3 ವರ್ಷ; 44 ಪುರುಷರಿಗೆ ಶಸ್ತ್ರಚಿಕಿತ್ಸೆ

ಶನಿವಾರ, ಜೂಲೈ 20, 2019
28 °C
ಸಂತಾನ ಶಕ್ತಿ ಹರಣ; ಆರೋಗ್ಯ ಇಲಾಖೆಯಿಂದ ಜಾಗೃತಿ

3 ವರ್ಷ; 44 ಪುರುಷರಿಗೆ ಶಸ್ತ್ರಚಿಕಿತ್ಸೆ

Published:
Updated:

ವಿಜಯಪುರ: ಜನಸಂಖ್ಯೆಯನ್ನು ನಿಯಂತ್ರಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ಪುರುಷ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಜಾರಿಗೆ ತಂದಿದ್ದು, ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 44 ಪುರುಷರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

2016–17ರಲ್ಲಿ 5 ಜನರು ಮಾತ್ರ ಪುರುಷ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆರೋಗ್ಯ ಇಲಾಖೆಯು ನಿರಂತರವಾಗಿ ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ 2017–18ರಲ್ಲಿ 16 ಹಾಗೂ 2018–19ರಲ್ಲಿ 23 ಪುರುಷರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಮೂರು ವರ್ಷಗಳಲ್ಲಿ ಟ್ಯೂಬೆಕ್ಟಮಿ 19,124, ಲ್ಯಾಪ್ರೊಸ್ಕೊಪಿಕ್‌ 35,436 ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ. ಗರ್ಭಾಶಯದ ಒಳಗೆ ಅಳವಡಿಸಬಹುದಾದ ಸಾಧನಗಳು (ಐಯುಡಿ) 24,639, ಕಾಂಡೋಮ್ ಬಳಕೆ 8,547, ನುಂಗುವ ಮಾತ್ರೆ ಮೂಲಕ 15,316 ಮಹಿಳೆಯರು ಗರ್ಭಧಾರಣೆಯನ್ನು ತಡೆಗಟ್ಟಿದ್ದಾರೆ.

‘ಶಸ್ತ್ರಚಿಕಿತ್ಸೆಯಿಂದ ಲೈಂಗಿಕ ಕ್ರಿಯೆಗೆ ತೊಂದರೆ ಆಗಬಹುದು ಎಂಬ ತಪ್ಪು ಕಲ್ಪನೆ ಪುರುಷರಲ್ಲಿತ್ತು. ಇದರಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಜನರಲ್ಲಿರುವ ತಪ್ಪು ಕಲ್ಪನೆ ಹೋಗಲಾಡಿಸಲು ಇಲಾಖೆ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಿಂದ ಮೂರು ವರ್ಷದಲ್ಲಿ 44 ಪುರುಷರು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಪ್ರಸಕ್ತ ವರ್ಷ ಈ ಸಂಖ್ಯೆ ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇದೆ. ಶಸ್ತ್ರಚಿಕಿತ್ಸೆಗೆ ಒಳಪಡುವ ಪುರುಷರಿಗೆ ₹1,200 ಗೌರವ ಧನ ಸಿಗುತ್ತದೆ. ಸರ್ಕಾರಿ ನೌಕರರು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ವೇತನ ಬಡ್ತಿ ಸಹ ದೊರೆಯಲಿದೆ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಮಹೇಂದ್ರ ಕಾಪಸೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹಿಳೆಯರಿಗೆ ಹೊಟ್ಟೆ ಕೊಯ್ದು ಶಸ್ತ್ರಚಿಕಿತ್ಸೆ ಮಾಡಿದರೆ, ಪುರುಷರಿಗೆ ವೃಷಣದ ಮಧ್ಯ ಭಾಗಕ್ಕೆ ಅರವಳಿಕೆ ಚುಚ್ಚುಮದ್ದು ನೀಡಿ ಒಂದು ಸಣ್ಣ ರಂಧ್ರದ ಮೂಲಕ ವೃಷಣದಿಂದ ಬರುವ ನಾಳವನ್ನು ವಿಭಾಗಿಸಲಾಗುತ್ತದೆ. ಶಸ್ತ್ರ ಚಿಕಿತ್ಸೆಯಿಂದ ಆಗುವ ನೋವು ಹಾಗೂ ರಕ್ತಸ್ರಾವ ತೀರಾ ಕಡಿಮೆ. ಇದರಿಂದ ಲೈಂಗಿಕ ಕ್ರಿಯೆಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. 15 ರಿಂದ 30 ನಿಮಿಷಗಳಲ್ಲಿ ಈ ಶಸ್ತ್ರಚಿಕಿತ್ಸೆ ಪ್ರಕ್ರಿಯೆ ಮುಗಿಯಲಿದ್ದು, ಕೂಡಲೇ ಆಸ್ಪತ್ರೆಯಿಂದ ತೆರಳಬಹುದು. ಮುಂಜಾಗ್ರತೆ ಕ್ರಮವಾಗಿ ಒಂದೆರಡು ದಿನ ಆಸ್ಪತ್ರೆಯಲ್ಲಿದ್ದು ಹೋದರೆ ಒಳ್ಳೆಯದು’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !