ಭಾನುವಾರ, ಸೆಪ್ಟೆಂಬರ್ 25, 2022
30 °C
ಸಮಗ್ರ ಪದ್ಧತಿ ಅನುಸರಿಸಿಯಶಸ್ಸು ಕಂಡಪ್ರಕಾಶ್ ನಾಯಕ್

ಬಹುಬೆಳೆ ಕೃಷಿಯಲ್ಲಿ ಲಾಭದ ದಾರಿ ಹಲವು

ಮಲ್ಲಿಕಾರ್ಜುನ ಮುಂಬಾಳು Updated:

ಅಕ್ಷರ ಗಾತ್ರ : | |

Prajavani

ಆನಂದಪುರ: ಕೃಷಿಯಲ್ಲಿ ಸಾಧನೆ ಮಾಡಲೇಬೇಕು ಎಂದು ಹೊರಟವರಿಗೆ ಯಶಸ್ಸು ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ಆನಂದಪುರದ ರೈತ ಪ್ರಕಾಶ್ ನಾಯಕ್ ಉತ್ತಮ ನಿದರ್ಶನ.

ಬಟ್ಟೆ ಹಾಗೂ ದಿನಸಿ ವ್ಯಾಪಾರದಲ್ಲಿ ಉತ್ತಮ ಆದಾಯ ಬರುತ್ತಿದ್ದರೂ ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಬೇಕು ಎನ್ನುವ ಕಾರಣಕ್ಕೆ ಅದನ್ನು ತ್ಯಜಿಸಿ 20 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಶಿವಮೊಗ್ಗದ ಹಾಪ್‌ಕಾಮ್ಸ್ ನಿರ್ದೇಶಕರೂ ಆಗಿರುವ ಅವರು ತೋಟದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದ್ದಾರೆ. ಅವರ ತೋಟಕ್ಕೆ ಕಾಲಿಡುತ್ತಿದ್ದಂತೆಯೇ ಬಣ್ಣ ಬಣ್ಣ,ದ ಚಿತ್ತಾಕರ್ಷಕವಾದ ಹೂವಿನ ಗಿಡಗಳು ಸ್ವಾಗತ ಕೋರುತ್ತವೆ. ಇವರ 8 ಎಕರೆ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಕಾಣಬಹುದಾಗಿದೆ.

ತಾಳೆ- ನಿರಂತವಾಗಿ ಆದಾಯ ನೀಡುವ ಬೆಳೆ: ‘ತಾಳೆ ಉತ್ತಮ ಬೆಳೆಯಾಗಿದ್ದು, ನಿರಂತರ ಆದಾಯವನ್ನು ಪಡೆಯಬಹುದಾಗಿದೆ. ಮಾರುಕಟ್ಟೆಯಲ್ಲಿ ಎಣ್ಣೆಯ ಬೆಲೆ ಹೆಚ್ಚಾದಂತೆ ತಾಳೆಯ ಬೆಲೆಯೂ ಹೆಚ್ಚಾಗುತ್ತದೆ. 7 ಎಕರೆಯಲ್ಲಿ ಬೆಳೆದ ತಾಳೆ ಬೆಳೆಗೆ ಈಗ 5 ವರ್ಷ. ಮೊದಲಿಗೆ ಕೆ.ಜಿ.ಗೆ ₹ 9 ಸಿಗುತ್ತಿತ್ತು. ಎಣ್ಣೆ ಬೆಲೆ ಹೆಚ್ಚಾದ ಪರಿಣಾಮ ಪ್ರಸ್ತುತ ₹ 22 ಸಿಗುತ್ತಿದೆ. ಪ್ರತಿ ತಿಂಗಳು ಬೆಲೆ ಪರಿಷ್ಕರಣೆ ಆಗುತ್ತದೆ. ನೇರವಾಗಿ ರೈತರಿಂದ ಖರೀದಿ ಮಾಡುವುದರಿಂದ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ’ ಎಂಬುದು ಪ್ರಕಾಶ್‌ ಅವರ ಅನುಭವದ ನುಡಿ.

ಹವ್ಯಾಸಿ ಬೆಳೆಯಾಗಿ ಡ್ರ್ಯಾಗನ್ ಫ್ರೂಟ್: ಹವ್ಯಾಸಿ ಬೆಳೆಯಾಗಿ ಡ್ರ್ಯಾಗನ್ ಫ್ರೂಟ್‌ನ 30 ಗಿಡಗಳನ್ನು ಸಹ ಬೆಳೆದಿದ್ದಾರೆ. ‘ವರ್ಷಕ್ಕೆ 3 ಬಾರಿ ಫಸಲು ಪಡೆಯಬಹುದು. ಈ ಬೆಳೆ ಬೆಳೆಯಲು ಕಂಬಗಳ ಅವಶ್ಯಕತೆ ಇದ್ದು, ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆಯಬಹುದು’ ಎನ್ನುವುದು ಅವರ ಸಲಹೆ.

ಕಾಡು ಜಾತಿ ಮರದಲ್ಲಿ ಕಾಳು ಮೆಣಸು: ತಾಳೆ ಬೆಳೆಯ ನಡುವೆ ಇರುವ ಕಾಡು ಜಾತಿ ಮರಗಳನ್ನು ನಾಶ ಮಾಡದೆ, ಅದೇ ಮರದಲ್ಲಿ ಕಾಳು ಮೆಣಸು ಬೆಳೆಯುವ ಮೂಲಕ ಇತರ ರೈತರಿಗೆ ಪ್ರೇರಣೆಯಾಗಿದ್ದಾರೆ. ಜೊತೆಗೆ ಕಾಡು ಉಳಿಸುವ ಕಾಳಜಿಯನ್ನೂ ಹೊಂದಿದ್ದಾರೆ. ಇದಲ್ಲದೆ 350 ಸಿಲ್ವರ್ ಮರ ಬೆಳೆದು ಆ ಮರದಲ್ಲಿ ಕಾಳು ಮೆಣಸನ್ನು ಪ್ರಮುಖ ಆದಾಯ ಬೆಳೆಯಾಗಿ ಬೆಳೆಯುತ್ತಿದ್ದಾರೆ.

‘ವೆಂಗೂರ್ಲ–7’ ಎಂಬ ಜಾತಿಯ ಗೇರು ಸಹ ನಾಟಿ ಮಾಡಿದ್ದಾರೆ. ‘3ನೇ ವರ್ಷದಿಂದ ಗೇರು ಫಸಲು ಪಡೆಯಬಹುದಾಗಿದೆ. ಒಂದು ಮೀಟರ್‌ ನಂತರದ ಮರದ ರಂಬೆ–ಕೊಂಬೆಗಳನ್ನು ಕತ್ತರಿಸುವುದರಿಂದ ಹೆಚ್ಚಿನ ಫಸಲು ಪಡೆಯಬಹುದು’ ಎಂದು ಪ್ರಕಾಶ್‌ ಹೇಳುತ್ತಾರೆ.

ಇದಲ್ಲದೆ ತೆಂಗು, ಊದುಬತ್ತಿ ತಯಾರಿಕೆಗೆ ಬರುವ ಹಾಲುಮಡ್ಡಿ ಮರಗಳನ್ನು ಸಹ ಬೆಳೆದಿದ್ದಾರೆ. ಎರಡು ಕೊಳವೆ ಬಾವಿಗಳಿಂದ ಸಾಕಷ್ಟು ನೀರು ಸಿಗದೆ ಇರುವುದರಿಂದ ಕೃಷಿ ಹೊಂಡದ ಮೂಲಕ ಹನಿ ನೀರಾವರಿ ಪದ್ಧತಿ ಆಳವಡಿಸಿಕೊಂಡಿದ್ದಾರೆ.

ಇಂಗು ಕಾಲುವೆಗಳ ನಿರ್ಮಾಣ: ಮಳೆಯ ನೀರು ಪೋಲಾಗಬಾರದು ಎನ್ನುವ ಉದ್ದೇಶದಿಂದ ತಾಳೆ, ಹಲಸು, ಗೇರು ಬೆಳೆಗಳ ನಡುವೆ ಇಂಗು ಕಾಲುವೆಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದ ತೋಟ ತಂಪಾಗಿರುವುದರ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶ ಅವರದ್ದು.

***

‘ಪ್ರಕಾಶ್ ಚಂದ್ರ’ ಹಲಸಿನ ಸಂಶೋಧನೆ

3 ಎಕರೆಯಲ್ಲಿ ಹಲಸು ಸಹ ಬೆಳೆದಿದ್ದು, ಅವರೇ ಕಸಿ ಮಾಡಿ ‘ಪ್ರಕಾಶ್ ಚಂದ್ರ’ ಎನ್ನುವ ಹೆಸರು ನೀಡಿದ್ದಾರೆ. ‘4 ವರ್ಷಗಳ ಕಾಲ ಹಲಸಿನ ಮಿಡಿ ಬೆಳೆಯಲು ಬಿಡದೆ ಕತ್ತರಿಸಬೇಕು. ಇದರಿಂದ ರೋಗರುಜಿನ ತಡೆಗಟ್ಟಬಹುದು. ಇದು ವರ್ಷಕ್ಕೆ 2 ಬೆಳೆ ಆಗಿರುವುದರಿಂದ ಮರಕ್ಕೆ ಹೆಚ್ಚಿನ ಪೋಷಕಾಂಶ ಬೇಕಾಗುತ್ತದೆ’ ಎಂದು ವಿವರಿಸುವರು. ‘ಪ್ರಕಾಶ್ ಚಂದ್ರ’ ಹಲಸಿನ ಅಭಿವೃದ್ಧಿಗೆ ಕೃಷಿ ವಿಶ್ವವಿದ್ಯಾಲಯದವರು ಅವರ ತೋಟಕ್ಕೆ ಬಂದು ಮಾಹಿತಿ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು