ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಪರ್ಯಾಯ ದಸರಾ ಆಚರಣೆ: ಜಿಲ್ಲಾಡಳಿತಕ್ಕೆ ದಸರಾ ಸಮಿತಿ ಸಡ್ಡು

ಜಿಲ್ಲಾಡಳಿತಕ್ಕೆ ದಸರಾ ಸಮಿತಿ ಸಡ್ಡು; ಎರಡು ಕಡೆ ದಸರಾ ಆಚರಣೆ
Published : 25 ಸೆಪ್ಟೆಂಬರ್ 2024, 5:17 IST
Last Updated : 25 ಸೆಪ್ಟೆಂಬರ್ 2024, 5:17 IST
ಫಾಲೋ ಮಾಡಿ
Comments

ತುಮಕೂರು: ಜಿಲ್ಲಾ ಆಡಳಿತದಿಂದ ನಗರದಲ್ಲಿ ದಸರಾ ಆಚರಣೆಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕೆ ಪರ್ಯಾಯವಾಗಿ ದಸರಾ ಸಮಿತಿಯಿಂದ ನಾಡ ಹಬ್ಬಕ್ಕೆ ತಯಾರಿ ನಡೆದಿದೆ.

ಕಳೆದ 33 ವರ್ಷಗಳಿಂದ ದಸರಾ ಆಚರಿಸಿಕೊಂಡು ಬರುತ್ತಿರುವ ‘ತುಮಕೂರು ದಸರಾ ಸಮಿತಿ’ಯನ್ನು ಜಿಲ್ಲಾ ಆಡಳಿತ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನಾಡ ಹಬ್ಬವನ್ನು ಒಂದು ರಾಜಕೀಯ ಪಕ್ಷಕ್ಕೆ ಸೀಮಿತಗೊಳಿಸಲಾಗಿದೆ. ನಾವು ಪ್ರತಿ ವರ್ಷದಂತೆ ಈ ಬಾರಿಯೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಹಬ್ಬ ಆಚರಿಸುತ್ತೇವೆ’ ಎಂದು ದಸರಾ ಸಮಿತಿ ಮುಖಂಡರು ಇಲ್ಲಿ ಮಂಗಳವಾರ ತಮ್ಮ ನಿರ್ಧಾರ ಪ್ರಕಟಿಸಿದರು.

ಸಾರ್ವಜನಿಕರು, ಮುಖಂಡರಿಂದ ಭಿಕ್ಷೆ ರೂಪದಲ್ಲಿ ಹಣ ಸಂಗ್ರಹಿಸಿ ಹಬ್ಬ ಮಾಡುತ್ತಿದ್ದೇವೆ. ಇದುವರೆಗೆ ದಸರಾ ಸಮಿತಿಗೆ ಸರ್ಕಾರದಿಂದ ಒಂದು ರೂಪಾಯಿ ಅನುದಾನ ಬಂದಿಲ್ಲ. ಕಳೆದ ವರ್ಷ ಸರ್ಕಾರದ ಬಳಿ ಹಣ ಕೇಳಿದರೂ ಅನುದಾನ ಬಿಡುಗಡೆ ಮಾಡಲಿಲ್ಲ ಎಂದು ಪ್ರಮುಖರು ಜಂಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಜೂನಿಯರ್‌ ಕಾಲೇಜು ಮೈದಾನದಲ್ಲಿ ದಸರಾ ಆಚರಣೆಗೆ ಅವಕಾಶ ನೀಡುವಂತೆ 3 ತಿಂಗಳ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸರ್ಕಾರದಿಂದ ದಸರಾ ಆಚರಿಸಲು ನಾವು ಸಮ್ಮತಿ ಸೂಚಿಸಿದ್ದೆವು. ಜಿಲ್ಲಾ ಆಡಳಿತ ದಸರಾ ಆಚರಣೆ ಸಂಬಂಧ ಇದುವರೆಗೆ ನಡೆಸಿದ ಸಭೆಗೆ ಸಮಿತಿಯ ಪದಾಧಿಕಾರಿಗಳನ್ನು ಆಹ್ವಾನಿಸಿಲ್ಲ, ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ’ ಎಂದು‌ ದಸರಾ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ದಸರಾ ಸಮಿತಿ ಕೋಶಾಧ್ಯಕ್ಷ ಜಿ.ಎಸ್.ಬಸವರಾಜು, ‘ಜಿಲ್ಲಾ ಆಡಳಿತದ ಕಾರ್ಯಕ್ರಮವನ್ನು ದಸರಾ ಸಮಿತಿ ಸ್ವಾಗತಿಸುತ್ತದೆ. ಆದರೆ, ಜಿಲ್ಲಾಧಿಕಾರಿ ರಚಿಸಿದ ದಸರಾ ಸಮಿತಿಯಲ್ಲಿ ಒಂದು ಪಕ್ಷಕ್ಕೆ ಸೇರಿದವರು ಮಾತ್ರ ಇದ್ದಾರೆ. ಸರ್ಕಾರದ ಅನುದಾನದಲ್ಲಿ ರಾಜಕೀಯ ಪಕ್ಷದ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ’ ಎಂದು ದೂರಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ‘ದಸರಾ ಒಂದು ಧರ್ಮಕ್ಕೆ ಸೀಮಿತವಾಗಬಾರದು’ ಎಂದು ಹೇಳಿದ್ದಾರೆ. ಇದಕ್ಕೆ ನಮ್ಮ ಸಹಮತವಿಲ್ಲ. ದಸರಾ ವಿಧಿ–ವಿಧಾನ, ಆಚರಣೆ, ಸಂಪ್ರದಾಯ ಸಂಪೂರ್ಣವಾಗಿ ಒಂದು ಧರ್ಮಕ್ಕೆ ಸೀಮಿತವಾಗಿದೆ. ಶಮೀಪೂಜೆ ಸನಾತನ ಸಂಸ್ಕೃತಿ, ಸಂಪ್ರದಾಯದ ಕಾರ್ಯಕ್ರಮ. ಹಿಂದೂಗಳನ್ನು ಬಿಟ್ಟು ಅನ್ಯಧರ್ಮೀಯರು ಇದರಲ್ಲಿ ಭಾಗವಹಿಸುವುದಿಲ್ಲ. ಇದು ಹಿಂದೂಗಳಿಗೆ ಸೀಮಿತ ಎಂದು ಪ್ರತಿಪಾದಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ದಸರಾ ಸಮಿತಿ ಗೌರವಾಧ್ಯಕ್ಷ ಭಾವಿಕಟ್ಟೆ ಮಂಜುನಾಥ್, ಕಾರ್ಯಾಧ್ಯಕ್ಷ ಡಾ.ಎಸ್.ಪರಮೇಶ್‌ ಹಾಜರಿದ್ದರು.

10 ದಿನ ವೈಭವದ ದಸರಾ ದಸರಾ ಸಮಿತಿಯಿಂದ ನಗರದ ಬಾರ್‌ಲೈನ್‌ ರಸ್ತೆಯ ರಾಮಮಂದಿರದಲ್ಲಿ ಅ. 3ರಿಂದ 10 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಕಳೆದ ವರ್ಷಕ್ಕಿಂತ ವೈಭವ ವಿಜೃಂಭಣೆಯಿಂದ ಹಬ್ಬ ಆಚರಿಸಲಾಗುವುದು ಎಂದು ಜಿ.ಎಸ್.ಬಸವರಾಜು ತಿಳಿಸಿದರು. ಶೋಭಾಯಾತ್ರೆ ಹೊರೆತುಪಡಿಸಿ ಎಲ್ಲ ರೀತಿಯ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಯಾವುದೇ ಕಾರಣಕ್ಕೂ ಜಿಲ್ಲಾ ಆಡಳಿತದ ಜತೆ ಕೈಜೋಡಿಸಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT