ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಯಡಿಯೂರಪ್ಪ ಸಾಧನೆಗಳೇ ಶ್ರೀರಕ್ಷೆ: BJP ಅಭ್ಯರ್ಥಿ ಡಾ.ಧನಂಜಯ ಸರ್ಜಿ

Published 31 ಮೇ 2024, 6:46 IST
Last Updated 31 ಮೇ 2024, 6:46 IST
ಅಕ್ಷರ ಗಾತ್ರ
ವಿಧಾನ ಪರಿಷತ್‌ನ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಡಾ.ಧನಂಜಯ ಸರ್ಜಿ  ಕ್ಷೇತ್ರಕ್ಕೆ ಹೊಸಬರು. ಮತದಾರರನ್ನು ಸೆಳೆಯಲು ಪ್ರತಿಯೊಬ್ಬರನ್ನೂ ವ್ಯಕ್ತಿಗತವಾಗಿ ತಲುಪಲು ಪ್ರಯತ್ನಿಸುತ್ತಿದ್ದು,  ಪ್ರಚಾರದ ನಡುವೆಯೇ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಪ್ರ

ಚುನಾವಣೆ ಸಿದ್ಧತೆ ಹೇಗಿದೆ. ಪ್ರಚಾರ ಕಾರ್ಯ ಹೇಗೆ ನಡೆಯುತ್ತಿದೆ?

ಬಿಜೆಪಿ ಮೊದಲಿನಿಂದಲೂ ಶಿಸ್ತಿಗೆ ಹೆಸರಾದ ಪಕ್ಷ. ಚುನಾವಣೆಯ ಸಿದ್ಧತೆಯೂ ಶಿಸ್ತುಬದ್ಧವಾಗಿದೆ. ಇದು ಕಾರ್ಯಕರ್ತರ ಚುನಾವಣೆ. ನಮ್ಮ ಚುನಾವಣೆ ಎಂದೇ ಭಾವಿಸಿ ಕಾರ್ಯಕರ್ತರು ಓಡಾಡುತ್ತಿದ್ದಾರೆ.

ಪ್ರ

ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೀರಿ?

ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನೌಕರರ ಸ್ನೇಹಿ ಆಡಳಿತ ನೀಡಿದ್ದರು. ವೇತನ ಆಯೋಗದ ವರದಿ ಜಾರಿಗೊಳಿಸಿದ್ದರು. ಬಿಜೆಪಿ– ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಪದವೀಧರರ– ವಿಶೇಷವಾಗಿ ಶಿಕ್ಷಕರು, ಉಪನ್ಯಾಸಕರಿಗೆ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ವಿವಿಧ ಭತ್ಯೆಗಳು, ಆರೋಗ್ಯ ಸೌಲಭ್ಯಗಳು, ಮಹಿಳಾ ನೌಕರರಿಗೆ 6 ತಿಂಗಳ ಶಿಶುಪಾಲನಾ ರಜೆ, ರಾಜ್ಯ ಸರ್ಕಾರಿ ನೌಕರರ ಪ್ರಭಾರ ಭತ್ಯೆ ಹೆಚ್ಚಳ ಹಾಗೂ ವಿವಿಧ ಪದವೀಧರರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮಾಡಿದ್ದಾರೆ. ಈ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದೇವೆ. 

ಪ್ರ

ಕ್ಷೇತ್ರದಲ್ಲಿರುವ ಪದವೀಧರರು ನಿಮಗೆ ಏಕೆ ಮತ ನೀಡಬೇಕು?

ಕ್ಷೇತ್ರದಲ್ಲಿ ನನ್ನ ಮಾರ್ಗದರ್ಶಕರಾದ ಡಿ.ಎಚ್. ಶಂಕರಮೂರ್ತಿ ಆರು ಬಾರಿ ಗೆದ್ದು ಬಂದಿದ್ದರು. ಅವರ ಅವಧಿಯಲ್ಲಿ ಪದವೀಧರರು, ವಿಶೇಷವಾಗಿ ಸರ್ಕಾರಿ ನೌಕರರಿಗೆ ಅನೇಕ ಸವಲತ್ತುಗಳು ದೊರೆತಿವೆ. ನನಗೆ ಕೆಲಸ ಮಾಡುವ ಉತ್ಸಾಹ ಇದೆ. ಪದವೀಧರರ ಕಲ್ಯಾಣಕ್ಕೆ ಪಕ್ಷದೊಂದಿಗೆ ನಾನೂ ಬದ್ಧ. ಪ್ರವಾಸೋದ್ಯಮ, ಐಟಿ ಪಾರ್ಕ್, ಮತ್ಸ್ಯೋದ್ಯಮ, ಸ್ಟಾರ್ಟ್ ಅಪ್‌ಗಳಿಗೆ ಹೆಚ್ಚಿನ ಒತ್ತು ಕೊಟ್ಟು ಯುವಕರು ಉದ್ಯೋಗವನ್ನು ಅರಸಿ ಬೇರೆಡೆ ಹೊಗುವುದನ್ನು ತಡೆಯುವೆ. ಈ ಕಾರಣಕ್ಕೆ ನನಗೇ ಮತ ನೀಡುತ್ತಾರೆಂಬ ನಂಬಿಕೆ ಇದೆ.

ಪ್ರ

ಇತರ ಸ್ಪರ್ಧಿಗಳಿಗೆ ಹೋಲಿಸಿದರೆ ನೀವು ಹೊಸಬರು. ಈ ಅಂತರ ಹೇಗೆ ತುಂಬಿಕೊಳ್ಳುತ್ತೀರಿ?

ಅನುಭವದ ವಿಷಯ ಬಹಳ ಸೂಕ್ಷ್ಮವಾದುದು. ಅದಕ್ಕೆ ಮಿತಿ ಹೇರಬಾರದು. ನಮ್ಮ ಪಕ್ಷದ ಸಾಂಘಿಕ ಅನುಭವಿದೆಯಲ್ಲಾ ಪ್ರಾಯಶಃ ಅದಕ್ಕಿಂತ ಬೇರೆ ಅನುಭವವಿರಲಾರದು. ನಾನು ಸಾಂಘಿಕ ಅನುಭವದಲ್ಲಿ ನಂಬಿಕೆ ಇಟ್ಟಿದ್ದೇನೆ. ಒಬ್ಬ ವೈದ್ಯನಾಗಿ ಸಾಮಾಜಿಕ, ಶೈಕ್ಷಣಿಕ, ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ಆರ್‌ಎಸ್‌ಎಸ್‌ನಲ್ಲೂ ನಾನು ಹಳಬ. 10ನೇ ವಯಸ್ಸಿನಿಂದಲೂ ಸ್ವಯಂ ಸೇವಕ. ಐಟಿಸಿ ಮತ್ತು ಒಟಿಸಿ ಕೋರ್ಸ್ 30 ವರ್ಷಗಳ ಹಿಂದೆಯೇ ಮುಗಿದಿದ್ದು, ಒಂದು ಶಾಖೆಯ ಮುಖ್ಯ ಶಿಕ್ಷಕನಾಗಿ, ಹಲವು ಜವಾಬ್ದಾರಿಗಳನ್ನು ನಿರ್ವಹಿಸಿ, ವಿಕಾಸ ಟ್ರಸ್ಟ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಪಕ್ಷದಲ್ಲೂ ಸಕ್ರಿಯನಾಗಿದ್ದೇನೆ.

ಪ್ರ

ಶಾಸಕ ರಘುಪತಿ ಭಟ್ ಅವರ ಬಂಡಾಯದ ಪರಿಣಾಮ ಹೇಗೆ ನಿಭಾಯಿಸುತ್ತಿದ್ದೀರಿ?

