ಸೋಮವಾರ, 8 ಡಿಸೆಂಬರ್ 2025
×
ADVERTISEMENT
ADVERTISEMENT

ಶಿವಮೊಗ್ಗ| ಕೆಟ್ಟು ನಿಂತ ಮಳೆ ಮಾಪನ ಯಂತ್ರಗಳು: ವಿಮಾ ಕಂಪನಿಗೆ ವರದಾನ; ರೈತರ ರೋಧನ

Published : 8 ಡಿಸೆಂಬರ್ 2025, 5:16 IST
Last Updated : 8 ಡಿಸೆಂಬರ್ 2025, 5:16 IST
ಫಾಲೋ ಮಾಡಿ
Comments
ಹಿಂದಿನ ವರ್ಷಕ್ಕೂ ಈಗ ಆಕಾಶ, ಭೂಮಿಯಷ್ಟು ಅಂತರ..
ಸಾಗರ ತಾಲ್ಲೂಕಿನ ಸೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು 2023ನೇ ಸಾಲಿನಲ್ಲಿ ಪ್ರತೀ ಹೆಕ್ಟೇರ್‌ಗೆ ₹ 74 ಸಾವಿರ ವಿಮಾ ಪರಿಹಾರ ಮೊತ್ತ ಪಡೆದಿದ್ದರು. ಈ ಬಾರಿ ಅವರಿಗೆ ಹೆಕ್ಟೇರ್‌ಗೆ ₹17,200 ಬಂದಿದೆ. ಕಳೆದ ವರ್ಷಕ್ಕಿಂತ ₹ 57 ಸಾವಿರ ಕಡಿಮೆ ಆಗಿದೆ. ಕೋಳೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದಿನ ವರ್ಷ ₹ 74 ಸಾವಿರ ಬಂದಿತ್ತು. ಈ ಬಾರಿ ಅದು ₹ 9,000ಕ್ಕೆ ಇಳಿದಿದೆ. ಕೆಳದಿ ಪಂಚಾಯಿತಿಯಲ್ಲಿ ₹21,000 ಇದ್ದದ್ದು, ₹ 6,800ಕ್ಕೆ ಕುಸಿದಿದೆ. ತ್ಯಾಗರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹64,000 ಇದ್ದದ್ದು, 2024ನೇ ಸಾಲಿನಲ್ಲಿ ₹6,200ಕ್ಕೆ ಇಳಿಕೆಯಾಗಿದೆ. ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2023ರಲ್ಲಿ ₹ 74,000 ಬಂದಿದ್ದ ವಿಮಾ ಮೊತ್ತ ಈ ಬಾರಿ ₹2,200ಕ್ಕೆ ಇಳಿಕೆಯಾಗಿದೆ. ಬರೀ ಸಾಗರ ತಾಲ್ಲೂಕು ಮಾತ್ರವಲ್ಲ ಮಲೆನಾಡು ಭಾಗದ ತೀರ್ಥಹಳ್ಳಿ, ಹೊಸನಗರ ತಾಲ್ಲೂಕುಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೀಗೊಂದಷ್ಟು ಮ್ಯಾಜಿಕ್..
ಸಾಗರ ತಾಲ್ಲೂಕಿನ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಮಾ ಪರಿಹಾರ ಮೊತ್ತ ಹೆಕ್ಟೇರ್‌ಗೆ ₹2,200 ಬಿಡುಗಡೆಯಾಗಿದೆ. ವಿಶೇಷವೆಂದರೆ ಪಕ್ಕದ ಎಸ್‌.ಎಸ್‌.ಭೋಗ್‌ಗೆ ₹ 67,000, ಬಾನುಕುಳಿಗೆ ₹ 84,000, ಕುದರೂರು ಗ್ರಾಮ ಪಂಚಾಯಿತಿಗೆ ₹ 74,000 ಬಂದಿದ್ದು, ಇದು ವಿಮೆ ಮಾನದಂಡದ ಅವೈಜ್ಞಾನಿಕತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ. ಸಾಗರ ತಾಲ್ಲೂಕಿನ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ₹16,134 ವಿಮಾ ಪರಿಹಾರ ಮೊತ್ತ ದೊರೆತಿದೆ. ಪಕ್ಕದ ತಲವಾಟದ ರೈತರಿಗೆ ₹ 73,300 ಪರಿಹಾರ ಸಿಕ್ಕಿದೆ. ವಿಶೇಷವೆಂದರೆ ಅರಳಗೋಡಿನಲ್ಲಿ ಮಳೆ ಮಾಪನ ಯಂತ್ರ ಕೆಟ್ಟಿದೆ. ಅದಕ್ಕೆ ಬ್ಯಾಕಪ್ (ಪರ್ಯಾಯ) ಆಗಿ ಪಕ್ಕದ ತಲವಾಟ ಪಂಚಾಯಿತಿಯ ಮಳೆ ಮಾಪನ ಯಂತ್ರದ ದತ್ತಾಂಶವನ್ನು ಪರಿಗಣಿಸಬೇಕಿತ್ತು. ಅದರ ಬದಲಿಗೆ ಅಲ್ಲಿಂದ 35 ಕಿ.ಮೀ ದೂರದ ಕಾನಲೆಯಲ್ಲಿ ಬಿದ್ದ ಮಳೆಯನ್ನು ಪರಿಗಣಿಸಲಾಗಿದೆ. ತುಮರಿಯಲ್ಲಿನ ಮಳೆ ಪ್ರಮಾಣ ಗುರುತಿಸಲು ಪಕ್ಕದ ಕುದರೂರು ಇಲ್ಲವೇ ನಿಟ್ಟೂರು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಬೇಕಿತ್ತು. ಆದರೆ 40 ಕಿ.ಮೀ ದೂರದ ಹೊಸನಗರ ಕಸಬಾ ಹೋಬಳಿಯಲ್ಲಿ ಬಿದ್ದ ಮಳೆಯ ದತ್ತಾಂಶವನ್ನು ಪರಿಗಣಿಸಲಾಗಿದೆ ಎಂಬುದು ರೈತರ ಅಳಲು.
‘ಟರ್ಮ್‌ಶೀಟ್‌ನಲ್ಲೂ ಅನ್ಯಾಯ, ಮೋಸದ ಉದ್ದೇಶ’
‘ಈ ಹಿಂದೆ ಪ್ರತೀ ದಿನ ಬಿದ್ದ ಮಳೆ ಪ್ರಮಾಣದ ಮಾಹಿತಿ ರೈತರ ಮೊಬೈಲ್‌ಫೋನ್‌ಗೆ ಬರುತ್ತಿತ್ತು. ಅದನ್ನು ಈಗ ನಿಲ್ಲಿಸಲಾಗಿದೆ. ಗ್ರಾಮ ಪಂಚಾಯಿತಿ ಪಿಡಿಒಗಳಿಗೆ ಬರುತ್ತಿದ್ದ ಸಂದೇಶವೂ ಇಲ್ಲವಾಗಿದೆ. ಮಳೆ ಬಿದ್ದ ಪ್ರಮಾಣದ ಬಗ್ಗೆ ಯಾವುದೇ ಖಾಸಗಿ ದತ್ತಾಂಶದ ದಾಖಲೆ ಪರಿಗಣಿಸುವಂತಿಲ್ಲ ಎಂದು ಸರ್ಕಾರದಿಂದ ವಿಮಾ ಕಂಪನಿಯವರು ಆದೇಶ ಮಾಡಿಸಿದ್ದಾರೆ. ಇದರ ಹಿಂದಿನ ಉದ್ದೇಶವೇನು? ಖಾಸಗಿಯವರು ಕೊಟ್ಟ ದತ್ತಾಂಶ ಇಟ್ಟುಕೊಂಡು ರೈತರು ಹೆಚ್ಚಿನ ವಿಮಾ ಮೊತ್ತ ಕೋರಿ ನ್ಯಾಯಾಲಯಕ್ಕೆ ಹೋಗಬಹುದು ಎಂಬುದೇ ಆಗಿದೆ’ ಎಂದು ಮಲ್ಲಿಕಾರ್ಜುನ ಹಕ್ರೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ‘2024ರಲ್ಲಿ ವಿಮಾ ಪರಿಹಾರ ಮೊತ್ತ ನಿಗದಿ ಮಾಡುವಾಗ ಯಾವುದೇ ಮಾನದಂಡ ಬಳಕೆಯಾಗಿಲ್ಲ. ರೈತರಿಗೆ ಮೋಸ ಮಾಡುವ ಉದ್ದೇಶದಿಂದಲೇ ಹಾಳಾದ ಮಳೆ ಮಾಪನ ಯಂತ್ರಗಳನ್ನು ದುರಸ್ತಿ ಮಾಡದೇ ಹಾಗೆಯೇ ಬಿಟ್ಟಿದ್ದಾರೆ’ ಎಂಬುದು ಅವರ ಗಂಭೀರ ಆರೋಪ. ‘ವಿಮಾ ಮೊತ್ತ ನಿಗದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಟರ್ಮ್‌ಶೀಟ್ ಸಿದ್ಧಪಡಿಸಲಾಗುತ್ತದೆ. ಈ ವೇಳೆ ವಿಮಾ ಕಂಪನಿಯವರಿಗೆ ಅನುಕೂಲ ಮಾಡಿಕೊಡಲಾಗಿದೆ. ಮೊದಲಿಗೆ ದಿನಕ್ಕೆ 3 ಸೆಂ.ಮೀ ನಂತೆ ಸತತ ಮೂರು ದಿನ ಮಳೆ ಬಂದರೆ ಅದು ನಾಲ್ಕನೇ ದಿನವೂ ಮುಂದುವರೆದರೆ ಹೆಕ್ಟೇರ್‌ಗೆ ನಿತ್ಯ ₹ 5,200 ವಿಮಾ ಪರಿಹಾರ ಮೊತ್ತ ನಿಗದಿ ಮಾಡಬೇಕಿತ್ತು. ಅದನ್ನು ಈಗ ಆರು ದಿನಕ್ಕೆ ವಿಸ್ತರಿಸಲಾಗಿದೆ. ಆರು ದಿನಗಳ ಒಳಗಾಗಿ ಮಳೆ ಕಡಿಮೆಯಾದರೆ ಪರಿಹಾರ ಇಲ್ಲ. ಈ ಮೊದಲು ಸತತ ನಾಲ್ಕು ದಿನ 32 ಸೆಂ.ಮೀ ಮಳೆ ಬಿದ್ದಾಗ ₹ 48 ಸಾವಿರ ಪರಿಹಾರ ಕೊಡಬೇಕಿತ್ತು. ಆ ಸ್ಲ್ಯಾಬ್‌ ಈಗ ₹ 15,200ಕ್ಕೆ ಇಳಿಸಿದ್ದಾರೆ. ಈ ಮೊದಲು ವಿಮಾ ಅವಧಿ ಜೂನ್‌ 1ರಿಂದ ಮೇ 31ರವರೆಗೆ ಇರುತ್ತಿತ್ತು. ಈಗ ಅದನ್ನು ಆಗಸ್ಟ್‌ಗೆ ಬದಲಾಯಿಸಲಾಗಿದೆ. ಜೂನ್‌–ಜುಲೈನಲ್ಲಿ ಮಳೆ ಬಿದ್ದರೆ ಪರಿಹಾರವೇ ಇಲ್ಲ. ಬೇಸಿಗೆಯಲ್ಲಿ ಎರಡು ದಿನ ಸತತವಾಗಿ 35 ಸೆಂಟಿ ಗ್ರೇಡ್ ಉಷ್ಣಾಂಶ ದಾಖಲಾದರೆ ದಿನಕ್ಕೆ ಹೆಕ್ಟೇರ್‌ಗೆ ₹2,500 ವಿಮಾ ಪರಿಹಾರ ಕೊಡಬೇಕಿದೆ. ಅದನ್ನು ಈಗ 38 ಸೆಂಟಿ ಗ್ರೇಡ್‌ಗೆ ಹೆಚ್ಚಳಗೊಳಿಸಿದ್ದಾರೆ’ ಎಂದು ಹಕ್ರೆ ಹೇಳುತ್ತಾರೆ.
ನಿರ್ವಹಣೆ ಹೊಣೆ ವಿಜ್ಞಾನ ಕೇಂದ್ರಗಳಿಗೆ ವಹಿಸಿ..
‘ಮಳೆ ಮಾಪನ ಯಂತ್ರಗಳನ್ನು ಈ ಮೊದಲು ಜಿಲ್ಲಾ ವಿಜ್ಞಾನ ಕೇಂದ್ರಗಳ ಮೂಲಕ ಸರ್ಕಾರವೇ ನಿರ್ವಹಣೆ ಮಾಡುತ್ತಿತ್ತು. ಆಗ ಯಾವುದೇ ಸಮಸ್ಯೆ ಇರಲಿಲ್ಲ. ಈಗ ಯಂತ್ರಗಳ ಅಳವಡಿಕೆ, ನಿರ್ವಹಣೆಯನ್ನು ಖಾಸಗಿಯವರಿಗೆ ಹೊರಗುತ್ತಿಗೆ ನೀಡಲಾಗುತ್ತಿದೆ. ಗುತ್ತಿಗೆ ಪಡೆದವರು ಬಿಲ್‌ಗೋಸ್ಕರ ಕಳಪೆ ಸಾಮಗ್ರಿ ಅಳವಡಿಸುತ್ತಾರೆ. ಆ ಯಂತ್ರಗಳು ಸರಿಯಾದ ಸೇವೆ ಕೊಡಲು ಸಾಧ್ಯವಿಲ್ಲ. ನಿರ್ವಹಣೆಗೆ ಸರಿಯಾದ ಸಿಬ್ಬಂದಿಯೂ ಇಲ್ಲ. ದುರಸ್ತಿಯ ಹೊಣೆ ಕೂಡ ಅದೇ ಏಜೆನ್ಸಿಗೆ ಕೊಟ್ಟಿರುತ್ತಾರೆ. ಸರ್ಕಾರದಲ್ಲಿ ಬಿಲ್‌ ಮಾಡಲು ಎಷ್ಟು ಬೇಕೋ ಅಷ್ಟು ಮಾತ್ರ ಅವರು ಮಾಡುತ್ತಾರೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೆ.ಟಿ.ಗಂಗಾಧರ ಹೇಳುತ್ತಾರೆ. ‘ಮಳೆಮಾಪನ ಯಂತ್ರಗಳ ವರದಿ ಆಧರಿಸಿ ಎಲ್ಲ ವಿಮಾ ಕ್ಲೇಮುಗಳು ಬರುತ್ತವೆ. ಅದೇ ದತ್ತಾಂಶ ಸರಿಯಾಗಿ ಇಲ್ಲದಿದ್ದರೆ ವಿಮಾ ಕಂಪನಿಯವರು ಅದನ್ನು ಒಪ್ಪುವುದಿಲ್ಲ. ಸರ್ಕಾರ ತಾನೇ ಮಾಡಿಕೊಂಡ ಈ ವ್ಯವಸ್ಥೆಗೆ ರೈತನನ್ನು ಬಲಿ ಕೊಡುವುದು ಸರಿಯಲ್ಲ. ಮಳೆಮಾಪನ ಯಂತ್ರಗಳ ಮೇಲ್ವಿಚಾರಣೆ ಮಾಡಬೇಕಿದ್ದ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಿ. ಈ ಮೊದಲಿನಂತೆ ವಿಜ್ಞಾನ ಕೇಂದ್ರಗಳಿಗೆ ನಿರ್ವಹಣೆಯ ಹೊಣೆ ವಹಿಸಲಿ’ ಎಂದು ಆಗ್ರಹಿಸುತ್ತಾರೆ.
ADVERTISEMENT
ADVERTISEMENT
ADVERTISEMENT