ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ರಾಘವೇಂದ್ರ ಸುಳ್ಳಿನ ಸರದಾರ: ಸಚಿವ ಮಧು ಬಂಗಾರಪ್ಪ ಟೀಕೆ

Published 4 ಏಪ್ರಿಲ್ 2024, 16:26 IST
Last Updated 4 ಏಪ್ರಿಲ್ 2024, 16:26 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಶರಾವತಿ ಸಂತ್ರಸ್ತರು, ಬಗರ್‌ಹುಕುಂ ಸಾಗುವಳಿದಾರರ ಬಗ್ಗೆ ಸಂಸದ ಬಿ.ವೈ.ರಾಘವೇಂದ್ರ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಅವರೊಬ್ಬ ಸುಳ್ಳಿನ ಸರದಾರ. ಸುಳ್ಳು ಹೇಳುವ ವಿಷಯದಲ್ಲಿ ಪ್ರಶಸ್ತಿ ಕೊಡಬೇಕಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಟೀಕಿಸಿದರು. 

‘ರಾಜ್ಯದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ 32 ವರ್ಷಗಳ ಹಿಂದೆಯೇ ಎಸ್.ಬಂಗಾರಪ್ಪ ಉಚಿತವಾಗಿ ವಿದ್ಯುತ್ ಕೊಟ್ಟಿದ್ದಾರೆ. ಆದರೆ ಯಡಿಯೂರಪ್ಪ ಕೊಟ್ಟಿದ್ದಾರೆ ಎಂದು ಬಿ.ವೈ.ರಾಘವೇಂದ್ರ ಹೇಳುತ್ತಿದ್ದಾರೆ. ಈ ಮಾತನ್ನು ಜನರ ಎದುರು ಹೇಳಲು ಅವರಿಗೆ ಧೈರ್ಯವಿಲ್ಲ. ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ. ಅದನ್ನು ನೋಡಿ ನಗಬೇಕು ಅನ್ನಿಸುತ್ತಿದೆ’ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಛೇಡಿಸಿದರು.

‘ಶರಾವತಿ ಸಂತ್ರಸ್ತರು, ಬಗರ್‌ಹುಕುಂ ಸಾಗುವಳಿದಾರರ ಬವಣೆಗೆ ಕಾಂಗ್ರೆಸ್ ಪಕ್ಷ ಕಾರಣ ಎಂದು ರಾಘವೇಂದ್ರ ಹೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಬಿ.ವೈ.ರಾಘವೇಂದ್ರ ಸೇರಿದಂತೆ ಅವರ ಕುಟುಂಬದವರು 15 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಶರಾವತಿ ಸಂತ್ರಸ್ತರ ಅಳಲು ಪರಿಹಾರಕ್ಕೆ ಅವರ ಕೊಡುಗೆ ಏನು?’ ಎಂದು ಮಧು ಬಂಗಾರಪ್ಪ ಪ್ರಶ್ನಿಸಿದರು. ಬಗರ್‌ಹುಕುಂ ಸಾಗುವಳಿದಾರರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ಏನಾದರೂ ಕೆಲಸ ಮಾಡಿದ್ದರೆ ಅದು ಹಿರಿಯರಾದ ಕಾಂಗ್ರೆಸ್‌ನ ಕಾಗೋಡು ತಿಮ್ಮಪ್ಪ ಮಾತ್ರ ಎಂದು ಹೇಳಿದರು.

‘ಯಡಿಯೂರಪ್ಪ ಅವರನ್ನು ಈಗ ಬೀದಿಗೆ ತರುತ್ತಿರುವವರು ನಾವಲ್ಲ. ಬದಲಿಗೆ ನಿಮ್ಮದೇ ಪಕ್ಷದ ಈಶ್ವರಪ್ಪನವರು. ಬೆಳೆಸಿದವರನ್ನು ಒದ್ದು ಮೇಲೆ ಬರುವ ಸಂಸ್ಕೃತಿ ನನ್ನದಲ್ಲ, ಅದು ರಾಘವೇಂದ್ರ ಅವರದ್ದು. ಶಿಕಾರಿಪುರದ ಬಿಜೆಪಿ ಕಾರ್ಯಕರ್ತರಿಗೆ ನಾನು ಚೇಲಾ ಎಂಬ ಪದ ಬಳಕೆಯೇ ಮಾಡಿಲ್ಲ, ನಾನು ಹಾಗೆ ಹೇಳಿದ್ದೇನೆ ಎಂದು ರಾಘವೇಂದ್ರ ಹೇಳುತ್ತಿದ್ದಾರೆ. ಬಂಗಾರಪ್ಪ ಅವರ ಪುತ್ರ ನಾನು. ಅಷ್ಟೊಂದು ಹಗುರವಾಗಿ ಮಾತನಾಡಲು ನನಗೆ ಬರೊಲ್ಲ. ಹೀಗೆ ಸುಳ್ಳು ಹೇಳಲು ಸಂಸದರಿಗೆ ನಾಚಿಕೆಯಾಗಬೇಕು’ ಎಂದರು. 

‘ಶಿವರಾಜ ಕುಮಾರ್ ಮತದಾರರ ಬಳಿ ಹೆಚ್ಚು ಓಡಾಡುತ್ತಿದಾರೆ. ಯಾರು ಏನೇ ತಿಪ್ಪರಲಾಗ ಹೊಡೆದರೂ ಗೀತಾ ಶಿವರಾಜಕುಮಾರ್ ಗೆಲುವು ತಡೆಯಲಾಗದು. ಗೀತಾ ಡಮ್ಮಿ ಕಮ್ಮಿ ಅನ್ನುವವರಿಗೆಲ್ಲ ಚುನಾವಣೆಯಲ್ಲಿ ಉತ್ತರ ಸಿಗುತ್ತೆ. ದೇಶದಲ್ಲೇ ಬದಲಾವಣೆ ಗಾಳಿ ಬೀಸುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಪ್ರಚಾರ ಕಾರ್ಯ ನಡೆಯುತ್ತಿದೆ. ಹೋದ ಕಡೆಯೆಲ್ಲಾ ವಾತಾವರಣ ಚೆನ್ನಾಗಿದೆ. ಹಟ ಮತ್ತು ಛಲದಿಂದ ಪ್ರಚಾರ ಭರದಿಂದ ಸಾಗುತ್ತಿದೆ’ ಎಂದರು.

‘ದೇಶದಲ್ಲೂ ಬದಲಾವಣೆಯಾಗಲಿದೆ, ಬಿಜೆಪಿ ಬಿಟ್ಟು ಬೇರೆ ಪಕ್ಷಗಳ ಕಡೆ ಮತದಾರ ಒಲವು ತೋರಿಸುತ್ತಿದ್ದಾನೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನಿಟ್ಟುಕೊಂಡು ಮತ ಕೇಳಲು ಖುಷಿಯಾಗುತ್ತಿದೆ’ ಎಂದರು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಮುಖಂಡರಾದ ರಮೇಶ್ ಹೆಗ್ಡೆ, ಯು.ಶಿವಾನಂದ, ಡಾ. ಶ್ರೀನಿವಾಸ್ ಕರಿಯಣ್ಣ, ಜಿ.ಡಿ.ಮಂಜುನಾಥ್, ಧರ್ಮರಾಜ್, ಎಸ್.ಟಿ.ಹಾಲಪ್ಪ, ಗಿರೀಶ್, ದೇವೀಕುಮಾರ್, ದಿನೇಶ್ ಇದ್ದರು.

ಶಾಸಕ ಆರಗ ಜ್ಞಾನೇಂದ್ರ ಅವರು ಗ್ಯಾರಂಟಿ ಯೋಜನೆಗಳನ್ನು ‘420’ ಎಂದು ಲೇವಡಿ ಮಾಡಿದ್ದಾರೆ. ಫಲಾನುಭವಿಗಳನ್ನು ಈ ರೀತಿ ಅಪಮಾನಿಸುವ ಜ್ಞಾನೇಂದ್ರ ಅವರೇ ‘420’. ಬಿಜೆಪಿಯ ಭಾರತ್ ಅಕ್ಕಿ ಎಲ್ಲಿ ಹೋಯ್ತು? ಸಂಸದರೇ ಹೇಳಿ. ಬಡವರ ಹೊಟ್ಟೆಗೆ ಈಗ ತಲುಪುತ್ತಿರುವುದು ಸಿದ್ದರಾಮಯ್ಯ ಅವರ ಅಕ್ಕಿ
ಮಧು ಬಂಗಾರಪ್ಪ ಸಚಿವ
ಗೀತಾ ನಾಮಪತ್ರ ಸಲ್ಲಿಕೆ ಏ.25ಕ್ಕೆ
ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜಕುಮಾರ್‌ ಏ.15ರಂದು ರಾಮಣ್ಣ ಶ್ರೇಷ್ಟಿ ಪಾರ್ಕಿನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆಯಲ್ಲಿ ಬಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ನಟ ಶಿವರಾಜ್‌ಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲವೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಪಕ್ಷದ ಮುಖಂಡರು ಭಾಗವಹಿಸುವರು ಎಂದರು. ಗೀತಾ ಪರ ಠೇವಣಿ ಹಣವನ್ನು ಮಹಿಳೆಯರೇ ಭರಿಸುತ್ತಿರುವುದು ವಿಶೇಷ ಎಂದು ಮಧು ಬಂಗಾರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT