ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದು ಸಿಎಂ ಎಂಬುದೇ ಬಿಜೆಪಿಗೆ ಸಮಸ್ಯೆ: ಎಂ.ಬಿ.ಪಾಟೀಲ

Published : 10 ಆಗಸ್ಟ್ 2024, 16:29 IST
Last Updated : 10 ಆಗಸ್ಟ್ 2024, 16:29 IST
ಫಾಲೋ ಮಾಡಿ
Comments

ಶಿವಮೊಗ್ಗ: ದೇವರಾಜ ಅರಸು ನಂತರ ಹಿಂದುಳಿದ ವರ್ಗದಿಂದ ಬಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಅದನ್ನು ಸಹಿಸಲಾಗದೇ ಬಿಜೆಪಿಯವರು ವಿನಾ ಕಾರಣ ಹೋರಾಟ ಮಾಡುತ್ತಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ದೂರಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 40 ವರ್ಷದ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಅವರು ಯಾವುದೇ ಹಗರಣ ಮಾಡಿಲ್ಲ. ಬಿಜೆಪಿಯವರು ವಿನಾಃ ಕಾರಣ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

ಮೈಸೂರಿನಲ್ಲಿ ಮೂಡಾ ಹಗರಣ ನಡೆದಾಗ ಬಿಜೆಪಿಯವರೇ ಅಧಿಕಾರದಲ್ಲಿದ್ದರು. ಅವರ ಪಕ್ಷದ ಶಾಸಕರೇ ಮೈಸೂರಿನಲ್ಲಿದ್ದರು. ಆಗ ಏನೂ ಮಾತನಾಡದವರು ಈಗ ಏಕಾಏಕಿ ಪಾದಯಾತ್ರೆ ಹೊರಟಿದ್ದಾರೆ. ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಶಶಿಕಲಾ ಜೊಲ್ಲೆ, ಮುರುಗೇಶ ನಿರಾಣಿ, ಎಚ್.ಡಿ. ಕುಮಾರಸ್ವಾಮಿ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತರು ಮನವಿ ಸಲ್ಲಿಸಿದರೂ ರಾಜ್ಯಪಾಲರು ಅದಕ್ಕೆ ಒಪ್ಪಿಗೆ ಕೊಟ್ಟಿಲ್ಲ. ಈಗ ಸಿದ್ದರಾಮಯ್ಯ ವಿರುದ್ಧ ಖಾಸಗಿ ವ್ಯಕ್ತಿ ಕೊಟ್ಟ ದೂರು ಆಧರಿಸಿ ನೋಟಿಸ್ ಕೊಟ್ಟಿರುವುದು ಹಾಸ್ಯಾಸ್ಪದ ಎಂದರು.

ಯತ್ನಾಳ್‌ ಆರೋಪಕ್ಕೆ ಉತ್ತರಿಸಿ: ಕೋವಿಡ್–19 ವೇಳೆ ರಾಜ್ಯದ ಅರೋಗ್ಯ ಇಲಾಖೆಯಲ್ಲಿ ₹2 ಸಾವಿರ ಕೋಟಿ ಮೊತ್ತದ ಹಗರಣ ನಡೆದಿದೆ. ಬಿ.ಎಸ್. ಯಡಿಯೂರಪ್ಪ, ಅಂದಿನ ಆರೋಗ್ಯ ಸಚಿವ ಸುಧಾಕರ್ ಸೇರಿಯೇ ಹಗರಣ ಮಾಡಿದ್ದಾರೆ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ. ಬಿ.ವೈ.ವಿಜಯೇಂದ್ರ‌ ಮಾರಿಷಸ್ ಗೆ ₹10 ಸಾವಿರ ಕೋಟಿ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. ಯತ್ನಾಳ್ ಆರೋಪಕ್ಕೆ ಮೊದಲು ಬಿ.ವೈ.ವಿಜಯೇಂದ್ರ ಉತ್ತರ ಕೊಡಲಿ ಎಂದು ಆಗ್ರಹಿಸಿದರು.  

ಬಿಜೆಪಿ ಅವಧಿಯಲ್ಲಿ ನಡೆದಿರುವ 25ರಿಂದ 30 ಹಗರಣಗಳ ವಿರುದ್ಧ ನಾವೂ (ಕಾಂಗ್ರೆಸ್) ಕೂಡ ಹೋರಾಟ ಮಾಡಲಿದ್ದೇವೆ. ಬಿಜೆಪಿಯವರ ಷಡ್ಯಂತ್ರದ ವಿರುದ್ದ ಜನರ ಬಳಿಗೆ ಹೋಗುತ್ತೇವೆ ಎಂದರು. 

‘ವಿಸಿಬಿಲಿಟಿ ಸಮಸ್ಯೆ ಇದೆ ಸರಿಪಡಿಸುತ್ತೇವೆ’

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಗೆ ವಿಸಿಬಿಲಿಟಿಯ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ತಾಂತ್ರಿಕ ತಜ್ಞರೊಂದಿಗೆ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ. ವಿಸಿಬಿಲಿಟಿಯ ಸಮಸ್ಯೆ ಶಿವಮೊಗ್ಗ ಮಾತ್ರವಲ್ಲ ದೇಶದ ಉಳಿದ ವಿಮಾನ ನಿಲ್ದಾಣಗಳಲ್ಲೂ ಇದೆ ಎಂದರು.  ವಿಸಿಬಿಲಿಟಿಯ ಸಮಸ್ಯೆ ಇದ್ದಾಗ ರಿಸ್ಕ್ ತೆಗೆದುಕೊಂಡು ಲ್ಯಾಂಡಿಂಗ್ ಅಥವಾ ಟೇಕಾಫ್ ಮಾಡಲಾಗುವುದಿಲ್ಲ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೇವಲ ವಿಸಿಬಿಲಿಟಿಯ ಸಮಸ್ಯೆ ಅಷ್ಟೇ ಅಲ್ಲ ಇತರ ಸಮಸ್ಯೆಗಳೂ ಇದೆ. ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ ಬಾಕಿ ಇದೆ. ಕೆಲವೊಂದು ತಾಂತ್ರಿಕ ಸಲಕರಣೆಗಳ ಅಗತ್ಯವಿದೆ. ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಂ.ಬಿ.ಪಾಟೀಲ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT