ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಸ್ಮಾರ್ಟ್ ಸಿಟಿ: ಸೈಕಲ್ ಹಾದಿಯೇ ಕಣ್ಮರೆ!

Published 20 ಡಿಸೆಂಬರ್ 2023, 6:49 IST
Last Updated 20 ಡಿಸೆಂಬರ್ 2023, 6:49 IST
ಅಕ್ಷರ ಗಾತ್ರ

ಶಿವಮೊಗ್ಗ: ಹಸಿರು ಶಿವಮೊಗ್ಗ ಕನಸಿನಡಿ ನಗರದ ಜನರ ಓಡಾಟಕ್ಕೆ ಸೈಕಲ್ ಪರಿಚಯಿಸಲು ಸ್ಮಾರ್ಟ್ ಸಿಟಿ ಸಿದ್ಧತೆ ನಡೆಸಿದೆ. ಅಚ್ಚರಿಯೆಂದರೆ ₹ 50 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಸೈಕಲ್‌ಗಳ ಓಡಾಟಕ್ಕೆ ಸಿದ್ಧಪಡಿಸಿದ್ದ 34 ಕಿ.ಮೀ ದೂರದ ಬೈಸಿಕಲ್‌ ಪಾಥ್ (ಸೈಕಲ್ ಹಾದಿ) ಮಾತ್ರ ಕಣ್ಮರೆಯಾಗಿದೆ.

ಏನಿದು ಬೈಸಿಕಲ್ ಪಾಥ್: ಸೈಕಲ್‌ಗಳ ಓಡಾಟಕ್ಕೆ ಪ್ರತ್ಯೇಕ ಹಾದಿ ಗುರುತಿಸಿದ್ದ ಸ್ಮಾರ್ಟ್ ಸಿಟಿ ಸಂಸ್ಥೆ ಅದಕ್ಕೆ ಟೈಲ್ಸ್‌, ಸಿಮೆಂಟ್‌ನ ಪಟ್ಟಿ ಅಳವಡಿಸಿ ವಿಶೇಷವಾಗಿ ಸಜ್ಜುಗೊಳಿಸಿತ್ತು. ಅದಕ್ಕೆ ಈ ಮೊದಲು ಬಳಕೆಯಲ್ಲಿದ್ದ ವಾಹನ ಪಾರ್ಕಿಂಗ್ ಸ್ಥಳವೇ 1.5 ಮೀಟರ್‌ನಿಂದ 2.5 ಮೀಟರ್‌ ವಿಸ್ತೀರ್ಣದ ಸೈಕಲ್‌ ಹಾದಿಯಾಗಿ ರೂಪು ಪಡೆದಿತ್ತು.

ವಿಶೇಷವೆಂದರೆ ಆ ಹಾದಿ ಈಗ ಮೊದಲಿನಂತೆಯೇ ಪಾರ್ಕಿಂಗ್ ಸ್ಥಳವಾಗಿ ಬಳಕೆಯಾಗುತ್ತಿದೆ. ಜೊತೆಗೆ ನೂರಾರು ಮಂದಿ ಬೀದಿ ಬದಿ ವ್ಯಾಪಾರಸ್ಥರಿಗೂ ನೆಲೆ ಒದಗಿಸಿದೆ. ಹೀಗಾಗಿ ಪ್ರತ್ಯೇಕ ಸೈಕಲ್ ಹಾದಿ ನೆಪದಲ್ಲಿ ಭಾರೀ ಮೊತ್ತದ ಹಣ ತುಂಗೆಗೆ ಅರ್ಪಣೆಯಾದಂತಾಗಿದೆ ಎಂಬ ಆಕ್ರೋಶ ಸಾರ್ವಜನಿಕರಲ್ಲಿ ಒಡಮೂಡಿದೆ.

ಅವೈಜ್ಞಾನಿಕ ಯೋಜನೆ

ಶಿವಮೊಗ್ಗ ನಗರ ಮೊದಲೇ ವಾಹನ ಪಾರ್ಕಿಂಗ್ ಸಮಸ್ಯೆ ಎದುರಿಸುತ್ತಿದೆ. ಆದರೆ ಪಾರ್ಕಿಂಗ್ ಸ್ಥಳವನ್ನೇ ಸೈಕಲ್‌ಗೆ ಹಾದಿ ಮಾಡಿರುವುದು ಅವೈಜ್ಞಾನಿಕ. ಅಲ್ಲಿ ಟೈಲ್ಸ್ ಕೂರಿಸಿ ಅಷ್ಟೆಲ್ಲಾ ಹಣ ಸುರಿಯುವ ಬದಲು ರಸ್ತೆಗೆ ಗೆರೆ ಎಳೆದು ಮಾರ್ಕಿಂಗ್ ಮಾಡಿ ಸೈಕಲ್ ಓಡಾಟದ ಜಾಗವಾಗಿ ಗುರುತಿಸಬಹುದಾಗಿತ್ತು ಎಂದು ಶಿವಮೊಗ್ಗ ನಾಗರಿಕ ವೇದಿಕೆ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಹೇಳುತ್ತಾರೆ..

ಸೈಕಲ್‌ ಹಾದಿ ಬಳಕೆಯಾಗಲು ಅಲ್ಲಿ ವಾಹನ ಪಾರ್ಕಿಂಗ್ ನಿಷೇಧಿಸಬೇಕು. ಆದರೆ ಅದಕ್ಕೆ ಯಾವುದೇ ಕಾನೂನು ಇಲ್ಲ. ಆ ಜಾಗ ಬರೀ ಸೈಕಲ್ ಓಡಾಟಕ್ಕೆ ಬಳಸಿದರೆ ವಾಹನ ಪಾರ್ಕಿಂಗ್ ಎಲ್ಲಿ ಮಾಡಬೇಕು ಎಂದು ಅವರು ಪ್ರಶ್ನಿಸುತ್ತಾರೆ.  

ಸ್ಮಾರ್ಟ್ ಸಿಟಿಯ ಮೂಲ ಯೋಜನೆಯಲ್ಲಿ ಸೈಕಲ್ ಹಾದಿ ಬಹಳ ಚೆನ್ನಾಗಿ ತೋರಿಸಿದ್ದಾರೆ. ಸಾಗರ ರಸ್ತೆಯಲ್ಲಿ ಬಸ್‌ ನಿಲ್ದಾಣದಿಂದ  ಆಲ್ಲೊಳ ವೃತ್ತದವರೆಗೆ ನಾಲ್ಕು ಮರಗಳ ನಡುವೆ ಬೈಸಿಕಲ್ ಪಾಥ್ ಹಾದು ಹೋಗುವ ಯೋಜನೆ ಕಂಡು ನಾವು ಸಿಂಗಾಪುರದಲ್ಲಿದ್ದೇವೆ ಎಂದು ಭಾವಿಸಿದ್ದೆವು. ಆದರೆ ಎಲ್ಲವೂ ನೀಲನಕ್ಷೆಗೆ ಸೀಮಿತವಾಗಿದೆ. ಸೈಕಲ್ ಹಾದಿ ಹಲವು ಕಡೆ ಸಂಪರ್ಕ ಕಳೆದುಕೊಂಡಿದೆ. ಆಲ್ಕೊಳ ಬಳಿಯ ಫಾರೆಸ್ಟ್‌ ಕಾಂಪೌಂಡ್ ಬಳಿ ಇದಕ್ಕೆ ನಿದರ್ಶನ ಸಿಗುತ್ತದೆ ಎನ್ನುತ್ತಾರೆ.

‘ಸೈಕಲ್ ಓಡಾಡಲು ಜಾಗ ಇಲ್ಲದಿದ್ದರೆ ಯೋಜನೆ ಹೇಗೆ ಯಶಸ್ವಿಯಾಗುತ್ತದೆ. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿನ ಸವಲತ್ತು ಜನರಿಗೆ ಸಿಗಬೇಕೇಂಬುದೇನೂ ಅಧಿಕಾರಿಗಳಿಗೆ ಇಲ್ಲ. ಬದಲಿಗೆ ಬಜೆಟ್‌ನಲ್ಲಿ ಬಿಡುಗಡೆ ಆದ ಹಣಕ್ಕೆ ಖರ್ಚು ತೋರಿಸಬೇಕಿತ್ತು ಅಷ್ಟೇ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಪಾಥ್‌ನಲ್ಲಿ ಓಡಾಟಕ್ಕೆ ಅವಕಾಶ ಇಲ್ಲದ ಕಡೆ ರಸ್ತೆಯಲ್ಲಿಯೇ ಸೈಕಲ್ ಓಡಿಸಬೇಕಾಗುತ್ತದೆ. ಜನರಿಗೂ ಯೋಜನೆಯ ಉಪಯೋಗ ಮನವರಿಕೆ ಮಾಡಿಕೊಟ್ಟರೆ ಅದರ ಉದ್ದೇಶ ಈಡೇರಲಿದೆ’ ಎಂದು ಸ್ಮಾರ್ಟ್ ಸಿಟಿ ಸಂಸ್ಥೆ ಅಧಿಕಾರಿ ಹೊನ್ನಕುಮಾರ್ ಹೇಳುತ್ತಾರೆ.

ಜನವರಿಯಿಂದ ರಸ್ತೆಗೆ ಸೈಕಲ್

ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗ ನಗರದ 120 ಕಿ.ಮೀ ವ್ಯಾಪ್ತಿಯನ್ನು ಬೈಸಿಕಲ್ ಶೇರಿಂಗ್ ವ್ಯವಸ್ಥೆ ಮೂಲಕ ಸಂಪರ್ಕಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಇದರಲ್ಲಿ 34 ಕಿ.ಮೀ ದೂರದ ಪ್ರತ್ಯೇಕ ಹಾದಿ ಸಂಪೂರ್ಣ ಸೈಕಲ್‌ಗಳ ಓಡಾಟಕ್ಕೆ ಬಳಕೆಯಾಗಬೇಕಿದೆ. ಅದೇ ಈಗ ನಮ್ಮ ಮುಂದಿರುವ ಸವಾಲು ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ. ಬೈಸಿಕಲ್ ಶೇರಿಂಗ್‌ಗೆ ಅನುಮತಿ ಪಡೆಯಲು ಮಂಗಳವಾರ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರೊಂದಿಗೆ ಸಭೆ ನಡೆಸಲಾಗಿದೆ. ₹4.43 ಕೋಟಿ ವೆಚ್ಚದಲ್ಲಿ ಒಟ್ಟು 330 ಬೈಸಿಕಲ್‌ಗಳ ಜನವರಿ ತಿಂಗಳಿಂದ ರಸ್ತೆಗೆ ಇಳಿಯಲಿವೆ. ಅದರಲ್ಲಿ ಸ್ಮಾರ್ಟ್‌ಸಿಟಿ ಸಂಸ್ಥೆ ₹3.09 ಕೋಟಿ ಹಾಗೂ ಖಾಸಗಿ ಪಾಲುದಾರರು ₹1.34 ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಸ್ಮಾರ್ಟ್ ಸಿಟಿಯಡಿ ಬೈಸಿಕಲ್ ಪಾಥ್ ಹೆಸರಿನಲ್ಲಿ ಯೋಜನೆ ಸಿದ್ಧಪಡಿಸಿದಾಗಲೇ ಇದೊಂದು ಮೂರ್ಖ ನಿರ್ಧಾರ ಎಂದು ವಿರೋಧ ವ್ಯಕ್ತಪಡಿಸಿದ್ದೆವು. ಅದು ಈಗ ನಿಜವಾಗಿದೆ.
ವಸಂತಕುಮಾರ್, ಪ್ರಧಾನ ಕಾರ್ಯದರ್ಶಿ, ಶಿವಮೊಗ್ಗ ನಾಗರಿಕ ವೇದಿಕೆ
ಜನರಲ್ಲಿ ಜಾಗೃತಿ ಬಾರದೇ ನಾವೇನು ಮಾಡಲು ಆಗೊಲ್ಲ. ಸೈಕಲ್‌ ಪಾಥ್ ಒತ್ತುವರಿ ತೆರವುಗೊಳಿಸಲು ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಮಹಾನಗರ ಪಾಲಿಕೆಗೂ ಪತ್ರ ಬರೆದಿದ್ದೇವೆ.
ಹೊನ್ನಕುಮಾರ್ ,ಸ್ಮಾರ್ಟ್ ಸಿಟಿ ಅಧಿಕಾರಿ, ಶಿವಮೊಗ್ಗ
ಸೈಕಲ್ ಹಾದಿ ಈಗ ಪಾರ್ಕಿಂಗ್ ಸ್ಥಳ ವ್ಯಾಪಾರದ ನೆಲೆ ಆಗಿರುವುದರಿಂದ ಸ್ಮಾರ್ಟ್‌ ಸಿಟಿಯವರು ಸೈಕಲ್‌ಗಳಿಗೆ ರೆಕ್ಕೆ ಅಳವಡಿಸಬೇಕು.
ಶಿವಮೂರ್ತಪ್ಪ ಎಂ.ಎನ್., ನಿವೃತ್ತ ಶಿಕ್ಷಕ, ಆಲ್ಕೊಳ
ಬೈಸಿಕಲ್ ಪಾಥ್ ಮೇಲೆ ಜಲ್ಲಿಕಲ್ಲು ಇಟ್ಟಿಗೆ ಸೇರಿ ನಿರ್ಮಾಣ ಸಾಮಗ್ರಿಗಳ ಸಂಗ್ರಹ
ಬೈಸಿಕಲ್ ಪಾಥ್ ಮೇಲೆ ಜಲ್ಲಿಕಲ್ಲು ಇಟ್ಟಿಗೆ ಸೇರಿ ನಿರ್ಮಾಣ ಸಾಮಗ್ರಿಗಳ ಸಂಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT