ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚಾವತಾರ ಸರ್ಕಾರ: ಚಂದ್ರು ವಾಗ್ದಾಳಿ

Published 27 ಜುಲೈ 2023, 14:18 IST
Last Updated 27 ಜುಲೈ 2023, 14:18 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದಲ್ಲಿ ಹಿಂದೆ ಬಿಜೆಪಿ ನೇತೃತ್ವದ ಭ್ರಷ್ಟ ಸರ್ಕಾರ ಇದ್ದರೆ, ಈಗ ಸಿದ್ದರಾಮಯ್ಯ ನೇತೃತ್ವದ ಲಂಚಾವತಾರ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಇಲ್ಲಿ ಗುರುವಾರ ವಾಗ್ದಾಳಿ ನಡೆಸಿದರು.

ಆಳಂದ ಶಾಸಕ ಬಿ.ಆರ್.ಪಾಟೀಲ್ ಹಾಗೂ ಇತರೆ 33 ಶಾಸಕರು ಮುಖ್ಯಮಂತ್ರಿಗೆ ಬರೆದಿರುವ ಪತ್ರವೇ ಸರ್ಕಾರದ ಲಂಚಾವತಾರಕ್ಕೆ ಸಾಕ್ಷಿಯಾಗಿದೆ. ಜನರು ಬಾಣಲೆಯಿಂದ ಬೆಂಕಿಗೆ ಬಿದ್ದ ಸ್ಥಿತಿಯಲ್ಲಿ ಇದ್ದಾರೆ. ರಾಜ್ಯದಲ್ಲಿ ವಿಶ್ವಾಸ ಕಳೆದುಕೊಳ್ಳುವ ಮೊದಲು ಎಚ್ಚೆತ್ತುಕೊಂಡರೆ ಕಾಂಗ್ರೆಸ್‌ಗೆ ಉಳಿಗಾಲವಿದೆ. ಇಲ್ಲವಾದರೆ ರಾಜ್ಯದಿಂದಲೂ ಪಕ್ಷಕ್ಕೆ ಟಿಕೆಟ್ ನೀಡಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಸರ್ಕಾರ ‘ಗ್ಯಾರಂಟಿ’ ಗೊಂದಲದಲ್ಲಿ ಮುಳುಗಿದೆ. ಅಭಿವೃದ್ಧಿಗೆ ಹಣ ಮೀಸಲಿಡದೆ ಜನರಿಗೆ ಸಿದ್ದರಾಮಯ್ಯ ದ್ರೋಹ ಬಗೆದಿದ್ದಾರೆ. ನಮ್ಮ ಪಕ್ಷದ ಕಾರ್ಯಕ್ರಮಗಳನ್ನು ನಕಲು ಮಾಡಲು ಹೋಗಿ ಎಡವಿದ್ದಾರೆ. ಹಣವಿಲ್ಲದೆ ಯಾವ ಅಭಿವೃದ್ಧಿ ಕೆಲಸ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಕ್ಕೆ ಯಾವುದೇ ವ್ಯತ್ಯಾಸವಿಲ್ಲ. ಕಳೆದ 9 ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ₹155 ಲಕ್ಷ ಕೋಟಿ ಸಾಲ ಮಾಡಿದ್ದು, ದಿನಕ್ಕೆ ₹9 ಲಕ್ಷ ಕೋಟಿ ಬಡ್ಡಿ ಕಟ್ಟಲಾಗುತ್ತಿದೆ. ರಾಜ್ಯ ಸರ್ಕಾರ ₹55 ಸಾವಿರ ಕೋಟಿ ಸಾಲ ಮಾಡಿದ್ದು, ತಿಂಗಳಿಗೆ ₹35 ಸಾವಿರ ಕೋಟಿ ಬಡ್ಡಿ ಕಟ್ಟುತ್ತಿದೆ. ತೆರಿಗೆ ಹಣವನ್ನು ಬಡ್ಡಿ ಪಾವತಿಸಲು ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಧೋರಣೆ ಮುಂದುವರಿದಿದೆ. ಒಂದೇ ಧರ್ಮ, ಒಂದೇ ಸಂಸ್ಕೃತಿ, ಏಕಮೇವ ಚಕ್ರಾಧಿಪತ್ಯದ ಕನಸನ್ನು ಎನ್‌ಡಿಎ ಕಾಣುತ್ತಿದೆ. ಇದರಿಂದ ಮುಂದಿನ ಲೋಕಸಭೆಯಲ್ಲಿ ಒಟ್ಟಾಗಿ ಹೋರಾಟ ಮಾಡುವ ಸಲುವಾಗಿ ‘ಇಂಡಿಯಾ’ ರಚಿಸಲಾಗಿದೆ. ದೆಹಲಿ ಸರ್ಕಾರದ ಮೇಲಿನ ಹಿಡಿತ ಸಾಧಿಸಲು ಸುಗ್ರೀವಾಜ್ಞೆ ತರಲು ಹೊರಟಿರುವ ಕೇಂದ್ರದ ವಿರುದ್ಧ ರಾಜ್ಯ ಸಭೆಯಲ್ಲಿ ಮತ ಚಲಾಯಿಸುವಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಮನವಿ ಮಾಡಲಾಗಿದೆ. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ಆಮ್ ಆದ್ಮಿ ಪಾರ್ಟಿ ಕಾರ್ಯದರ್ಶಿ ಬಿ.ಟಿ.ನಾಗಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಕುಶಾಲ ಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮಕುಮಾರ್, ಮುಖಂಡರಾದ ಮಧುಸೂಧನ್, ರುಕ್ಸಾನಾ ಭಾನು, ಜಯರಾಮಯ್ಯ, ಗೌಸ್‌ಪೀರ್, ರಾಮಾಂಜನಪ್ಪ, ಗೋರಮಾರದಹಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT