ಶಿವಮೊಗ್ಗ: ‘ರಾಜ್ಯದಲ್ಲಿ ಗುಡ್ಡ ಕುಸಿತ ಪ್ರಕರಣಗಳಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ತರಾತುರಿಯಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಮುಂದಾಗಿದೆ. ಇದು ಪರಿಷ್ಕರಣೆಗೆ ಒಳಪಡದೆ ಜಾರಿಗೊಂಡರೆ ಅರಣ್ಯ ಪ್ರದೇಶದ ನಿವಾಸಿಗಳು ಊರು ಬಿಡುವ ಸ್ಥಿತಿ ಎದುರಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧುಬಂಗಾರಪ್ಪ ಕಳವಳ ವ್ಯಕ್ತಪಡಿಸಿದರು.
‘ಕಸ್ತೂರಿ ರಂಗನ್ ವರದಿ ಜಾರಿಯಿಂದ ಅರಣ್ಯ ಪ್ರದೇಶಗಳ ಜನವಸತಿ ಪ್ರದೇಶಗಳಲ್ಲಿ ಕಾನೂನು ತೊಡುಕಾಗಲಿದೆ. ಅದೇ ರೀತಿ, ಗ್ರಾಮಾಂತರದಲ್ಲಿ ಜನರು ಸಂಜೆ 6 ಗಂಟೆಯೊಳಗೆ ಮನೆ ಸೇರಬೇಕಾಗುತ್ತದೆ. ಇಲ್ಲವಾದರೆ, ಊರನ್ನೇ ಬಿಡುವ ಸಂದರ್ಭ ಎದುರಾಗಬಹುದು. ಆದ್ದರಿಂದ, ಈ ವರದಿಯನ್ನು ಪುನಃ ಪರಿಷ್ಕರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷಾತೀತವಾಗಿ ಎಲ್ಲರನ್ನು ಕರೆದು, ಅಭಿಪ್ರಾಯ ಸಂಗ್ರಹಿಸಲಾಗುವುದು. ಈ ವಿಚಾರದಲ್ಲಿ ರಾಜಕೀಯ ಸಲ್ಲದು. ಕಸ್ತೂರಿ ರಂಗನ್ ವರದಿಯಲ್ಲಿ ಕೇರಳ ಮಾದರಿ ಕೆಲವು ಬದಲಾವಣೆ ತಂದು ಜಾರಿಗೊಳಿಸಿದರೆ ಸೂಕ್ತ’ ಎಂದು ಅಭಿಪ್ರಾಯಪಟ್ಟರು.
‘ನಮ್ಮ ಶಾಲೆ ನಮ್ಮ ಜಬಾಬ್ದಾರಿ’ ಒಂದು ಅತ್ಯುತ್ತಮ ಕಾರ್ಯಕ್ರಮ. ರಾಜ್ಯದಲ್ಲಿ ಪ್ರಸ್ತುತ 22 ಸಾವಿರ ವಿದ್ಯಾರ್ಥಿಗಳ ವಾಟ್ಸಆ್ಯಪ್ ಗ್ರೂಪ್ ಮಾಡಲಾಗಿದೆ. 50 ಸಾವಿರ ಹಳೇ ವಿದ್ಯಾರ್ಥಿ ಸಂಘಗಳಿವೆ. ಎಲ್ಲರೂ ತಾವು ಓದಿದ ಶಾಲೆ ಬಗ್ಗೆ ಒಂದು ಜವಾಬ್ದಾರಿ ತೆಗೆದುಕೊಂಡು ಅಭಿವೃದ್ಧಿಗೆ ಸಹಕರಿಸಿದರೆ ಒಳಿತು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿಎಸ್ಆರ್ ನಿಧಿ ಮೂಲಕ ₹ 2,500 ಕೋಟಿ ಸಂಗ್ರಹವಾಗಿದೆ’ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ, ಶ್ರೀನಿವಾಸ ಕರಿಯಣ್ಣ, ನಾಗರಾಜ ಗೌಡ, ಜಿ.ಡಿ.ಮಂಜುನಾಥ, ರಮೇಶ್ ಶಂಕರಘಟ್ಟ, ಶಾಂತವೀರನಾಯ್ಕ, ಗಣಪತಿ, ಬಿ.ಕೆ.ಮೋಹನ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಲಕ್ಷ್ಮೀಕಾಂತ ಚಿಮಣೂರು ಇದ್ದರು.
ಪ್ರಜಾಪ್ರಭುತ್ವ ದಿನ; ಮಾನವ ಸರಪಳಿ
ಶಿವಮೊಗ್ಗ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜನಸಾಮಾನ್ಯರಿಗೆ ತಿಳಿಸಲು ರಾಜ್ಯದಾದ್ಯಂತ ಬೃಹತ್ ಮಾನವ ಸರಪಳಿಯನ್ನು ಸೆ.15 ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.
ಭದ್ರಾವತಿ ತಾಲ್ಲೂಕು ಶಂಕರ ಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಶಿಷ್ಟಾಚಾರದಂತೆ ರಾಷ್ಟಗೀತೆ ಗಾಯನ ಸಂವಿಧಾನ ಪೀಠಿಕೆ ಪಠಣ ಮಾಡಲಾಗುವುದು’ ಎಂದು ಹೇಳಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ ‘ಜಿಲ್ಲೆಗೆ ಮಾರ್ಗ ನಕ್ಷೆ ನೀಡಲಾಗಿದೆ. ಅದರಂತೆ ಭದ್ರಾವತಿ ತಾಲ್ಲೂಕು ಕಾರೇಹಳ್ಳಿಯಿಂದ ಶಿವಮೊಗ್ಗ ತಾಲ್ಲೂಕಿನ ಮಡಿಕೆ ಚೀಲೂರುವರೆಗೆ ಮಾನವ ಸರಪಳಿ ನಿರ್ಮಿಸಲಾಗುವುದು. ಇದರಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲಾಗುವುದು’ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲೇಶಪ್ಪ ಇದ್ದರು.
ಕುವೆಂಪು ವಿ.ವಿ: ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಾಳೆ
‘ಕುವೆಂಪು ವಿಶ್ವವಿದ್ಯಾಲಯ ಸದ್ಯ ಐಸಿಯುನಲ್ಲಿದೆ. ಆರ್ಥಿಕವಾಗಿ ಆಡಳಿತಾತ್ಮಕವಾಗಿ ಅಲ್ಲಿನ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇದರಿಂದ ಮಕ್ಕಳ ಭವಿಷ್ಯವನ್ನು ಬೀದಿಗೆ ಬರುವಂತಾಗಿದೆ. ಅದನ್ನು ಸರಿಪಡಿಸುವ ಕೆಲಸವನ್ನು ಆದ್ಯತೆಯ ಮೇಲೆ ಮಾಡಲಾಗುವುದು’ ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.
‘ಇಲ್ಲಿನ ವಿದ್ಯಾರ್ಥಿಗಳಿಗೆ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ಯಲ್ಲಿ ತಾಂತ್ರಿಕ ಸಮಸ್ಯೆ ಕಾಡುತ್ತಿದೆ. ಫಲಿತಾಂಶ ಸೇರಿದಂತೆ ಅಂಕಪಟ್ಟಿ ವಿತರಣೆ ವಿಳಂಬ ಹೀಗೆ ಅನೇಕ ತೊಡಕುಗಳು ಇವೆ. ಆದ್ದರಿಂದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಅವರ ಗಮನಕ್ಕೆ ತಂದು ಸೆ. 5 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಎಲ್ಲ ಸಮಸ್ಯೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗುವುದು’ ಎಂದು ಸಚಿವರು ಹೇಳಿದರು.
ಕುವೆಂಪು ವಿಶ್ವವಿದ್ಯಾಲಯದಡಿಯ ಕೆಲವು ಕಾಲೇಜು ವಿದ್ಯಾರ್ಥಿಗಳಿಗೆ ಪೂರಕ ವಾತಾವರಣ ನಿರ್ಮಿಸುವಲ್ಲಿ ಆಡಳಿತ ಮಂಡಳಿ ಎಡವಿದೆ ಎಂದ ಸಚಿವರು ಈ ಬಗ್ಗೆ ಮತ್ತೊಮ್ಮೆ ಸಮಗ್ರ ಚರ್ಚೆ ನಡೆಸಲು ಸಭೆ ಕರೆಯಲಾಗುವುದು ಎಂದರು.
‘ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಮಲೆನಾಡು ಭಾಗದ ಮಕ್ಕಳ ಭವಿಷ್ಯ ರೂಪಿಸಲು ಈ ವಿಶ್ವವಿದ್ಯಾಲಯ ಆರಂಭಿಸಿದ್ದರು. ರಾಜ್ಯದ ನಾನಾ ಭಾಗದಿಂದ ಮಕ್ಕಳು ವಿವಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಆದ್ದರಿಂದ ಬಂಗಾರಪ್ಪ ಅವರ ಕನಸು ಹಾಗೂ ರಾಷ್ಟ್ರಕವಿ ಕುವೆಂಪು ಅವರ ಹೆಸರಿಗೆ ಕಳಂಕ ತರಲು ಬಿಡುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.