೂಮಿಯಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತ ಎರಡು ಪಟ್ಟು ಹೆಚ್ಚು ಮಳೆಯಾಗಿದ್ದು ಮೆಕ್ಕೆಜೋಳ ಬೆಳೆ ಹಾನಿಯಾಗಿದೆ. ಮೆಕ್ಕೆಜೋಳ ಬೆಳೆದ ಭೂಮಿಯಲ್ಲಿ ಮಳೆ ನೀರು ನಿಂತ ಕಾರಣ ಭೂಮಿ ಜೌಗು ಆಗುತ್ತಿದ್ದು ಮೆಕ್ಕೆಜೋಳ ಬೆಳವಣಿಗೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತಿದೆ. ರೈತರು ಮೆಕ್ಕೆಜೋಳ ಬಿತ್ತನೆಮಾಡಿ ಮೂರು ತಿಂಗಳು ಕಳೆಯುತ್ತಿದೆ. ಆದರೆ ಕೆಲವೆಡೆ ಮೆಕ್ಕೆಜೋಳದ ಬೆಳೆ ನಾಲ್ಕು ಅಡಿ ಎತ್ತರ ಬೆಳೆದರೂ ತೆನೆ ಹುಟ್ಟಿಲ್ಲ. ಕೆಲವೆಡೆ ಎರಡೂವರೆ ಅಡಿ ಬೆಳೆದು ತೆನೆ ಬಿಟ್ಟಿದೆ. ತೆನೆ ನೋಡಿದಾಗ ಕಾಳು ಕಟ್ಟದಿರುವುದು ಗೊತ್ತಾಗುತ್ತಿದೆ. ಮೆಕ್ಕೆಜೋಳ ಇಳುವರಿ ಕಡಿಮೆಯಾಗಿರುವುದು ರೈತರಲ್ಲಿ ಆತಂಕ ಮೂಡಿಸಿದ್ದು ಸರ್ಕಾರ ಮೆಕ್ಕೆಜೋಳ ಬೆಳೆ ಹಾನಿಗೆ ಪರಿಹಾರ ನೀಡಬೇಕು ಎಂಬುದು ರೈತ ಸಮುದಾಯದ ಮನವಿಯಾಗಿದೆ. ಮೆಕ್ಕೆಜೋಳ ಬೆಳೆ ಹಾನಿ ಬಗ್ಗೆ ಕಂದಾಯ ಹಾಗೂ ಕೃಷಿ ಇಲಾಖೆಗಳ ಜಂಟಿ ಸಮೀಕ್ಷೆ ನಡೆದಿದೆ. ಜಿಲ್ಲಾಧಿಕಾರಿ ಆದೇಶದಂತೆ ಅಂದಾಜು 4000 ಹೆಕ್ಟೇರ್ ಭೂಮಿಯಲ್ಲಿ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿದೆ. ಮೆಕ್ಕೆಜೋಳದ ಜತೆ ವಾಣಿಜ್ಯ ಬೆಳೆಗಳಾದ ಶುಂಠಿ ಹಾಗೂ ಅಡಿಕೆ ಬೆಳೆಗೂ ಹಾನಿಯಾಗಿದೆ. ಅಡಿಕೆ ಬೆಳೆಗೆ ಕೊಳೆರೋಗ ಹರಡುತ್ತಿದ್ದು  ಬೆಳೆಗಾರರು ಆತಂಕದಲ್ಲಿದ್ದಾರೆ.

ಮೆಕ್ಕೆಜೋಳ ಬೆಳೆ ಹಾನಿ ಬಗ್ಗೆ ಕೃಷಿ ಇಲಾಖೆಯೊಂದಿಗೆ ಕಂದಾಯ ಇಲಾಖೆ  ಜಂಟಿ ಸಮೀಕ್ಷೆ ನಡೆಸುತ್ತಿದೆ. ಸಮೀಕ್ಷೆ  ವರದಿಯನ್ನು ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಪ್ರಕಟಿಸಲಾಗುತ್ತದೆ. ರೈತರು ಬೆಳೆ ಸಮೀಕ್ಷೆ ಪಟ್ಟಿ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ನಂತರ ಸರ್ಕಾರಕ್ಕೆ ಬೆಳೆ ಹಾನಿ ವರದಿ ತಲುಪಲಿದೆ
ಮಲ್ಲೇಶಪ್ಪ ಬಿ. ಪೂಜಾರ್ ತಹಶೀಲ್ದಾರ್ ಶಿಕಾರಿಪುರ

20 ಎಕರೆ ಭತ್ತ ಬೆಳೆ ಹಾನಿ ರವಿ ನಾಗರಕೊಡಿಗೆ

ಹೊಸನಗರ: ತಾಲ್ಲೂಕಿನಲ್ಲಿ ಸುರಿದ ಬಾರೀ ಮಳೆಗೆ ಒಟ್ಟು 20 ಎಕರೆಗೂ ಹೆಚ್ಚು ಭತ್ತದ ಬೆಳೆ ಹಾನಿಯಾಗಿದೆ. ಜೂನ್ ಅಂತ್ಯದಿಂದ ಮಳೆ ಬಿರುಸಾಗಿದ್ದು ಕೃಷಿ ಚಟುವಟಿಕೆಗೆ ಬಾರಿ ಹಿನ್ನೆಡೆಯಾಗಿತ್ತು. ಮೊದಲು ಭಾರಿ ಮಳೆಯಿಂದ ಸಸಿ ನೀರು ಪಾಲಾಯಿತು. ನಂತರ ನಾಟಿ ಮಾಡಿದ ರ‍್ಯತರಿಗೆ ಪುಷ್ಯ ಮಳೆಯ ಅಬ್ಬರ ತಲೆಬಿಸಿಯಾಗಿ ಕಾಡಿತು. ನಾಟಿ ಮಾಡಿದ ಗದ್ದೆ ಮೇಲೆ ನೀರು ಹರಿದು ಮಣ್ಣು ಮರಳು ಸರಿದು ಬೆಳೆ ಕೊಚ್ಚಿ ಹೋಗುವಂತಾಯಿತು. ತಾಲ್ಲೂಕಿನಲ್ಲಿ 8500 ಹೆಕ್ಟರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಆಗಸ್ಟ್‌ನಲ್ಲಿ 2820 ಮಿ.ಮೀ ಮಳೆಯಾಗಿದೆ. ಆಗಸ್ಟ್‌ ಅಂತ್ಯದಲ್ಲಿ ಮಳೆಯ ಅಬ್ಬರ ಕಡಿಮೆ ಇರುವ ಕಾರಣ ಹೆಚ್ಚಿನ ಹಾನಿ ಆಗಿಲ್ಲ. ಒಂದೊಮ್ಮೆ ಮಳೆ ಮುಂದುವರೆದಿದ್ದರೆ ಭತ್ತದ ಬೆಳೆಗೆ ಬಾರಿ ಪ್ರಮಾಣದಲ್ಲಿ ಹಾನಿ ಸಂಭವಿಸುತ್ತಿತ್ತು ಎಂದು ಅಂದಾಜಿಸಲಾಗಿದೆ. ಹೊಸನಗರ ತಾಲ್ಲೂಕು ಗುಡ್ಡಗಾಡು ಪ್ರದೇಶ ಹೊಂದಿರುವ ತಾಲ್ಲೂಕು. ಇಲ್ಲಿ ಆಯ್ದ ಪ್ರದೇಶದಲ್ಲಿ ಮಾತ್ರ ಭತ್ತ ಬೆಳೆಯುತ್ತಾರೆ. ಹೆಚ್ಚಿನ ಭತ್ತ ಬೆಳೆಯುವ ಪ್ರದೇಶ ಅಡಿಕೆ ತೋಟಗಳಾಗಿ ಪರಿವರ್ತನೆ ಆದ ಬಳಿಕ ಕೃಷಿಕರು ಊಟಕ್ಕೆ ಸಾಕಾಗುವಷ್ಟು ಭತ್ತ ಬೆಳೆಯುವ ಪರಿಪಾಠ ಅನುಸರಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT