ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕ ಹುಳ ಬಾಧೆ: 800 ಎಕರೆ ಮೆಕ್ಕೆಜೋಳ ನಾಶ

ಶಕುನವಳ್ಳಿ, ಶಂಕ್ರಿಕೊಪ್ಪ, ಸಾಬಾರ ಗ್ರಾಮಗಳಲ್ಲಿ ಬೆಳೆಗೆ ರೋಗ
Last Updated 21 ಏಪ್ರಿಲ್ 2022, 4:51 IST
ಅಕ್ಷರ ಗಾತ್ರ

ಆನವಟ್ಟಿ: ಒಂದು ತಿಂಗಳಲ್ಲಿ ಕಟಾವು ಮಾಡಬೇಕಿದ್ದ ಮೆಕ್ಕೆಜೋಳಕ್ಕೆ ಸೈನಿಕ ಹುಳ ಬಾಧೆ ಎದುರಾಗಿದ್ದು, ಎರಡೇ ದಿನದಲ್ಲಿ ಹೋಬಳಿಯ 800 ಎಕರೆ ಮೆಕ್ಕೆಜೋಳ ನಾಶವಾಗಿದೆ.

ಸಮೀಪದ ಶಕುನವಳ್ಳಿ, ಶಂಕ್ರಿಕೊಪ್ಪ, ಸಾಬಾರ, ತುಯಿಲ್‌ಕೊಪ್ಪ ಸೇರಿ ಕೆಲವು ಗ್ರಾಮಗಳಲ್ಲಿ ಸೈನಿಕ ಹುಳು ಬಾಧೆ ಕಾಣಿಸಿಕೊಂಡಿದೆ.

‘8 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಒಂದೇ ದಿನದಲ್ಲಿ ನಾಶವಾಗಿದೆ. ಅದನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದೇವೆ. ಸಾಕಷ್ಟು ಖರ್ಚು ಮಾಡಿದ್ದೆ. ಆದಷ್ಟು ಬೇಗ ಸರ್ಕಾರ ಬೆಳೆ ಪರಿಹಾರ ನೀಡಿದರೆ ಮುಂದಿನ ಬೆಳೆ ಬೆಳೆಯಬಹುದು’ ಎಂದು ಅಳಲು ತೋಡಿಕೊಂಡರು ಕೃಷಿಕ ಶಿವನಾಗಪ್ಪ ಶಕುನವಳ್ಳಿ.

ಹುಳು ಬಾಧೆಗೊಳಗಾದ ಜಮೀನಿಗೆ ಕೃಷಿ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದರು.

‘ಸೈನಿಕ ಹುಳು ಹೊಸದೇನಲ್ಲ. 8 ಅಥವಾ 5 ವರ್ಷಗಳಿಗೊಮ್ಮೆ ಅತಿ ಹೆಚ್ಚು ಮಳೆಯಾದಾಗ ಕಾಣಿಸಿಕೊಳ್ಳುತ್ತವೆ. ಈ ಹುಳು 800ರಿಂದ 1000ದಷ್ಟು ಮರಿಗಳನ್ನು ಹಾಕುತ್ತವೆ. ಭೂಮಿ ಒಳಗೆ ಇದರ ಕೋಶಗಳು ಇದ್ದು, ಮಳೆ ಕಡಿಮೆ ಇದ್ದಾಗ ಅದಷ್ಟು ತೊಂದರೆ ನೀಡುವುದಿಲ್ಲ. ಮಳೆ ಹೆಚ್ಚಿಗೆ ಆದ ವರ್ಷಗಳಲ್ಲಿ ಬೆಳೆಗಳಿಗೆ ಹೆಚ್ಚು ಹಾನಿ ಮಾಡುತ್ತವೆ. ಇವು ಹುಲ್ಲಿನಂತಹ ಬೆಳೆಗಳಾದ ಜೋಳ, ಭತ್ತ, ರಾಗಿಯಂತಹ ಬೆಳೆಗಳಲ್ಲಿ ಕಾಣಿಸುತ್ತವೆ.ಕೀಟನಾಶಕ ಸಿಂಪಡಣೆ ಮೂಲಕ ಹುಳುಗಳ ಬೆಳವಣಿಗೆ ತಡೆಯಬಹುದು. ಒಂದೇ ನೆಲದಲ್ಲಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುವ ಮೂಲಕ ತಡೆಗಟ್ಟಬಹುದು’ ಎಂದು ಶಿವಮೊಗ್ಗದ ಕೃಷಿ ಮಹಾವಿದ್ಯಾಲಯ ಕೀಟ ಶಾಸ್ತ್ರ ತಜ್ಞ ಕಲ್ಲೇಶ್ವರ ಸ್ವಾಮಿ ಸಲಹೆ ನೀಡಿದರು.

‘ಒಂದು ಎಕರೆಗೆ ಕನಿಷ್ಠ ₹ 30 ಸಾವಿರ ಖರ್ಚು ಮಾಡಿ ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ಒಂದು ದಿನಕ್ಕೆ 300ರಿಂದ 400 ಎಕರೆಯಷ್ಟು ಬೆಳೆಯನ್ನು ಸೈನಿಕ ಹುಳುಗಳು ತಿನ್ನುತ್ತಿವೆ. ವಿಳಂಬ ಮಾಡಿದರೆ ಸಂಪೂರ್ಣ ಬೆಳೆ ಹಾಳಾಗುತ್ತದೆ. ಅಧಿಕಾರಿಗಳು, ಶಾಸಕರು ರೈತರ ನೆರವಿಗೆ ಧಾವಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಲಿಂಗೇಗೌಡ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT