ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಕುರುಬರ ಪಾದಯಾತ್ರೆಗೆ ಅದ್ದೂರಿ ಬೀಳ್ಕೊಡುಗೆ

ಬಿ.ಎಚ್‌.ರಸ್ತೆಯಲ್ಲಿ ಮೆರವಣಿಗೆ; ಮಂಚಕಲ್‌ಕುಪ್ಪೆಯಲ್ಲಿ ಜಾಗೃತಿ ಸಭೆ
Last Updated 1 ಫೆಬ್ರುವರಿ 2021, 4:13 IST
ಅಕ್ಷರ ಗಾತ್ರ

ತುಮಕೂರು: ಪರಿಶಿಷ್ಟ ಪಂಗಡದ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಕುರುಬ ಸಮುದಾಯವು ನಡೆಸುತ್ತಿರುವ ಪಾದಯಾತ್ರೆಗೆ ಭಾನುವಾರ ನಗದಲ್ಲಿ ಅದ್ದೂರಿಯಾಗಿ ಬೀಳ್ಕೊಡಲಾಯಿತು.

ಶನಿವಾರ ರಾತ್ರಿ ಶಿರಾಗೇಟ್‌ನ ಕಾಳಿದಾಸ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಜಾಗೃತಿ ಸಮಾವೇಶ ನಡೆಯಿತು. ವಿಧಾನ ಪರಿಷತ್ ಸದಸ್ಯ ಎಚ್‌.ಎಂ.ರೇವಣ್ಣ, ಕಾಗಿನೆಲೆ ಕನಕಗುರುಪೀಠದ ನಿರಂಜನಾ
ನಂದಪುರಿ ಸ್ವಾಮೀಜಿ, ಹೊಸದುರ್ಗದ ಈಶ್ವರಾನಂದಪುರಿ ಸ್ವಾಮೀಜಿ ಸೇರಿದಂತೆ ವೇದಿಕೆಯಲ್ಲಿದ್ದ ಮಠಾ
ಧೀಶರು, ಗಣ್ಯರು ಕುರುಬ ಸಮುದಾಯವು ಎಸ್‌ಟಿ ಜಾತಿ ಪಟ್ಟಿಗೆ ಸೇರಿದರೆ ಆಗುವ ಅನುಕೂಲಗಳ ಬಗ್ಗೆ ಸಮುದಾಯದವರಿಗೆ ಮನವರಿಕೆ ಮಾಡಿಕೊಟ್ಟರು.

ಈ ಹಿಂದೆ ನಡೆಸಿದ ಹೋರಾಟಗಳನ್ನು ಮೆಲುಕು ಹಾಕಿದರು. ಫೆ.7ರಂದು ಬೆಂಗಳೂರಿನಲ್ಲಿ ನಡೆಯುವ ಹಕ್ಕೊತ್ತಾಯ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಸಮುದಾಯದವರಿಗೆ ತಿಳಿಸಿದರು. ಸಂಘದ ಆವರಣದಲ್ಲಿಯೇ ಪಾದಯಾತ್ರಿಗಳು ವಾಸ್ತವ್ಯ ಹೂಡಿದರು.

ಭಾನುವಾರ ಬೆಳಿಗ್ಗೆ 10 ಸುಮಾರಿನಲ್ಲಿ ಪಾದಯಾತ್ರೆಯ ಬೆಂಗಳೂರಿನತ್ತ ಹೊರಟಿತು. ಟೌನ್‌ಹಾಲ್ ವೃತ್ತಕ್ಕೆ ಬಂದಾಗ ಜಿಲ್ಲಾ ಕುರುಬರ ಸಂಘ, ಸದಾಶಿವನಗರ, ಮೆಳೇಕೋಟೆ, ವೀರಸಾಗರ, ಮರಳೂರು, ಮರಳೂರು ದಿಣ್ಣೆ ಹಾಗೂ ಉಪ್ಪಾರಹಳ್ಳಿ, ಹೆಬ್ಬೂರು, ಹೊಸೂರು, ಶಿರಾ ಭಾಗದ ಕುರುಬ ಸಮುದಾಯದವರ ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.

ಡೊಳ್ಳುಕುಣಿತ ಸೇರಿದಂತೆ ವಿವಿಧ ಜನಪದ ಕಲಾಪ್ರಕಾರಗಳು ಪಾದಯಾತ್ರೆಗೆ ಮೆರುಗು ತಂಬಿದವು. ಸಮುದಾಯದ ಮತ್ತು ಮಠಾಧೀಶರ ಪರವಾಗಿ ಘೋಷಣೆಗಳು ಮೊಳಗಿದವು. ಇಡೀ ಬಿ.ಎಚ್‌.ರಸ್ತೆಯಲ್ಲಿ ಕುರುಬ ಸಮುದಾಯವು ವಿರಾಟ್ ಶಕ್ತಿ ಪ್ರದರ್ಶನ ತೋರಿತು.

‌ನಗರದ ಹೊರವಲಯದ ಎಚ್‌ಎಂಎಸ್‌ಐಟಿಯಲ್ಲಿ ಸ್ವಾಮೀಜಿಗಳು ವಿಶ್ರಾಂತಿ ಪಡೆದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಕಾಂಗ್ರೆಸ್ ಮುಖಂಡ ಎಸ್.ಷಫೀ ಅಹಮ್ಮದ್ ಸ್ವಾಮೀಜಿ ಅವರನ್ನು ಸನ್ಮಾನಿಸಿ ಆಶೀರ್ವಾದ ಪಡೆದರು.

ಎಸ್‌ಟಿ ಮೀಸಲಾತಿ ನೀಡಿದ್ದ ಅಂಬೇಡ್ಕರ್: ಬ್ರಿಟಿಷ್ ಕಾಲದಲ್ಲಿ ಕುರುಬ ಸಮುದಾಯವು ಪರಿಶಿಷ್ಟ ಪಂಗಡದಲ್ಲಿ ಇತ್ತು. ಬಿ.ಆರ್.ಅಂಬೇಡ್ಕರ್ ಸಹ ಸಂವಿಧಾನದಲ್ಲಿ ಕುರುಬರಿಗೆ ಎಸ್‌ಟಿ ಮೀಸಲಾತಿ ಕಲ್ಪಿಸಿದ್ದರು. ‌ಅಂಬೇಡ್ಕರ್ ಅವರು ನೀಡಿದ್ದ ಮೀಸಲಾತಿಯನ್ನು ಮತ್ತೆ ಪಡೆಯಲು ಹೋರಾಟ ಅವಶ್ಯವಾಗಿದೆ ಎಂದು ಕಾಗಿನೆಲೆ ಹೊಸದುರ್ಗ ಪೀಠದ ಈಶ್ವರಾನಂದಪುರಿ ಸ್ವಾಮೀಜಿ ತಿಳಿಸಿದರು.

ತುಮಕೂರು ಹೊರವಲಯದ ಮಂಚಕಲ್‌ಕುಪ್ಪೆಯಲ್ಲಿ ನಡೆದ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಗೊಂಡ, ರಾಜಗೊಂಡ, ಕುರುಬ, ಹಾಲುಮತ ಎಲ್ಲವೂ ಕುರುಬ ಸಮುದಾಯದ ಹೆಸರುಗಳೇ ಆಗಿವೆ. ರಾಯಚೂರು ಮತ್ತು ಕೊಡಗಿನಲ್ಲಿ ಎಸ್‌ಟಿ ಮೀಸಲಾತಿ ನೀಡಲಾಗುತ್ತಿದೆ. ಅದನ್ನು ರಾಜ್ಯದಾದ್ಯಂತ ವಿಸ್ತರಿಸಬೇಕು. ದೇವರಾಜ ಅರಸು, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದಾಗ ಎಸ್‌ಟಿ ಮೀಸಲಾತಿ ನೀಡಲು ಶಿಫಾರಸು ಮಾಡಿದ್ದರು. ಅಂದು ಸಮುದಾಯ ಎಚ್ಚರವಾಗಿದ್ದರೆ ಅಂದೇ ಎಸ್‌ಟಿ ಮೀಸಲಾತಿ ಪಡೆಯುತ್ತಿದ್ದೆವು ಎಂದರು.

ಬಿಜೆಪಿ ಮುಖಂಡ ಡಾ.ಹುಲಿನಾಯ್ಕರ್, ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿದರು. ವಿವಿಧ ಮಠಾಧೀಶರು, ಮುಖಂಡರು ವೇದಿಕೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT