ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಚೀಟಿ ಸಿಕ್ಕಿತು, ಪಹಣಿ ಬಂದಿಲ್ಲ!

ಬಗರ್‌ ಹುಕುಂ ಸಮಿತಿ; ಸಾಗುವಳಿ ಚೀಟಿ ಪಡೆದ 67,213 ರೈತರು
Last Updated 7 ಸೆಪ್ಟೆಂಬರ್ 2020, 3:28 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಬಗರ್‌ಹುಕುಂ ಅಕ್ರಮ– ಸಕ್ರಮ ಸಮಿತಿ ರಚನೆಯಾಗದೆ ಲಕ್ಷಾಂತರ ರೈತರ ಅರ್ಜಿಗಳು ದೂಳು ಹಿಡಿಯುತ್ತಿದ್ದರೆ, ಮತ್ತೊಂದು ಕಡೆ ಈಗಾಗಲೇ ಯೋಜನೆಯಡಿ ಸಾಗುವಳಿ ಚೀಟಿ ಪಡೆದ ಸಾವಿರಾರು ರೈತರ ಹೆಸರಿಗೆ ಇನ್ನೂ ಪಹಣಿಗಳೇ ಬಂದಿಲ್ಲ!

ಇದು ರೈತರು ಸಾಲ ಸೌಲಭ್ಯ ಪಡೆಯಲು ಮತ್ತು ಕೃಷಿ, ತೋಟಗಾರಿಕಾ ಇಲಾಖೆಗಳಿಂದ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ತೊಡಕಾಗಿದೆ. ‘ಪ್ರಭಾವಿ’ಗಳ ಸಂಪರ್ಕ ಮತ್ತು ಶಿಫಾರಸಿದ್ದ ರೈತರಿಗೆ ಮಾತ್ರ ಪಹಣಿಗಳು ಮತ್ತು ಖಾತೆಗಳು ಶೀಘ್ರವಾಗಿ ಆಗುತ್ತವೆ. ಆದರೆ ಸಾಮಾನ್ಯ ರೈತರು ತಮ್ಮ ಹೆಸರಿಗೆ ಪಹಣಿ ಮಾಡಿಕೊಡಿ ಎಂದು ಕಂದಾಯ ಇಲಾಖೆ ಕಚೇರಿಗೆ ಅಲೆಯುತ್ತಿದ್ದಾರೆ. ಹೀಗೆ ಸಾಗುವಳಿ ಚೀಟಿ ಪಡೆದು ಎರಡು ವರ್ಷ ಕಳೆದರೂ ಪಹಣಿಗಳು ರೈತರ ಹೆಸರಿಗೆ ಬಂದಿಲ್ಲ.

ನಮೂನೆ 50 (94ಎ) ಅಡಿ ಜಿಲ್ಲೆಯಲ್ಲಿ 44,712 ರೈತರಿಗೆ ಬಗರ್ ಹುಕುಂ ಸಾಗುವಳಿ ಚೀಟಿ ನೀಡಲಾಗಿದೆ. 76,191.23 ಎಕರೆ ಜಮೀನನ್ನು ಇಷ್ಟು ರೈತರಿಗೆ ಹಂಚಿಕೆ ಆಗಿದೆ.

ನಮೂನೆ 53 (94ಬಿ) ಅಡಿ 22,501 ರೈತರಿಗೆ ಬಗರ್ ಹುಕುಂ ಸಾಗುವಳಿ ಚೀಟಿ ನೀಡಲಾಗಿದೆ. 38,890.29 ಎಕರೆ ಜಮೀನನ್ನು ಈ ರೈತರಿಗೆ ಹಂಚಿಕೆ ಆಗಿದೆ. ‌ಒಟ್ಟು 67,213 ರೈತರು ಬಗರ್‌ಹುಕುಂ ಸಾಗುವಳಿ ಚೀಟಿ ಪಡೆದಿದ್ದರೂ ಇವರಲ್ಲಿ ಶೇ 80ಕ್ಕಿಂತ ಹೆಚ್ಚು ರೈತರ ಹೆಸರಿಗೆ ಪಹಣಿಗಳು ಇನ್ನೂ ಬಂದಿಲ್ಲ.

ಬಗರ್ ಹುಕುಂ ಅಕ್ರಮ ಸಕ್ರಮ ಸಮಿತಿಯು ಎರಡು ಹಂತಗಳಲ್ಲಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನಂತರ ಸ್ಥಿರೀಕರಣ ಮಾಡಲಾಗುತ್ತದೆ. ನಂತರ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಮತ್ತು ಸಾಮಾನ್ಯ ರೈತರಾದರೆ ಇಂತಿಷ್ಟು ಎಂದು ಕಿಮ್ಮತ್ತು ಹಣ ಕಟ್ಟಬೇಕು. ಆ ನಂತರ ಸಾಗುವಳಿ ಚೀಟಿ ನೀಡಲಾಗುತ್ತದೆ. ಈ ವೇಳೆ ಎಲ್ಲ ದಾಖಲೆಗಳನ್ನೂ ಪರಿಶೀಲಿಸಲಾಗುತ್ತದೆ. ಆದರೆ ಪಹಣಿ ಮಾಡಿಕೊಡುವ ಸಮಯದಲ್ಲಿ ಅಧಿಕಾರಿಗಳು ಮತ್ತೆ ಆ ದಾಖಲೆಗಳನ್ನು ತನ್ನಿ, ಈ ಕಡತಗಳನ್ನು ತನ್ನಿ ಎಂದು ಸಬೂಬು ಹೇಳಿ ಪಹಣಿ ಮಾಡಿಕೊಡುತ್ತಿಲ್ಲ ಎನ್ನುವ ಆರೋಪ ರೈತರಿಂದ ಕೇಳಿ ಬರುತ್ತಿದೆ.

ಸೌಲಭ್ಯಕ್ಕೆ ತಡೆ: ರೈತರ ಹೆಸರಿಗೆ ಸೂಕ್ತ ದಾಖಲೆಗಳು ಇಲ್ಲದಿದ್ದರೆ ಕೃಷಿ ಸಂಬಂಧಿತ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಇದರಿಂದ ರೈತರ ಕೃಷಿ ಬದುಕಿಗೆ ಹಿನ್ನಡೆ ಆಗುತ್ತದೆ. ನರೇಗಾ ಸೇರಿದಂತೆ ಯಾವುದೇ ಸೌಲಭ್ಯಗಳು ಸಹ ದೊರೆಯುವುದಿಲ್ಲ.

ಸರ್ಕಾರದ ಸೌಲಭ್ಯಗಳ ಫಲನುಭವಿಯಾಗಲು ಪಹಣಿ ಅತ್ಯಗತ್ಯ. ಬಿತ್ತನೆ ಸಮಯದಲ್ಲಿ ಬಿತ್ತನೆ ಬೀಜ ಪಡೆಯಲು ಕೃಷಿ ಇಲಾಖೆಯ ಕೇಂದ್ರಗಳಲ್ಲಿ, ಬೆಳೆ ಪರಿಹಾರ– ಹೀಗೆ ನಾನಾ ಕಾರಣಕ್ಕೆ ಪಹಣಿ ಅವಶ್ಯ. ಪಹಣಿ ಇಲ್ಲದ ಕಾರಣ ಸರ್ಕಾರಿ ಸೌಲಭ್ಯಗಳು ಬಗರ್‌
ಹುಕುಂ ಸಾಗುವಳಿದಾರರನ್ನು ತಲುಪುತ್ತಿಲ್ಲ.

ಬಗರ್ ಹುಕುಂ ಸಮಿತಿಯೇ ಸಾಗುವಳಿ ಚೀಟಿ ನೀಡಿದೆ. ಅಂದ ಮೇಲೆ ಪಹಣಿ ನೀಡುವುದು ಅಧಿಕಾರಿಗಳ ಕರ್ತವ್ಯ. ಆದರೆ ಮತ್ತೂ ಸರ್ವೆ ನಕ್ಷೆ ಕೊಡಿ, ಆ ಮಾಹಿತಿ ತನ್ನಿ ಎಂದು ಅಲೆದಾಡಿಸುತ್ತಿದ್ದಾರೆ. ಕೆಲವು ಬಲಾಢ್ಯರಿಗೆ ಮಾತ್ರ ಈಗಾಗಲೇ ಪಹಣಿಗಳನ್ನು ಮಾಡಿಕೊಡಲಾಗಿದೆ. ಸಣ್ಣ‍ ‍ಪುಟ್ಟ ರೈತರನ್ನು ಅಲೆದಾಡಿಸಲಾಗುತ್ತಿದೆ ಎಂದು ಸಾಗುವ ಚೀಟಿ ಪಡೆದವರು ಆರೋಪಿಸುತ್ತಾರೆ.

ಶಿರಾತಾಲ್ಲೂಕಿಲ್ಲಿ ಮಂಜೂರಾತಿಯಾಗಿರುವ 800ಕ್ಕೂ ಹೆಚ್ಚು ಸಾಗುವಳಿ ಪತ್ರಗಳು ಇನ್ನೂ ವಿತರಣೆಯೇ ಆಗಿಲ್ಲ. ಸಮಿತಿಯಲ್ಲಿ ಮಂಜೂರಾತಿ ಪಡೆದರೂ ವಿಧಾನ ಚುನಾವಣೆ ಘೋಷಣೆ ಆಯಿತು. ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಹಕ್ಕುಪತ್ರಗಳ ವಿತರಣೆ ಸಾಧ್ಯವಾಗಲಿಲ್ಲ.

ಬದಲಾದ ರಾಜಕೀಯ ಸನ್ನಿವೇಶದಲ್ಲಿಬಿ.ಸತ್ಯನಾರಾಯಣ ಶಾಸಕರಾದರು. ಅವರು ಸಹ ಸಾಗುವಳಿ ಪತ್ರ ವಿತರಣೆಗೆ ಮುಂದಾಗಲಿಲ್ಲ. ಹಕ್ಕುಪತ್ರ ಹಣವಂತರು, ಬಲಾಢ್ಯರಿಗೆ ದೊರೆತಿದೆ ಎನ್ನುವ ದೂರುಗಳು ಇವೆ. ಈ ಹಿಂದೆ ತಹಶೀಲ್ದಾರ್ ಆಗಿದ್ದ ಗಂಗೇಶ್ ಅವಧಿಯಲ್ಲಿ ತುಮಕೂರು ನಗರದ ಹೋಟೆಲ್ ಬಳಿ ಕಡತಗಳಿಗೆ ಸಹಿ ಹಾಕುತ್ತಿದ್ದಾರೆ ಎಂದು ಗಲಾಟೆ ಸಹ ನಡೆದಿತ್ತು. ಒಟ್ಟಿನಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡ ಎನ್ನುವಂತಾಗಿದೆ.

ಎರಡು ವರ್ಷದಿಂದ ಅಲೆದಾಟ

ಗುಬ್ಬಿ: ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿ, ಶಾಸಕರ ನೇತೃತ್ವದ ಬಗರ್ ಹುಕುಂ ಸಮಿತಿ– ಹೀಗೆ ಎಲ್ಲ ಹಂತಗಳಲ್ಲಿಯೂ ದಾಖಲೆಗಳನ್ನು ಪರಿಶೀಲಿಸಿಯೇ ಸಾಗುವಳಿ ಚೀಟಿ ನೀಡಲಾಗಿರುತ್ತದೆ. ಹೀಗಿದ್ದರೂ ಪಹಣಿ ಮಾಡಲು ತಡಮಾಡುತ್ತಿದ್ದಾರೆ. ಇವತ್ತು ನಾಳೆ, ಸರ್ವೆ ನಕ್ಷೆ ತನ್ನಿ ಎಂದು ಮತ್ತೆ ದಾಖಲೆಗಳನ್ನು ಕೇಳುತ್ತಿದ್ದಾರೆ. ಸಾಗುವಳಿ ಚೀಟಿ ಸಿಕ್ಕಿ ಎರಡು ವರ್ಷವಾದರೂ ಪಹಣಿ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಗುಬ್ಬಿ ತಾಲ್ಲೂಕಿನಲ್ಲಿ ಬಗಹ್ ಹುಕುಂ ಯೋಜನೆಯಡಿ ಸಾಗುವಳಿ ಚೀಟಿ ಪಡೆದ ರೈತರೊಬ್ಬರು.

ಗುಬ್ಬಿ ತಾಲ್ಲೂಕಿನಲ್ಲಿಯೇ ಮೂರು ಸಾವಿರಕ್ಕೂ ಹೆಚ್ಚು ಮಂದಿಗೆ ಪಹಣಿಗಳನ್ನು ಮಾಡಿಕೊಟ್ಟಿಲ್ಲ ಎನ್ನಲಾಗುತ್ತಿದೆ. ನಮಗೆ ಗೊತ್ತಿರುವ ನೂರಾರು ರೈತರಿಗೆ ಸಾಗುವಳಿ ಚೀಟಿ ಸಿಕ್ಕಿದೆ. ಅವರೂ ಪಹಣಿ ಪಡೆಯಲು ಹರಸಾಹಸ ಪಡುತ್ತಿದ್ದಾರೆ
ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT