ಗುರುವಾರ , ಅಕ್ಟೋಬರ್ 6, 2022
26 °C
ಸುಗಮ ಸಂಗೀತದಲ್ಲಿ ಛಾಪು ಮೂಡಿಸಿದ ಶ್ರೇಯ

ಲೆಕ್ಕ ಪರಿಶೋಧಕ ಸುಬ್ಬಣ್ಣ ಹಿನ್ನೆಲೆ ಗಾಯಕನಾದ ಪರಿ..

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಅದು 70ರ ದಶಕ. ಮರಾಠಿಯ ತ್ರಿಪೆನ್ನೀಕಿ ಒಪೆರಾದ ಕನ್ನಡ ಅವತರಿಣಿಕೆ ಮೂರುಕಾಸಿನ ಆಟ ನಾಟಕವನ್ನು ಶಿವಮೊಗ್ಗದ ಅಭಿನಯ ತಂಡದವರು ನ್ಯಾಷನಲ್ ಹೈಸ್ಕೂಲ್ ಆವರಣದಲ್ಲಿ ಪ್ರದರ್ಶಿಸುತ್ತಿದ್ದರು. ನಾಟಕದ ಹಿನ್ನೆಲೆಯಲ್ಲಿ ಹಾಡುತ್ತಿದ್ದ ಯುವಕನೊಬ್ಬ ಕಲಾಪ್ರೇಮಿಗಳು ಗಮನ ಸೆಳೆಯುತ್ತಿದ್ದರು. ಅದೇ ಯುವಕ ಅದೊಮ್ಮೆ ಚಂದ್ರಶೇಖರ ಕಂಬಾರ ಅವರ ಕಣ್ಣಿಗೆ ಬಿದ್ದದ್ದು ವಿಶೇಷ. ಕಂಬಾರರು ತಮ್ಮ ಕಾಡು ಕುದುರೆ ಸಿನಿಮಾಗೆ ಸಂಪ್ರದಾಯಿಕತೆಗೆ ಹೊರತಾಗಿ ಭಿನ್ನ ದನಿಯ ಗಾಯಕನ ಹುಡುಕಾಟದಲ್ಲಿದ್ದರು. ಆಗ ಮುನ್ನೆಲೆಗೆ ಬಂದವರು ಶಿವಮೊಗ್ಗ ಸುಬ್ಬಣ್ಣ. 

ಸುಬ್ಬಣ್ಣ ಅದಾಗಲೇ ಅಭಿನಯ ತಂಡದ ಮೂರುಕಾಸಿನ ಆಟ, ಸ್ವರ್ಗಕ್ಕೆ ಮೂರೇ ಬಾಗಿಲು, ತುಘಲಕ್, ನಮ್ಮನಿಮ್ಮೊಳಗೊಬ್ಬ, ಡಾ.ಸಿದ್ಧರಾಜು, ಮ್ಯಾಕ್‌ಬೆತ್ ನಾಟಕಗಳ ಮೂಲಕ ಹಿನ್ನೆಲೆ ಗಾಯಕನಾಗಿ ಶಿವಮೊಗ್ಗದ ರಂಗಾಸಕ್ತರಿಗೆ ಪರಿಚಿತರಾಗಿದ್ದರು.

ಎಸ್.ಗಣೇಶರಾವ್ ಹಾಗೂ ರಂಗನಾಯಕಿ ದಂಪತಿಯ 12 ಮಕ್ಕಳಲ್ಲಿ ಮೊದಲನೆಯವರು ಸುಬ್ಬಣ್ಣ.  ಇಲ್ಲಿನ ತಿಲಕ್‌ನಗರದಲ್ಲಿ ಮನೆ. ತಂದೆ ಅರಣ್ಯ ಇಲಾಖೆಯಲ್ಲಿ ನಿವೃತ್ತ ಸೂಪರಿಟೆಂಡೆಂಟ್. ಸುಬ್ಬಣ್ಣ ಮೊದಲಿಗೆ ಇಲ್ಲಿನ ಬಿ.ಎಚ್. ರಸ್ತೆಯ ಕರ್ನಾಟಕ ಸಂಘದ ಎದುರಿನ ಕಟ್ಟಡದ ಮಹಡಿ ಮೇಲೆ ಲೆಕ್ಕಪರಿಶೋಧನೆ  ಕಚೇರಿ ಹೊಂದಿದ್ದರು. ಕೆಲಕಾಲ ವಕೀಲಿ ವೃತ್ತಿ ಮಾಡಿದ್ದರು. ಪ್ರವೃತ್ತಿಯಾಗಿ ಹಿನ್ನೆಲೆ ಗಾಯನ ಒಲಿದಿತ್ತು.

ಚಂದ್ರಶೇಖರ ಕಂಬಾರ ಅವರ ಕಾಡುಕುದುರೆ ಸಿನಿಮಾದಲ್ಲಿ ಹಾಡು ಹೇಳಲು ದೊರೆತ ಅವಕಾಶ ಅವರ ಬದುಕಿನ ದಿಕ್ಕು ಬದಲಾಯಿಸಿತು. ಆ ಹಾಡಿಗೆಕೆ ರಾಷ್ಟ್ರಪ್ರಶಸ್ತಿ ಕೂಡ ಬಂದಿತು. ಮೊಟ್ಟಮೊದಲ ಬಾರಿಗೆ ಕನ್ನಡದ ಹಿನ್ನೆಲೆ ಗಾಯಕರೊಬ್ಬರು ರಾಷ್ಟ್ರಪ್ರಶಸ್ತಿ ಪಡೆದ ಶ್ರೇಯಕ್ಕೆ ಭಾಜನರಾದರು. ಅಲ್ಲಿಂದ ಅವರು ಬೆಂಗಳೂರಿಗೆ ವಾಸ್ತವ್ಯ ಬದಲಿಸಿದರು.

ಸುಬ್ಬಣ್ಣ ಪ್ರಯೋಗಾತ್ಮಕ ಸಿನಿಮಾಗಳಿಗೆ ಹಾಡಿದ್ದಾರೆ. ಸುಗಮ ಸಂಗೀತ ಜನರ ಬಾಯಿಂದ ಬಾಯಿಗೆ ಹರಿದಾಡುವಲ್ಲಿ ಇವರ ಪಾತ್ರ ಬಹಳ ದೊಡ್ಡದು. ಅವರು ಸಂಗೀತದ ಅಬ್ಬರಕ್ಕೆ ಪ್ರಾಶಸ್ತ್ಯ ಕೊಡುತ್ತಿರಲಿಲ್ಲ. ಮಾಧುರ್ಯಕ್ಕೆ ಮಾತ್ರ ಒತ್ತು ಕೊಡುತ್ತಿದ್ದರು. ಸಂಗೀತದಲ್ಲಿನ ಸಾಹಿತ್ಯ ಹಾಗೂ ಅದನ್ನು ಬರೆದ ಕವಿಗಳು ಜನರಿಗೆ ತಲುಪಬೇಕು ಹೊರತು ಅಬ್ಬರವಲ್ಲ ಎಂಬುದು ಅವರ ನಿಲುವು ಎಂದು ಸುಬ್ಬಣ್ಣ ಅವರ ಒಡನಾಡಿ ಶಿವಮೊಗ್ಗದ ವೈದ್ಯನಾಥ್ ನೆನಪಿಸಿಕೊಳ್ಳುತ್ತಾರೆ.

ಸುಬ್ಬಣ್ಣ ಕಂಚಿನ ಕಂಠದ ಗಾಯಕ. ಕವಿ  ಕೆ.ಎಸ್.ನಿಸಾರ್ ಅಹಮದ್ ಅವರ ಗೀತೆಗಳ ಸಂಗ್ರಹ ನಿತ್ಯೋತ್ಸವ ಅವರ ಮೊದಲ ಕ್ಯಾಸೆಟ್. ನಂತರದ್ದು ಎನ್‌.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರ ಭಾವಗೀತೆಗಳನ್ನು ಜನಮಾನಸಕ್ಕೆ ತಲುಪಿಸಿದ ದೀಪಿಕಾ ಜನಪ್ರಿಯಗೊಂಡವು. ಸಂತಶಿಶುನಾಳ ಶರೀಫರ ಗೀತೆಗಳನ್ನು ನಾಡಿಗೆ ತಲುಪಿಸಿದ ಶ್ರೇಯ ಸುಬ್ಬಣ್ಣ ಅವರಿಗೆ ಸಲ್ಲುತ್ತದೆ. ಸುಬ್ಬಣ್ಣ ಅವರ ಗೀತೆಯಲ್ಲಿ  ಬುಲ್‌ಬುಲ್ ತರಂಗ, ಹಾರ್ಮೋನಿಯಂ, ತಬಲಾ ಮಾತ್ರ ಬಳಕೆ ಮಾಡುತ್ತಿದ್ದದ್ದು ವಿಶೇಷ. ಶಿವಮೊಗ್ಗದ ಕರ್ನಾಟಕ ಸಂಘದ ಗೌರವ ಸದಸ್ಯತ್ವ
ಕೊಟ್ಟಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು