ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಹೆಚ್ಚಿದ ಅಪಾಯಕಾರಿ ರಾಸಾಯನಿಕ: ಕುಡಿಯಲೂ ಯೋಗ್ಯವಲ್ಲ ತುಂಗೆಯ ನೀರು!

Published 18 ಡಿಸೆಂಬರ್ 2023, 7:13 IST
Last Updated 18 ಡಿಸೆಂಬರ್ 2023, 7:13 IST
ಅಕ್ಷರ ಗಾತ್ರ

ಶಿವಮೊಗ್ಗ: ಪಶ್ಚಿಮಘಟ್ಟ ಸಾಲಿನ ಕುದುರೆಮುಖ ಸನಿಹದ ಗಂಗಡಿಕಲ್ಲು ಬಳಿ ಹುಟ್ಟುವ ತುಂಗೆ ಅಲ್ಲಿಂದ 147 ಕಿ.ಮೀ. ದೂರ ಹರಿದುಬಂದು ಕೂಡಲಿ ಹತ್ತಿರ ಭದ್ರಾ ನದಿಯನ್ನು ಸೇರಿಕೊಳ್ಳುತ್ತಾಳೆ. ಶೃಂಗೇರಿ, ತೀರ್ಥಹಳ್ಳಿ ಮಾರ್ಗವಾಗಿ ಶಿವಮೊಗ್ಗದತ್ತ ಹರಿದು ಬರುವಾಗ ಅದರ ಒಡಲೊಳಗೆ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ತ್ಯಾಜ್ಯ (ರಾಸಾಯನಿಕ ಗೊಬ್ಬರ–ಕೀಟನಾಶಕ) ಬಂದು ಸೇರಿಕೊಂಡರೆ, ಗಾಜನೂರು ಜಲಾಶಯದಿಂದ ಕೂಡಲಿವರೆಗಿನ 33 ಕಿ.ಮೀ ವ್ಯಾಪ್ತಿಯಲ್ಲಿ ಕೈಗಾರಿಕೆ ಹಾಗೂ ಒಳಚರಂಡಿಯ ತ್ಯಾಜ್ಯ ಸೇರಿ ನೀರು ಬಳಸಲು ಯೋಗ್ಯವಿಲ್ಲದಂತಾಗುತ್ತದೆ. 

ಎಲ್ಲೆಲ್ಲಿ ನದಿ ಮಾಲಿನ್ಯ:

ಗಾಜನೂರಿನಿಂದ ಮುಂದೆ ಹೊಸಳ್ಳಿಯಲ್ಲಿ ಅಲ್ಲಿನ ಘನ ಹಾಗೂ ದ್ರವತ್ಯಾಜ್ಯ ಸೀದಾ ನದಿಯ ಒಡಲು ಸೇರುತ್ತಿದೆ. ಆಚೆ ದಡದ ಮತ್ತೂರು ಬಳಿಯೂ ತ್ಯಾಜ್ಯ ನೀರು ನದಿಗೆ ಸೇರುತ್ತಿದೆ. ಅಲ್ಲಿಯೇ ಪಕ್ಕದಲ್ಲಿ ನೀರು ಎತ್ತಿ ಊರಿಗೆ ಕುಡಿಯಲು ಕೊಡಲಾಗುತ್ತಿದೆ. ಮುಂದೆ ಹರಕೆರೆ ಬಳಿ ದೇವಸ್ಥಾನದ ಪಕ್ಕದಲ್ಲಿ ದೊಡ್ಡ ಮೋರಿ ಹಾಗೂ ನೀರಾವರಿ ಕಾಲುವೆಯ ನೀರು ತ್ಯಾಜ್ಯದ ರೂಪದಲ್ಲಿ ನದಿಯೊಳಗೆ ಸೇರುತ್ತಿದೆ. ನಂತರ ಹಳೆಯ ಮಂಡ್ಲಿ, ಸವಾಯಿಪಾಳ್ಯ, ಎನ್‌.ಟಿ. ರಸ್ತೆಯ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಚರಂಡಿ ನೀರು ನದಿ ಒಡಲಿಗೆ ಸೇರುತ್ತಿದೆ. ನಂತರ ಇಂದಿರಾ ನಗರ, ವಿದ್ಯಾನಗರ, ಕಂಟ್ರಿಕ್ಲಬ್ ಹಾಗೂ ರುದ್ರಭೂಮಿಯ ಬಳಿಯೂ ನದಿ ಮಲಿನಗೊಳ್ಳುತ್ತಿದೆ. ಅಲ್ಲಿ ವೆಟ್‌ವೆಲ್ ಇದ್ದರೂ ಅದಕ್ಕೆ ಸಂಪರ್ಕವಿಲ್ಲದೇ ಮಾಲಿನ್ಯ ಹೆಚ್ಚಿದೆ. ಅದೇ ಹಾದಿಯಲ್ಲಿ ರಾಜೀವ್‌ಗಾಂಧಿ ಬಡಾವಣೆ ಬಳಿಯೂ ದೊಡ್ಡ ಪ್ರಮಾಣದಲ್ಲಿ ಕೊಳಚೆ ನೀರು ನದಿಗೆ ಸೇರುತ್ತಿದೆ.

ನದಿಯ ಈಚೆ ದಡದ ಸವಾಯಿಪಾಳ್ಯ, ಹೊಸ ಸೇತುವೆಯ ಬುಡ, ಸೀಗೆಹಟ್ಟಿಯಲ್ಲಿ ದೊಡ್ಡ ಹಳ್ಳ, ರಾಮಣ್ಣ ಶ್ರೇಷ್ಠಿ ಪಾರ್ಕ್, ಭೀಮೇಶ್ವರ ದೇವಸ್ಥಾನ, ಕೋರ್ಪಾಳಯ್ಯನ ಛತ್ರದ ಹತ್ತಿರ ನಗರದ ಚರಂಡಿ ನೀರು ನದಿಯತ್ತ ಹಾದಿ ಮಾಡಿಕೊಂಡಿದ್ದರೆ, ಗುಂಡಪ್ಪಶೆಡ್ ಬಳಿ ರಾಜಕಾಲುವೆ ನದಿಯತ್ತ ಮುಖ ಮಾಡಿದೆ.

ಹೊನ್ನಾಳಿ ರಸ್ತೆಯ ತ್ಯಾವರೆಚಟ್ನಳ್ಳಿ ಬಳಿ ಪ್ರತಿ ದಿನ 34 ದಶಲಕ್ಷ ಲೀಟರ್ ಸಾಮರ್ಥ್ಯದ ಕೊಳಚೆ ನೀರು ಶುದ್ಧೀಕರಿಸುವ ಘಟಕ (ಎಸ್‌ಟಿಪಿ) ಸ್ಥಾಪಿಸಲಾಗಿದೆ. ಅದಕ್ಕೆ 36 ಪಂಪ್‌ಗಳಿವೆ. ಶಿವಮೊಗ್ಗದ ವಿನೋಬನಗರ ಭಾಗದಿಂದಲೂ ಕೊಳಚೆ ನೀರು ಅಲ್ಲಿಗೆ ಹೋಗುತ್ತದೆ. ಬಹಳಷ್ಟು ಕಡೆ ಯುಜಿಡಿಯಲ್ಲಿ ಸಂಪರ್ಕವೇ ಇಲ್ಲ. ಅಲ್ಲಲ್ಲಿ ತುಂಡಾಗಿದೆ. ಕೆಲವು ಕಡೆ ಚರಂಡಿ ನೀರನ್ನು ನದಿಗೆ ತಿರುಗಿಸಲಾಗಿದೆ. ಕೆಲವೆಡೆ ಮನೆಯವರೇ ಯುಜಿಡಿ ಸಂಪರ್ಕ ಕಲ್ಪಿಸಿಕೊಂಡಿಲ್ಲ. ಹೀಗಾಗಿ ಬರೀ 11 ದಶಲಕ್ಷ ಲೀಟರ್ ಮಾತ್ರ ಎಸ್‌ಟಿಪಿ ಘಟಕಕ್ಕೆ ಬರುತ್ತಿದೆ. ಒಮ್ಮೊಮ್ಮೆ ಅದೂ ಸರಿಯಾಗಿ ಬರುವುದಿಲ್ಲ ಎಂಬ ಆರೋಪವೂ ಇದೆ. 

ಅಲ್ಲಿನ ಪಂಪ್‌ಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಫ್ಯಾನ್‌ಗಳು ತುಕ್ಕುಹಿಡಿದಿವೆ. ಉಳಿದ 23 ದಶಲಕ್ಷ ಲೀಟರ್ ಕೊಳಚೆ ನೇರವಾಗಿ ನದಿಗೆ ಸೇರುತ್ತಿದೆ. ಬಹಳಷ್ಟು ಕಡೆ ವೆಟ್‌ವೆಲ್‌ಗಳಿಗೂ ಯುಜಿಡಿ ಸಂಪರ್ಕ, ರಾಜಕಾಲುವೆ ಸಂಪರ್ಕ ಇಲ್ಲ. ಕೊಳಚೆ ನೀರು ನದಿಗೆ ನೇರವಾಗಿ ಹೋಗುತ್ತಿದೆ. ಶಿವಮೊಗ್ಗ ನಗರ ಬಳಸಿಕೊಂಡು ಹೋಗುವ ತುಂಗಾ ಎಡದಂಡೆ ಕಾಲುವೆಯೂ ಊರಿನ ತ್ಯಾಜ್ಯವನ್ನು ಹೊತ್ತೇ ನದಿ ಸೇರುತ್ತಿದೆ. ರಾಶಿ ರಾಶಿ ಪ್ಲಾಸ್ಟಿಕ್, ರಬ್ಬರ್, ಕಾಟನ್‌ಗಳು ನದಿಯ ಮೇಲೆ ನಗರದ ನಿವಾಸಿಗಳ ಕ್ರೌರ್ಯಕ್ಕೆ ಸಾಕ್ಷಿಯೆಂಬಂತೆ ಗೋಚರವಾಗುತ್ತವೆ. ಈ ಬಗ್ಗೆ ‘ತುಂಗಾ ಉಳಿಸಿ’ ಅಭಿಯಾನದ ಗೆಳೆಯರು ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಡಳಿತಕ್ಕೆ ಸಾಕ್ಷ್ಯ ಸಮೇತ ವರದಿ ಸಲ್ಲಿಸಿದ್ದಾರೆ. ಆದರೆ ಇಲ್ಲಿನ ಆಡಳಿತ ಯಂತ್ರದ್ದು ಮಾತ್ರ ಎಂದಿನಂತೆ ಸುಖ ನಿದ್ರೆ.

ಭೀಮೇಶ್ವರ ಗುಡಿ ಬಳಿ ತುಂಗಾ ನದಿಯ ದಂಡೆಯ ಅಲಂಕಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ₹100 ಕೋಟಿಗೂ ಹೆಚ್ಚು ಮೊತ್ತ ವ್ಯಯಿಸಲಾಗಿದೆ. ಆದರೆ ಅಲ್ಲಿಯೇ ಕೆಳಗೆ ನಗರದ ತ್ಯಾಜ್ಯ ಚರಂಡಿ ಮೂಲಕ ಧಾರಾಳವಾಗಿ ನದಿ ಸೇರುತ್ತಿದೆ. ಅಲ್ಲಿ ಮೇಲೆ ಆಕರ್ಷಕ ಅಲಂಕಾರ, ಕೆಳಗೆ ನದಿಯ ನೀರಿನ ಶುದ್ಧತೆಗೆ ಸಂಚಕಾರ ಎಂಬಂತಾಗಿದೆ.

‘ಸ್ಮಾರ್ಟ್ ಸಿಟಿ ಯೋಜನೆ ಅಡಿ ನದಿ ನೀರು ಶುದ್ಧೀಕರಿಸಲು ಯಾವುದೇ ಯೋಜನೆ ಇಲ್ಲ. ಭೌತಿಕ ಅಲಂಕಾರಕ್ಕೆ ಮಾತ್ರ ಅನುದಾನ ಕೊಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಇದು ನಾಗರಿಕ ಸಮಾಜದ ಆಲೋಚನೆಯೇ’ ಎಂದು ಪರಿಸರವಾದಿ ಬಿ.ಎಂ.ಕುಮಾರಸ್ವಾಮಿ ಪ್ರಶ್ನಿಸುತ್ತಾರೆ. 

ನಗರ ವ್ಯಾಪ್ತಿಯಲ್ಲಿ ಹೊಸಳ್ಳಿಯಿಂದ ತ್ಯಾವರೆಚಟ್ನಳ್ಳಿಯವರೆಗೆ 15 ಕಡೆ ನದಿ ಗಂಭೀರವಾಗಿ ಮಲಿನವಾಗುತ್ತಿದೆ. ಇನ್ನು ತುಂಗೆಗೆ ಬರೀ ಕೊಳಚೆ ನೀರು ಮಾತ್ರವಲ್ಲ ಕಸಾಯಿ ಖಾನೆಯ ಮಾಂಸದ ತ್ಯಾಜ್ಯ ಹಾಗೂ ಆಸ್ಪತ್ರೆಗಳಲ್ಲಿನ ವೈದ್ಯಕೀಯ ತ್ಯಾಜ್ಯಗಳನ್ನು ರಾತ್ರಿ ಹೊತ್ತು ವಾಹನಗಳಲ್ಲಿ ತಂದು ಎಗ್ಗಿಲ್ಲದೇ ಸುರಿಯಲಾಗುತ್ತಿದೆ. ಇದಂತೂ ಬಹಳಷ್ಟು ಅಪಾಯಕಾರಿ ಎಂಬುದು ತುಂಗಾ ಉಳಿಸಿ ಅಭಿಯಾನದ ಗೆಳೆಯರ ಅಳಲು. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರಿಗೆ ಕರೆ ಮಾಡಿದರೆ ಮೊಬೈಲ್‌ ಸ್ವಿಚ್ಡ್ ಆಫ್ ಆಗಿತ್ತು.

ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಜಲಸಂಪನ್ಮೂಲ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಒಳಚರಂಡಿ ಮಂಡಳಿ ಅಧಿಕಾರಿಗಳು ಜೊತೆಗೆ ನಗರದ ಜನತೆ, ಸಹೃದಯರು, ಪರಿಸರ ಪ್ರಿಯರು ತುಂಗೆಯ ಶುದ್ಧೀಕರಣಕ್ಕೆ ಟೊಂಕ ಕಟ್ಟಿ ನಿಲ್ಲಬೇಕಿದೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬುದು ಯಕ್ಷ ಪ್ರಶ್ನೆ.

ಶಿವಮೊಗ್ಗದ ಅರಕೆರೆ ಬಳಿ ತುಂಗಾ ನದಿ ಸೇರುತ್ತಿರುವ ಕೊಳಚೆ ನೀರು
ಶಿವಮೊಗ್ಗದ ಅರಕೆರೆ ಬಳಿ ತುಂಗಾ ನದಿ ಸೇರುತ್ತಿರುವ ಕೊಳಚೆ ನೀರು
ಶಿವಮೊಗ್ಗದ ತುಂಗಾ ನದಿ ದಂಡೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಸಿಂಗರಿಸಲಾಗಿದ್ದು ತಡೆಗೋಡೆಯ ಕೆಳಗಿನಿಂದಲೇ ಕೊಳಚೆ ನೀರು ನದಿ ಸೇರುತ್ತಿರುವುದು
ಶಿವಮೊಗ್ಗದ ತುಂಗಾ ನದಿ ದಂಡೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಸಿಂಗರಿಸಲಾಗಿದ್ದು ತಡೆಗೋಡೆಯ ಕೆಳಗಿನಿಂದಲೇ ಕೊಳಚೆ ನೀರು ನದಿ ಸೇರುತ್ತಿರುವುದು
ಕೈಗಾರಿಕೆ ಹಾಗೂ ಒಳಚರಂಡಿ ತ್ಯಾಜ್ಯ ಸೇರಿಕೊಂಡು ರಾಜ್ಯದಲ್ಲಿ 16 ಪ್ರಮುಖ ನದಿಗಳು ಕಲುಷಿತಗೊಂಡಿವೆ ಎಂದು ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ವಿಶೇಷವೆಂದರೆ ಆ ಪಟ್ಟಿಯಲ್ಲಿ ಶಿವಮೊಗ್ಗ ಜಿಲ್ಲೆಯ ಜೀವ ನದಿಗಳಾದ ತುಂಗಾ ಹಾಗೂ ಭದ್ರೆಯೂ ಸೇರಿದೆ. ಸರ್ಕಾರವೇ ಕೊಟ್ಟಿರುವ ಈ ಅಧಿಕೃತ ಮಾಹಿತಿಯಿಂದಾಗಿ ಶಿವಮೊಗ್ಗದ ಒಂದಷ್ಟು ಸಹೃದಯರು ಸೇರಿ ಕೈಗೆತ್ತಿಕೊಂಡಿರುವ ‘ತುಂಗಾ ಉಳಿಸಿ’ (ನಿರ್ಮಲ ತುಂಗಾ) ಅಭಿಯಾನ, ಸ್ವಚ್ಛ ತುಂಗಾ ಸಂಘಟನೆಗಳ ಕೂಗಿಗೆ ಈಗ ಮತ್ತೆ ಜೀವ ಬಂದಿದೆ. ಪಾನಕ್ಕೆ ಅನ್ವರ್ಥವಾಗಿದ್ದ ತುಂಗೆ ಈಗ ಮಲಿನಗೊಂಡಿದ್ದು, ಗಂಟಲ ಪಸೆಯ ದಾಹ ನೀಗಿಸಲು ಯೋಗ್ಯಳಾಗಿಲ್ಲ. ಆಕೆಯನ್ನು ಮತ್ತೆ ಮಲಿನಮುಕ್ತಗೊಳಿಸುವ ದೊಡ್ಡ ಜವಾಬ್ದಾರಿ ನದಿಯನ್ನೇ ಆಶ್ರಯಿಸಿ ಬದುಕುತ್ತಿರುವ ಎಲ್ಲರ ಮೇಲೂ ಇದೆ. ಆ ನಿಟ್ಟಿನಲ್ಲಿ ಈ ವಾರದ ‘ನಮ್ಮ ಜನ ನಮ್ಮ ಧ್ವನಿ’ ಅಂಕಣ ಬೆಳಕು ಚೆಲ್ಲಿದೆ. 
ಒಳಚರಂಡಿ ನೀರು ನದಿಗೆ ಹರಿಸಬೇಡಿ. ಎಸ್‌ಟಿಪಿಗಳನ್ನು ಸರಿಪಡಿಸಿ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿದಂತೆ ನದಿ ಪಾತ್ರದ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ಕೊಟ್ಟಿದ್ದೇವೆ. ಕಾಲಮಿತಿಯಲ್ಲಿ ಸರಿ ಆಗಲಿದೆ
–ಎಂ.ಎಸ್. ಮಹೇಶ್ವರಪ್ಪ ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ
ಗಣಿಗಾರಿಕೆಯಿಂದ ತುಂಗ–ಭದ್ರೆ ರಕ್ಷಿಸಲು ಈ ಹಿಂದೆ ಮಾಡಿದ್ದ ಜನಾಂದೋಲನ ಈಗ ಮಾಲಿನ್ಯ ಮುಕ್ತಗೊಳಿಸುವ ವಿಚಾರದಲ್ಲೂ ಮಾಡಬೇಕಿದೆ. ನದಿಯ ವಿಚಾರದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಮರೆತು ಎಲ್ಲರೂ ಕೈ ಜೋಡಿಸಲಿದ್ದೇವೆ
–ಕೆ.ಪಿ.ಶ್ರೀಪಾಲ್ ಪೀಪಲ್ಸ್ ಲಾಯರ್ ಫೋರಂ ಶಿವಮೊಗ್ಗ
ಶಿವಮೊಗ್ಗ ನಗರದ ಬಹುತೇಕ ಎಸ್‌ಟಿಪಿಗಳು ಕೆಲಸ ಮಾಡುತ್ತಿಲ್ಲ. ಎಲ್ಲ ಕೊಳಚೆಯೂ ನದಿಗೆ ಸೇರುತ್ತಿದೆ. ಜೊತೆಗೆ ಘನ ತ್ಯಾಜ್ಯವೂ ಸೇರ್ಪಡೆ ಆಗುತ್ತಿದೆ. ತುಂಗಾ ನದಿ ಮಾಲಿನ್ಯದ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದೇವೆ
– ಶ್ರೀಪತಿ ಜೆಎನ್‌ಎನ್‌ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಶಿವಮೊಗ್ಗ
ಅಲ್ಯು‌ಮಿನಿಯಂ ಅಂಶ 8 ಪಟ್ಟು ಹೆಚ್ಚು!
ಸಾಮಾನ್ಯವಾಗಿ ಕುಡಿಯಲು ಯೋಗ್ಯವಾಗಿರುವ ನೀರಿನಲ್ಲಿ ಪ್ರತೀ ಲೀಟರ್‌ಗೆ 0.03 ಮಿಲಿ ಗ್ರಾಂನಷ್ಟು (ಎಂಪಿಎಲ್‌) ಅಲ್ಯುಮಿನಿಯಂ ಅಂಶ ಇರಬೇಕು. ತುಂಗಾ ನದಿಯಲ್ಲಿ ಆ ಪ್ರಮಾಣ 0.2 ಮಿಲಿಗ್ರಾಂನಷ್ಟು ಇದೆ. ಅಂದರೆ ನಿಗದಿತ ಮಿತಿಗಿಂತ ಎಂಟು ಪಟ್ಟು ಹೆಚ್ಚಾಗಿದೆ. ತುಂಗಾ ಉಳಿಸಿ ಅಭಿಯಾನದ ಮಿತ್ರರು ನದಿಯ ನೀರನ್ನು ಬೆಂಗಳೂರಿನಲ್ಲಿರುವ ಅಂತರರಾಷ್ಟ್ರೀಯ ಪ್ರಮಾಣಿತ ಯುರೋಸಿನ್ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಿದ್ದು ಅದರ ವರದಿ ಬಂದಿದೆ. ‘ಸಮಾಧಾನಕರ ಸಂಗತಿ ಅಂದರೆ ನೀರಿನಲ್ಲಿ ಬ್ಯಾಕ್ಟೀರಿಯಲ್ ಕಂಟಾಮನೇಶನ್ ಇದ್ದರೂ ಭಾರಲೋಹಗಳ ಪ್ರಮಾಣ ಮಾತ್ರ ನಿಗದಿತ ಪ್ರಮಾಣದಲ್ಲಿದೆ. ತುಂಗಾ ನದಿ ಮಾತ್ರವಲ್ಲ ಮನೆ ಮನೆಗೆ ನಲ್ಲಿ ಮೂಲಕ ಹರಿದು ಬರುವ ನೀರಿನಲ್ಲೂ ಅಲ್ಯುಮಿನಿಯಂ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದೆ. ಹೀಗಾಗಿ ತುಂಗೆಯ ನೀರು ಕುಡಿಯಲು ಯೋಗ್ಯವಾಗಿಲ್ಲ’ ಎಂದು ಅಭಿಯಾನದ ನೇತೃತ್ವ ವಹಿಸಿರುವ ಪರಿಸರವಾದಿ ಬಿ.ಎಂ. ಕುಮಾರಸ್ವಾಮಿ ಹೇಳುತ್ತಾರೆ. ‘ಶಿವಮೊಗ್ಗದಲ್ಲಿ ಎಷ್ಟು ಆಸ್ಪತ್ರೆಗಳು ಇವೆಯೋ ಅವೆಲ್ಲವೂ ಸದಾ ಭರ್ತಿ. ಎಲ್ಲಿಂದ ಹುಟ್ಟುತ್ತೆ ಇಷ್ಟೊಂದು ರೋಗಗಳು. ಎಲ್ಲವೂ ತುಂಗೆಯ ಮಾಲಿನ್ಯದ ಪರಿಣಾಮ. ಮಹಾನಗರ ಪಾಲಿಕೆ ಆಡಳಿತ ಐದು ವರ್ಷ ಸುಮ್ಮನೆ ಕುಳಿತು ಅಧಿಕಾರದ ಕೊನೆಯ ದಿನ ತುಂಗಾ ನದಿ ಮಾಲಿನ್ಯದ ಬಗ್ಗೆ ಒಣ ಚರ್ಚೆ ಮಾಡಿತು’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.
ಇದು ಅಪಾಯದ ಕರೆಗಂಟೆ; ಡಾ.ಸರ್ಜಿ
‘ಅಲ್ಯುಮಿನಿಯಂ ಅಂಶ ಬರೀ ನೀರು ಕುಡಿಯುವುದರಿಂದ ಮಾತ್ರ ದೇಹ ಸೇರುವುದಿಲ್ಲ. ಆ ನೀರು ಬಳಸಿ ಬೆಳೆದ ಆಹಾರ ಪದಾರ್ಥ ಹಣ್ಣು–ತರಕಾರಿಯ ಮೂಲಕವೂ ಸೇರುತ್ತದೆ’ ಎಂದು ನಿರ್ಮಲ ತುಂಗಾ ಅಭಿಯಾನದ ನೇತೃತ್ವ ವಹಿಸಿರುವ ಡಾ.ಧನಂಜಯ ಸರ್ಜಿ ಹೇಳುತ್ತಾರೆ. ‘ಸಾಮಾನ್ಯವಾಗಿ ಶೇ 60ರಷ್ಟು ಅಲ್ಯುಮಿನಿಯಂ ಅಂಶ ಮೂಳೆಯಲ್ಲಿ ಶೇ 25ರಷ್ಟು ಶ್ವಾಸಕೋಶದಲ್ಲಿ ಶೇ 10ರಷ್ಟು ಲಿವರ್‌ನಲ್ಲಿ ಉಳಿದದ್ದು ಮೆದುಳು ಹಾಗೂ ಕಿಡ್ನಿಯಲ್ಲಿ ಇರುತ್ತದೆ. ಆದರೆ ಹೆಚ್ಚುವರಿಯಾಗಿ ದೇಹಕ್ಕೆ ಸೇರುವ ಅಲ್ಯು‌ಮಿನಿಯಂನಿಂದ ಜೀವಕೋಶಗಳ ಉತ್ಪತ್ತಿಗೆ ತೊಂದರೆ ಆಗುತ್ತದೆ. ಜೊತೆಗೆ ಮೂಳೆಯಲ್ಲಿನ ಕ್ಯಾಲ್ಸಿಯಂ ಅಂಶ ಕಡಿಮೆ ಆಗಿ ಅವು ದುರ್ಬಲಗೊಳ್ಳುತ್ತವೆ. ಮುರಿದ ಮೂಳೆಯೂ ಬೇಗನೆ ಜೋಡಣೆಯಾಗುವುದಿಲ್ಲ. ಜೊತೆಗೆ ಮೂಳೆ ಸವೆತವೂ ಹೆಚ್ಚಲಿದೆ. ಲಿವರ್‌ ಸಮಸ್ಯೆಯ ಜೊತೆಗೆ ಉಸಿರಾಟದ ತೊಂದರೆ ರೋಗ ನಿರೋಧಕ ಶಕ್ತಿ ಕಡಿಮೆ ಆಗುವ ಸಮಸ್ಯೆಯನ್ನು ಎದುರಿಸಲಿದ್ದೇವೆ’ ಎಂದು ತಿಳಿಸುತ್ತಾರೆ. ‘ತುಂಗೆಯ ನೀರಿನಲ್ಲಿ ಅಪಾಯಕಾರಿ ಕಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕ್ಲೋರಿನ್ ಅಂಶ ನಿಗದಿತ ಮಟ್ಟಕ್ಕಿಂತ ಕಡಿಮೆ ಇದೆ. ಪೊಲಿಫಾಮ್ ಬ್ಯಾಕ್ಟೀರಿಯಾ ಪ್ರತೀ ಮಿಲಿ ಗ್ರಾಂನಲ್ಲಿ 6 ಇರಬೇಕು. ಅದು ನೂರಾರು ಪಟ್ಟು ಹೆಚ್ಚಿದೆ. ಆ ಬಗ್ಗೆಯೂ ಇನ್ನಷ್ಟು ಪ್ರಯೋಗ ಆಗಬೇಕಿದೆ. ಮಾಲಿನ್ಯದಿಂದ ಮುಖ್ಯವಾಗಿ ನೀರಿನ ಜನ್ಯ ರೋಗ ಹೆಚ್ಚಳವಾಗುತ್ತಿವೆ. ಮಕ್ಕಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮುಂದಿನ ಪೀಳಿಗೆಯ ಹಿತಕ್ಕೆ ಈಗಲೇ ಜಾಗ್ರತರಾಗಬೇಕಿದೆ’ ಎಂದು ಎಚ್ಚರಿಸಿದರು.
ಎನ್‌ಜಿಟಿ ಮಾರ್ಗಸೂಚಿಯಂತೆ ಕ್ರಮ: ಡಿ.ಸಿ
‘ರಾಷ್ಟ್ರೀಯ ಹಸಿರು ಪೀಠದ (ಎನ್‌ಜಿಟಿ) ಮಾರ್ಗಸೂಚಿಯಂತೆ ತುಂಗಾ ನದಿ ಸ್ವಚ್ಛತೆಗೆ ಕಾರ್ಯ ಯೋಜನೆ ರೂಪಿಸಲಾಗಿದೆ. ಅದಕ್ಕೆ ವೇಗ ನೀಡುವ ಕೆಲಸವನ್ನು ಜಿಲ್ಲಾಡಳಿತದ ನೇತೃತ್ವದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. ಅದಕ್ಕೆ ನಾನೇ ಮೇಲ್ವಿಚಾರಣೆ ಮಾಡಲಿದ್ದೇನೆ’ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ಈ ಬಗ್ಗೆ ಕಳೆದ ವಾರ ಕೂಡ ಸಭೆ ನಡೆಸಿದ್ದೇವೆ. ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಲು ತುಂಗಾ ಮೂಲ ಉಳಿಸಿಯಂತಹ ಸ್ವಯಂ ಸೇವಾ ಸಂಸ್ಥೆಗಳು ನಮ್ಮ ಜೊತೆ ಕೈಜೋಡಿಸಿವೆ. ಎಸ್‌ಟಿಪಿಗಳನ್ನು ಸರಿಪಡಿಸಲು ಒತ್ತು ನೀಡುತ್ತಿದ್ದೇವೆ. ಆ ಕೆಲಸ ತುರ್ತಾಗಿ ನಡೆಸಲು ತುಂಗಾ ನದಿಯೊಳಗೆ ಕಸ ಹಾಕುವ ಜಾಗಗಳನ್ನು ಗುರುತಿಸಿ ಅಲ್ಲಿ ಗ್ರಿಲ್ ಅಳವಡಿಸಲಾಗುವುದು. ನಾವು ಕೂಡ ಹಲವು ಜಾಗಗಳನ್ನು ಗುರುತಿಸಿದ್ದೇವೆ. ಇನ್ನೂ ಶೇ 40ರಷ್ಟು ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ ಹೋಗಬೇಕಿದೆ. ಆ ನಿಟ್ಟಿನಲ್ಲೂ ಕೆಲಸ ಮಾಡುತ್ತಿದ್ದೇವೆ. ಶಿವಮೊಗ್ಗ ಮಾತ್ರವಲ್ಲ ತೀರ್ಥಹಳ್ಳಿ ಶೃಂಗೇರಿ ಕೊಪ್ಪ ಭಾಗದಲ್ಲೂ ಎನ್‌ಜಿಟಿ ಮಾರ್ಗಸೂಚಿ ಅನ್ವಯ ನದಿ ಸ್ವಚ್ಛತೆಗೆ ಒತ್ತು ನೀಡುತ್ತಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT