ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನೈರುತ್ಯ ಪದವೀಧರ, ಶಿಕ್ಷಕರ ಕ್ಷೇತ್ರ: ಮತದಾನ ನಾಳೆ

Published 1 ಜೂನ್ 2024, 23:35 IST
Last Updated 1 ಜೂನ್ 2024, 23:35 IST
ಅಕ್ಷರ ಗಾತ್ರ

ಶಿವಮೊಗ್ಗ: ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಜೂನ್ 3 ರಂದು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಒಟ್ಟು 27,412 ಮತದಾರರು ಇದ್ದಾರೆ. 38 ಮತಕೇಂದ್ರಗಳ ತೆರೆಯಲಾಗಿದೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 4365 ಮತದಾರರು ಇದ್ದು ಒಟ್ಟು 32 ಮತಕೇಂದ್ರಗಳನ್ನು ತೆರೆಯಲಾಗಿದೆ. ತಮ್ಮ ಮತ ಇರುವ ಕೇಂದ್ರದಲ್ಲಿ ಮತದಾನ ಮಾಡಬಹುದಾಗಿದೆ.

ಮತದಾನ ಮಾಡಲು ಚುನಾವಣಾ ಆಯೋಗ ಸೂಚಿಸಿರುವ ಭಾವಚಿತ್ರ ಇರುವ ಯಾವುದೇ ಗುರುತಿನ ಚೀಟಿ ತೋರಿಸಬಹುದು. ವಿಧಾನಪರಿಷತ್ ಚುನಾವಣೆಗೆ ಮತದಾನಕ್ಕಾಗಿ ಜೂನ್ 2ರಂದು ಬೆಳಿಗ್ಗೆ 10 ಗಂಟೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿ ಎಲ್ಲಾ ತಾಲ್ಲೂಕು ಕಚೇರಿಗಳಲ್ಲಿ ಮಸ್ಟರಿಂಗ್ ಕಾರ್ಯ ಆರಂಭವಾಗಲಿದೆ.

ಜೂನ್‌ 3ರಂದು ಸಂಜೆ 4 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಮತಪೆಟ್ಟಿಗೆಗಳನ್ನು ಮತ್ತು ಶಾಸನಬದ್ಧ ಲಕೋಟೆಗಳನ್ನು ಡಿಮಸ್ಟರಿಂಗ್ ಕೇಂದ್ರದಲ್ಲಿ ಕ್ರೋಢೀಕರಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಗೆ ತರಲಾಗುವುದು. ನಂತರ ಪೊಲೀಸ್‌ ಬೆಂಗಾವಲಿನಲ್ಲಿ ಮೈಸೂರು ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿಗೆ ಒಯ್ದು ಅಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಯಲ್ಲಿ ಮತಪೆಟ್ಟಿಗೆಗಳನ್ನು ಇರಿಸಲಾಗುತ್ತಿದೆ.

ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆಗಳ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಜೂನ್‌ 1ರಂದು ಸಂಜೆ 4 ಗಂಟೆಯಿಂದ ಜೂನ್‌ 3ರ ಮಧ್ಯಾಹ್ನ 4 ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ
ಸಾಂದರ್ಭಿಕ ರಜೆ ನೀಡಲು ಆದೇಶ
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ಮಾಡಲು ಜೂನ್‌ 3ರಂದು ಮತದಾರರಿಗೆ ರಜೆ ನೀಡುವಂತೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾಸಂಸ್ಥೆಗಳು ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು ರಾಷ್ಟ್ರೀಕೃತ ಹಾಗೂ ಇತರ ಬ್ಯಾಂಕುಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು ಕೈಗಾರಿಕಾ ಸಂಸ್ಥೆಗಳು ಹಾಗೂ ಸಹಕಾರಿ ಸಂಘ ಸಂಸ್ಥೆಗಳಲ್ಲಿ ಕಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಪದವೀಧರರು ಹಾಗೂ ಶಿಕ್ಷಕರಿಗೆ ಸಾಂದರ್ಭಿಕ ರಜೆ ಮಂಜೂರು ಮಾಡುವಂತೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT