ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಇಲಾಖೆ ನೇಮಕಾತಿ: ಅರಣ್ಯಶಾಸ್ತ್ರ ಓದಿದವರಿಗೆ ಮಾತ್ರ ಅವಕಾಶ ಕೊಡಿ; ಒತ್ತಾಯ

Published 23 ಫೆಬ್ರುವರಿ 2024, 16:24 IST
Last Updated 23 ಫೆಬ್ರುವರಿ 2024, 16:24 IST
ಅಕ್ಷರ ಗಾತ್ರ

ಶಿವಮೊಗ್ಗ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪವಲಯ ಅರಣ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಬಿ.ಎಸ್ಸಿ ಅರಣ್ಯಶಾಸ್ತ್ರ ಪದವಿ ಪಡೆದವರಿಗೆ ಮಾತ್ರ ಮೀಸಲಾಗಿಡಬೇಕು ಎಂದು ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ವಿ.ವಿ.ಯ ಅರಣ್ಯ ಶಾಸ್ತ್ರ ಪದವಿ ವಿದ್ಯಾರ್ಥಿಗಳು ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿ ಶ್ರೀನಿಧಿ, ಅರಣ್ಯ ಇಲಾಖೆಯ ಅಧಿಕಾರಿಗಳ ಹುದ್ದೆಗಳಿಗೆ ಬಿ.ಎಸ್ಸಿ ಅರಣ್ಯಶಾಸ್ತ್ರವಲ್ಲದೇ ಇತರೆ ವಿಜ್ಞಾನ ವಿಭಾಗದ ಪದವಿ ವಿದ್ಯಾರ್ಥಿಗಳು ಅರ್ಜಿ ಹಾಕಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಅರಣ್ಯ ಶಾಸ್ತ್ರ ಪದವಿ ಪಡೆದವರಿಗೆ ಶೇ 50 ರಷ್ಟು ಮಾತ್ರ ಹುದ್ದೆಗಳ ಮೀಸಲಿಟ್ಟಿದೆ. ಇದು ಸಕಾಗುವುದಿಲ್ಲ. ಈ ಎಲ್ಲಾ ಹುದ್ದೆಗಳನ್ನು ಅರಣ್ಯ ಶಾಸ್ತ್ರ ಪದವೀಧರರಿಗೆ ಕೊಡಬೇಕು ಎಂದು ಆಗ್ರಹಿಸಿದರು.

ಈ ಹುದ್ದೆಗಳಿಗೆ ಸಂಬಂಧಿಸಿದ ಸಂಪೂರ್ಣ ಜ್ಞಾನ ಮತ್ತು ತರಬೇತಿ ಅರಣ್ಯಶಾಸ್ತ್ರ ಪದವೀಧರರು ಪಡೆದಿರುತ್ತೇವೆ. ವಿಶೇಷ ಅಧ್ಯಯನ ಮಾಡಿ ಜ್ಞಾನ ಸಂಪಾದನೆ ಮಾಡಿರುತ್ತೇವೆ. ಬೇರೆ ಬೇರೆ ಹುದ್ದೆಗಳಿಗೆ ನೇಮಕ ಮಾಡುವಾಗ ಅದೇ ಹುದ್ದೆಯಲ್ಲಿ ಪದವಿ ಪಡೆದಿರುವವರಿಗೆ ಮಾತ್ರ ಅವಕಾಶ ಸಿಗುತ್ತದೆ. ಆದರೆ ನಮಗೇಕೆ ಹೀಗೆ ಎಂದು ಪ್ರಶ್ನೆ ಮಾಡಿದರು.

2018ರಿಂದ 1200ಕ್ಕೂ ಹೆಚ್ಚು ಪದವೀಧರರು ಅರಣ್ಯ ಇಲಾಖೆಯಲ್ಲಿನ ಹುದ್ದೆಗಳ ಭರ್ತಿಗಾಗಿ ಕಾಯುತ್ತಿದ್ದಾರೆ. ಆದರೆ, ಇದುವರೆಗೂ ನೇಮಕಾತಿ ಮಾಡಿಕೊಂಡಿಲ್ಲ. ಹೀಗೆ ಮುಂದುವರೆದರೆ ಸಾವಿರಾರು ಸಂಖ್ಯೆಯಲ್ಲಿ ಅರಣ್ಯ ಶಾಸ್ತ್ರಪದವೀಧರರು ನಿರುದ್ಯೋಗಿಗಳಾಗಿಯೇ ಉಳಿಯುತ್ತಾರೆ. ಈ ಪದವಿ ಪಡೆದವರಿಗೆ ಈ ವಿಭಾಗದಲ್ಲಿ ಮಾತ್ರ ಉದ್ಯೋಗ ಪಡೆಯಲು ಹೆಚ್ಚಿನ ಅವಕಾಶ ಇರುತ್ತದೆ.  ಆದ್ದರಿಂದ ಅರಣ್ಯ ಇಲಾಖೆಯಲ್ಲಿ ಈಗ ಸುಮಾರು 3226 ಹುದ್ದೆಗಳು ಖಾಲಿ ಇವೆ. ಅದರಲ್ಲಿ ಅಧಿಕಾರಿ ವರ್ಗದ ಹುದ್ದೆಗಳು ಇವೆ. ಈ ಎಲ್ಲಾ ಹುದ್ದೆಗಳಿಗೂ ಬಿ.ಎಸ್ಸಿ ಅರಣ್ಯಶಾಸ್ತ್ರ ಪದವಿ ಪಡೆದವರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಕೇಶ್, ಭೂಮಿಕಾ, ನಾಜ್ಮಿ, ಅರೀಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT