ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ಮೇ 7ಕ್ಕೆ ಮತದಾನ: ಅಂತಿಮ ಹಂತದ ಸಿದ್ಧತೆ ಪೂರ್ಣ- ಜಿಲ್ಲಾಧಿಕಾರಿ

ಶಿವಮೊಗ್ಗ ಕ್ಷೇತ್ರದಲ್ಲಿ 2039 ಮತಗಟ್ಟೆಗಳ ಸ್ಥಾಪನೆ: ಡಿಸಿ ಗುರುದತ್ತ ಹೆಗಡೆ
Published 4 ಮೇ 2024, 16:04 IST
Last Updated 4 ಮೇ 2024, 16:04 IST
ಅಕ್ಷರ ಗಾತ್ರ

ಶಿವಮೊಗ್ಗ: ಮೇ 7ರಂದು ನಡೆಯುವ ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗರಿಷ್ಠ 1,500 ಮತದಾರರನ್ನು ಒಳಗೊಂಡಂತೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಹಿಳಾ ಮತದಾರರನ್ನು ಸೆಳೆಯಲು 40 ‘ಸಖಿ’ ಮತದಾನ ಕೇಂದ್ರಗಳು ಹಾಗೂ ಯುವ ಮತದಾರರಿಗಾಗಿ 8, ಅಂಗವಿಕಲರಿಗೆ 8, ಮಾದರಿ ಮತಗಟ್ಟೆಗಳು 8, ಧ್ಯೇಯ ಆಧಾರಿತ 8 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ’ ಎಂದು ಹೇಳಿದರು.

‘ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ 2,039 ಮತಗಟ್ಟೆಗಳಲ್ಲೂ ಕನಿಷ್ಠ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ರ‍್ಯಾಂಪ್, ಶೌಚಾಲಯ, ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ. ಬಿಸಿಲು ಹೆಚ್ಚು ಇರುವುದರಿಂದ ಮತದಾರರಿಗೆ ನೆರಳಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ತುರ್ತು ಉಪಚಾರಕ್ಕೆ ಒಆರ್‌ಎಸ್‌ ಸೇರಿ ಅಗತ್ಯ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗೆ ಬರುವ ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ವ್ಹೀಲ್‌ ಚೇರ್ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಮತದಾರರ ಸಹಾಯವಾಣಿಯ ಮೂಲಕ 1,715 ಕರೆಗಳನ್ನು ಸ್ವೀಕರಿಸಿದ್ದು, ಅದರಲ್ಲಿ ಕೆಲವರು ಸಲಹೆಗಳನ್ನು ನೀಡಿದ್ದಾರೆ. ಇನ್ನೂ ಕೆಲವರು ದೂರುಗಳ ದಾಖಲಿಸಿದ್ದಾರೆ. ಎಲ್ಲವನ್ನೂ ವಿಲೇವಾರಿ ಮಾಡಲಾಗಿದೆ. ಸಿ–ವಿಜಿಲ್‌ ಅಪ್ಲಿಕೇಶನ್‌ ಮೂಲಕ 258 ದೂರುಗಳು ಬಂದಿದ್ದವು. ಅದರಲ್ಲಿ 235 ದೂರುಗಳ ಸಂಬಂಧ ಕ್ರಮ ಕೈಗೊಳ್ಳಲಾಗಿದೆ. 23 ದೂರುಗಳನ್ನು ಕೈ ಬಿಡಲಾಗಿದೆ. ಸುವಿಧಾ ಅಡಿಯಲ್ಲಿ ಅನುಮತಿಗಳಿಗಾಗಿ 821 ಅರ್ಜಿಗಳ ಸ್ವೀಕರಿಸಲಾಗಿದೆ. ಅದರಲ್ಲಿ 645 ಅಂಗೀಕರಿಸಲಾಗಿದೆ. 120 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದರು.

ಕ್ಷೇತ್ರದಲ್ಲಿ ಒಟ್ಟು 1,021 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ನಡೆಸಲಾಗುತ್ತಿದೆ. ಶಿವಮೊಗ್ಗದ ಬಿಎಚ್‌ ರಸ್ತೆಯ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಭದ್ರತಾ ಕೊಠಡಿಗಳನ್ನು ತೆರೆಯಲಾಗಿದೆ. ಮತದಾನದ ನಂತರ ಎಲ್ಲ ಮತಯಂತ್ರಗಳನ್ನು ಮತ್ತು ಶಾಸನಾತ್ಮಕ ದಾಖಲೆಗಳನ್ನು 3 ಹಂತದ ಭದ್ರತೆಯಲ್ಲಿ ಸಂರಕ್ಷಿಸಿಡಲಾಗುವುದು ಎಂದು ತಿಳಿಸಿದರು.

ಅಗತ್ಯ ಸೇವೆ ಇಲಾಖೆಗಳ ಸಿಬ್ಬಂದಿಗೆ ಮತದಾನದ ವ್ಯವಸ್ಥೆ ಮಾಡಲಾಗಿತ್ತು. 532 ಮತದಾರರ ಪೈಕಿ 321 ಮಂದಿ ಮತ ಹಾಕಿದ್ದಾರೆ. ಶೇ 60.33 ಮಂದಿ ಈವರೆಗೂ ಅಂಚೆ ಮತ ಚಲಾಯಿಸಿದ್ದಾರೆ ಎಂದರು.

ಮತಗಟ್ಟೆ ಸಿಬ್ಬಂದಿಯ ಸಂಚಾರಕ್ಕಾಗಿ 276 ಕೆಎಸ್‌ಆರ್‌ಟಿಸಿ ಬಸ್‌, 11 ಮಿನಿಬಸ್‌, 4 ಟಿಟಿ ಮತ್ತು 125 ಜೀಪುಗಳನ್ನು ಬಳಕೆ ಮಾಡಲಾಗುತ್ತಿದೆ. ಮತಗಟ್ಟೆ ಸಿಬ್ಬಂದಿಗೆ ಬಿಸಿಯೂಟ ತಯಾರಿಕರಿಂದ ಊಟ, ಉಪಹಾರ ಮತ್ತು ಮಜ್ಜಿಗೆ, ಟೀ ವ್ಯವಸ್ಥೆ ಮಾಡಲಾಗುವುದು ಎಂದರು.

ಚುನಾವಣೆ ಮತ್ತು ಮತದಾನ ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲಾ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಧಿಕಾರಿ, ಸಿಬ್ಬಂದಿ, ವಾಹನ ಚಾಲಕರು, ಪೊಲೀಸ್ ಸಿಬ್ಬಂದಿಗಳಿಗೆ ಎಲೆಕ್ಷನ್ ಡ್ಯೂಟಿ ಸರ್ಟಿಫಿಕೇಟ್ ಮೂಲಕ ಸ್ಥಳೀಯ ಮತಗಟ್ಟೆಗಳಲ್ಲಿಯೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಇತರೆ ಕ್ಷೇತ್ರಗಳ ಮತದಾರರಾದ ನೌಕರರಿಗೆ ಅಂಚೆ ಮತದಾನದ ಮೂಲಕ ಮತ ಚಲಾಯಿಸಲು ಪೋಸ್ಟಲ್ ವೋಟಿಂಗ್ ಸೆಂಟರ್ (PVC) ಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

Cut-off box - 19 ಕೋಟಿ ಮೌಲ್ಯದ ವಸ್ತುಗಳ ಜಪ್ತಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ಮತ್ತು ಖಚಿತ ಮಾಹಿತಿ ಆಧರಿಸಿ ಶಿವಮೊಗ್ಗ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರ್ದಿಷ್ಟ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಹಾಗೂ ಸಂಗ್ರಹಿಸಿಟ್ಟಿದ್ದ ₹19 ಕೋಟಿ ಮೌಲ್ಯದ ವಸ್ತುಗಳನ್ನು ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು. ಅದರಲ್ಲಿ ₹ 3155 ಲಕ್ಷ ನಗದು ಕೂಡ ಒಳಗೊಂಡಿದೆ. ₹729 ಕೋಟಿ ಮೌಲ್ಯದ ಚಿನ್ನ ಕೂಡ ಸೇರಿದೆ ಎಂದರು. ಅಬಕಾರಿ ಇಲಾಖೆಯಿಂದ ಒಟ್ಟು ₹183 ಕೋಟಿ ಮೌಲ್ಯದ 23627 ಲೀಟರ್ ಮದ್ಯ ವಶಪಡಿಸಿಕೊಂಡು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT