ಇಲ್ಲಿನ ಗಣಪತಿ ಕೆರೆ ಮೇಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಕೆರೆಯ ಎರಡೂ ಭಾಗದ ರಸ್ತೆಯಲ್ಲಿ ಇಂಟರ್‌ಲಾಕ್ ಅಳವಡಿಸಿ ಗಿಡ ನೆಡಲಾಗುವುದು’ ಎಂದು ಹೇಳಿದರು.
‘ಕೆರೆಯ ಸುತ್ತಲೂ ವಾಯುವಿಹಾರಿಗಳು ಕುಳಿತುಕೊಳ್ಳಲು ಅನುಕೂಲವಾಗುವಂತೆ ಆಸನಗಳನ್ನು ಅಳವಡಿಸಲಾಗುವುದು. ಕೆರೆಯ ಸೌಂದರ್ಯ ಹೆಚ್ಚಿಸಲು ಅಗತ್ಯವಿರುವ ಕಾಮಗಾರಿ ನಡೆಸಲಾಗುವುದು. ಆದರೆ, ರಾಜ್ಯ ಸರ್ಕಾರದ ಯಾವುದೇ ಹಣವನ್ನು ಈ ಕಾಮಗಾರಿಗೆ ಬಳಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
‘ಈ ಹಿಂದೆ ಗಣಪತಿ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಹಲವು ವಿವಾದಗಳಿವೆ. ಕೆರೆಯ ಪ್ರದೇಶ ಒತ್ತುವರಿಯಾಗಿರುವ ದೂರುಗಳೂ ಇವೆ. ಇವುಗಳನ್ನು ಗಮನದಲ್ಲಿಟ್ಟುಕೊಂಡೇ ಕೆರೆಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು’ ಎಂದು ಅವರು ಹೇಳಿದರು.
‘ಗಣಪತಿ ಹಬ್ಬದ ಸಂದರ್ಭದಲ್ಲಿ ಗಣಪತಿ ಕೆರೆಯಲ್ಲಿ ಗಣೇಶನ ವಿಗ್ರಹ ವಿಸರ್ಜಿಸುವವರಿಗೆ ತೊಂದರೆಯಾಗದಂತೆ ಕೆರೆಯ ಸಮೀಪ ವಿದ್ಯುತ್ ದೀಪ ಅಳವಡಿಸಲು ಸೂಚನೆ ನೀಡಲಾಗಿದೆ. ವಿಸರ್ಜನಾ ಸ್ಥಳದಲ್ಲಿ ಹೆಚ್ಚಿನ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗುವುದು. ಗಣಪತಿ ವಿಗ್ರಹವನ್ನು ಹೊತ್ತು ತರುವ ಸ್ಥಳದಲ್ಲಿ ಮ್ಯಾಟ್ ಅಳವಡಿಸಲಾಗುವುದು’ ಎಂದು ಅವರು ತಿಳಿಸಿದರು.
‘ಮಲೆನಾಡು ಭಾಗದಲ್ಲಿ ಕೊಳೆರೋಗ, ಅತಿವೃಷ್ಟಿಯಿಂದ ವ್ಯಾಪಕ ಪ್ರಮಾಣದಲ್ಲಿ ಅಡಿಕೆ ಬೆಳೆ ನಾಶವಾಗಿದೆ. ಈಗಾಗಲೆ ಅಡಿಕೆ ಬೆಳೆಗಾರರ ಸಂಘದವರು ಪರಿಹಾರ ನೀಡುವಂತೆ ಪ್ರತಿಭಟನೆ ಮಾಡಿದ್ದಾರೆ. ಅಗತ್ಯ ಬಿದ್ದರೆ ಬೆಳೆಗಾರರ ನಿಯೋಗವನ್ನು ಮುಖ್ಯಮಂತ್ರಿ ಬಳಿ ಕರೆದೊಯ್ಯಲಾಗುವುದು’ ಎಂದು ಅವರು ಹೇಳಿದರು.
ನಗರಸಭೆ ಸದಸ್ಯರಾದ ಕುಸುಮಾ ಸುಬ್ಬಣ್ಣ, ಎನ್.ಲಲಿತಮ್ಮ, ಗಣಪತಿ ಮಂಡಗಳಲೆ, ಸಬೀನಾ ತನ್ವೀರ್, ಎಲ್.ಚಂದ್ರಪ್ಪ, ರವಿ ವಿಜಯನಗರ, ಶಬಾನಾ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಪ್ರಮುಖರಾದ ಕಲಸೆ ಚಂದ್ರಪ್ಪ, ಎನ್.ಉಷಾ, ಪರಿಮಳ, ತಾಹೀರ್ , ಸೋಮಶೇಖರ್ ಲ್ಯಾವಿಗೆರೆ ಇದ್ದರು.