ಕರಾವಳಿ ಭಾಗ ಹೇಳಿಕೇಳಿ ಬಿಜೆಪಿಯ ಭದ್ರಕೋಟೆ. ಕಾರಣಾಂತರಗಳಿಂದ ಎದುರಾಗಿರುವ ಮುನಿಸಿಗೆ ಪಕ್ಷ ಹಾಗೂ ಸಂಘ ಶಮನಕಾರಿ ಮದ್ದು ಅರೆದಾಗಿದೆ. ರಘುಪತಿ ಭಟ್ ಅವರನ್ನು ಪಕ್ಷ ಈಗಾಗಲೇ ಉಚ್ಛಾಟನೆ ಮಾಡಿದೆ. ಇಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿಯ ಪ್ರತಿಷ್ಠೆಯಲ್ಲ. ಅವರ ಬಂಡಾಯಕ್ಕೆ ಸೋಲಾಗಲಿದೆ.

ಪ್ರ

ನೀವು ಪಕ್ಷಕ್ಕೂ ಹೊಸಬರು. ಹಣ, ಜಾತಿ ಬಲದಿಂದ ಟಿಕೆಟ್ ಪಡೆದಿದ್ದೀರಿ ಎಂಬುದು ಪಕ್ಷದೊಳಗಿನ ವಿರೋಧಿಗಳ ಆರೋಪ?

ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದಾಗ ಇಂತಹ ಆರೋಪಗಳು ಸಹಜ. ಅದರಲ್ಲಿ ಯಾವುದೇ ಹುರುಳಿಲ್ಲ. ಈ ಬಾರಿ ನನ್ನ ಮೇಲೆ ವಿಶ್ವಾಸ ಇಟ್ಟು ಟಿಕೆಟ್ ಕೊಟ್ಟಿದ್ದಾರೆ.

ಪ್ರ

ರಘುಪತಿ ಭಟ್ ಅವರಿಗೆ ರಾಷ್ಟ್ರಭಕ್ತರ ಬಳಗದ ಹೆಸರಲ್ಲಿ ಕೆ.ಎಸ್.ಈಶ್ವರಪ್ಪ ಬೆಂಬಲ ಕೊಟ್ಟಿದ್ದಾರೆ. ನಿಮಗೆ ಮತ ಕೊಡಿ ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ. ಮತ್ತೆ ಈ ಚುನಾವಣೆಯೂ ಯಡಿಯೂರಪ್ಪ–ಈಶ್ವರಪ್ಪ ನಡುವಿನ ಹೋರಾಟವಾ?

ಲೋಕಸಭಾ ಚುನಾವಣೆ ವೇಳೆ ಪಕ್ಷದಿಂದ ಉಚ್ಛಾಟನೆಗೊಂಡಿರುವ ಈಶ್ವರಪ್ಪ, ಈಗ ‍‍ಪರಿಷತ್ ಚುನಾವಣೆ ವೇಳೆ ಉಚ್ಚಾಟನೆಗೊಂಡಿರುವ ರಘುಪತಿ ಭಟ್ ಇಬ್ಬರೂ ಇಲ್ಲಿಯವರೆಗೆ ಸ್ವತಂತ್ರವಾಗಿ ಬೆಳೆದವರಲ್ಲ. ಇಬ್ಬರಿಗೂ ಇದ್ದದ್ದು ಪಕ್ಷದ ಬಲ. ಅವರ ಬೆಳವಣಿಗೆಗೆ ಪಕ್ಷವೇ ತಾಯಿ ಬೇರು. ಇದೀಗ ತಾಯಿ ಬೇರನ್ನೇ ತುಂಡರಿಸಿಕೊಂಡವರಿಗೆ ನಾನೇನು ಹೇಳಲಿ. ಪ್ರಜ್ಞಾವಂತ ಜನರೇ ಸೂಕ್ತ ಉತ್ತರ ಕೊಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT