ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಧುಗಿರಿ | ಆರ್ಥಿಕ ಚೇತರಿಕೆ ತುಂಬಿದ ಹೈನುಗಾರಿಕೆ: ಹಸು ಸಾಕಾಣಿಕೆಗೆ ಜನರ ಒಲವು

ಮಧುಗಿರಿ ತಾಲ್ಲೂಕಿನಲ್ಲಿ ನಿತ್ಯ 1.15 ಲಕ್ಷ ಲೀಟರ್ ಹಾಲು ಪೂರೈಕೆ
Published 17 ಜೂನ್ 2024, 7:48 IST
Last Updated 17 ಜೂನ್ 2024, 7:48 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಕೃಷಿಯಿಂದ ನಿರಂತರ ಆರ್ಥಿಕ ನಷ್ಟ ಅನುಭವಿಸುತ್ತಿದ್ದ ಹೋಬಳಿಯ ಜನ ಹೈನಗಾರಿಕೆಯಿಂದ ಆರ್ಥಿಕ ಚೇತರಿಕೆ ಕಂಡಿದ್ದಾರೆ.

ಮಧುಗಿರಿ ತಾಲ್ಲೂಕು ಮಳೆಯಾಶ್ರಿತ ಪ್ರದೇಶ. ಮುಂಗಾರು ಮಳೆ ಒಂದು ವರ್ಷ ಸುರಿದರೆ, ಮತ್ತೆ ನಾಲ್ಕೈದು ವರ್ಷ ಬರ ಎದುರಿಸುವುದು ಮಾಮೂಲಿ. ಇಂತಹ ಸ್ಥಿತಿಯಲ್ಲಿ ರೈತ ಆರ್ಥಿಕ ಲಾಭ ನಿರೀಕ್ಷಿಸುವುದು ಹೇಗೆ? ಇಲ್ಲಿ ವ್ಯವಸಾಯ ಬಿಟ್ಟರೆ ಯಾವುದೇ ಕಾರ್ಖಾನೆ ಮತ್ತು ಶಾಶ್ವತ ನೀರಾವರಿ ಸೌಕರ್ಯಗಳಿಲ್ಲದಿರುವುದರಿಂದ ಇಲ್ಲಿನ ಬಹುತೇಕ ರೈತರು ಕೃಷಿ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ಈ ಹಿಂದೆ ಪ್ರತಿ ರೈತರ ಮನೆಯಲ್ಲಿ ಕೃಷಿಗಾಗಿ ಎತ್ತು, ಕೋಣಗಳನ್ನು ಸಾಕುತ್ತಿದ್ದರು. ಆದರೆ ಇಂದು ಅವುಗಳ ಜಾಗವನ್ನು ಸೀಮೆ ಹಸುಗಳು ತುಂಬಿವೆ. ಭತ್ತ, ಕಬ್ಬು ಮತ್ತಿತರೆ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದ ರೈತರು ಇಂದು ಜಾನುವಾರುಗಳಿಗಾಗಿ ಮಾತ್ರ ಮೇವು ಬೆಳೆದುಕೊಳ್ಳುತ್ತಿದ್ದಾರೆ. ಒಂದೆಡೆ ದವಸ-ಧಾನ್ಯಗಳನ್ನು ಬೆಳೆಯುವುದು ಕಡಿಮೆಯಾಗುತ್ತಿರುವುದು ಆತಂಕಕಾರಿಯಾದರೆ, ಮತ್ತೊಂದಡೆ ಹೈನಗಾರಿಕೆಯಿಂದ ಜೀವನ ಮಟ್ಟ ಸುಧಾರಣೆಯಾಗುತ್ತಿದೆ ಎಂದು ಸೂರನಾಗೇನಹಳ್ಳಿ ಗ್ರಾಮದ ರೈತ ಗಂಗಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನಲ್ಲಿ ನಾಲ್ಕೈದು ತಿಂಗಳ ಹಿಂದೆ ಡೇರಿಗೆ ದಿನಕ್ಕೆ 89 ಸಾವಿರ ಲೀಟರ್ ಹಾಲು ಪೂರೈಕೆಯಾಗುತ್ತಿದ್ದು, ಇಂದು 1.15 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಹಾಲಿನ ಗುಣಮಟ್ಟದಲ್ಲಿ ಜಿಲ್ಲೆಯಲ್ಲಿ 10ನೇ ಸ್ಥಾನದಲ್ಲಿದ್ದ ತಾಲ್ಲೂಕು ಈಗ 6ನೇ ಸ್ಥಾನಕ್ಕೆ ಏರಿದೆ. ರೈತರು ಹೈನುಗಾರಿಕೆಯಿಂದ ಆರ್ಥಿಕವಾಗಿ ಮತ್ತಷ್ಟು ಸಬಲರಾಗಬೇಕು ಎನ್ನುತ್ತಾರೆ ತುಮಕೂರು ಹಾಲು ಒಕ್ಕೂಟದ ತಾಲ್ಲೂಕು ಮುಖ್ಯಸ್ಥ ರಂಜಿತ್.

15.06.24TMK-KOD-2 ಪುರವರ ಹೋಬಳಿಯ ಗಂಕಾರನಹಳ್ಳಿ ಗ್ರಾಮದಲ್ಲಿನ ಚಂದ್ರಮ್ಮ-ರಂಗನಾಥ್ ಎಂಬುವವರ ಹಸುಗಳು.
15.06.24TMK-KOD-2 ಪುರವರ ಹೋಬಳಿಯ ಗಂಕಾರನಹಳ್ಳಿ ಗ್ರಾಮದಲ್ಲಿನ ಚಂದ್ರಮ್ಮ-ರಂಗನಾಥ್ ಎಂಬುವವರ ಹಸುಗಳು.

ಗುಣಮಟ್ಟಕ್ಕೆ ಅನುಗುಣವಾಗಿ ಬೆಲೆ ಹೈನುಗಾರಿಕೆ ಉದ್ಯಮವಾಗಿ ಬೆಳೆಯುತ್ತಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಅನಾಲೈಸರ್ ಮತ್ತು ಸಾಫ್ಟ್‌ವೇರ್‌ ಜಾರಿ ಮಾಡಿರುವುದರಿಂದ ಅನುಕೂಲವಾಗಿದೆ. ಇದರಿಂದ ಗುಣಮಟ್ಟದ ಹಾಲು ಹಾಕಿದವರಿಗೆ ಉತ್ತಮ ಬೆಲೆ ಸಿಗುತ್ತಿದೆ. ಸಂಸ್ಥೆ ಕಾಲಕಾಲಕ್ಕೆ ಬಟವಾಡಿ ಮಾಡುತ್ತಿದೆ. ಸರ್ಕಾರ ಕೂಡ ಈಗಾಗಲೇ ಪ್ರೋತ್ಸಾಹಧನ ಬಿಡುಗಡೆಗೊಳಿಸಿದ್ದು ರೈತರ ಖಾತೆಗೆ ಶೀಘ್ರ ಜಮೆಯಾಗಲಿದೆ.

- ಎಂ.ಪಿ.ಕಾಂತರಾಜು ಕೆಎಂಎಫ್ ನಿರ್ದೇಶಕ ಮೈದನಹಳ್ಳಿ

ನಿತ್ಯ 80 ಲೀಟರ್‌ ಪೂರೈಕೆ 25 ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿದ್ದು ಸದ್ಯ 9 ಹಸು 2 ಕರುಗಳಿವೆ. ನಿತ್ಯ 80 ಲೀಟರ್ ಹಾಲನ್ನು ಡೇರಿಗೆ ಹಾಕುತ್ತೇವೆ. ಆರ್ಥಿಕ ಸ್ಥಿತಿ ಸುಧಾರಿಸಿದ್ದು ಮನೆ ನಿರ್ಮಿಸಿದ್ದೇವೆ. 6 ಗುಂಟೆ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಹಸುಗಳನ್ನು ಸಾಕುತ್ತಿದ್ದೇವೆ. ಸಗಣಿಯಿಂದ ಗೋಬರ್‌ ಗ್ಯಾಸ್ ನಿರ್ಮಿಸಿಕೊಂಡು ನಿತ್ಯ ಅಡುಗೆಗೆ ಬಳಸಿಕೊಳ್ಳುತ್ತಿದ್ದೇವೆ.

- ರಂಗನಾಥ್ ಗಂಕಾರನಹಳ್ಳಿ ಪುರವರ

ಗುಳೆಗೆ ತಡೆ ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ಈ ಪ್ರದೇಶದಲ್ಲಿ ಹೈನುಗಾರಿಕೆ ಇಲ್ಲದಿದ್ದರೇ ಇಲ್ಲಿನ ಬಹುತೇಕ ಜನರು ಗುಳೆ ಹೋಗಬೇಕಾಗಿತ್ತು. ಕೃಷಿ ಜೊತೆಗೆ ಹೈನುಗಾರಿಕೆಯಲ್ಲಿ ಜನರು ತೊಡಗಿಕೊಂಡಿರುವುದರಿಂದ ಇಂದು ಹಳ್ಳಿಗಳಲ್ಲಿ ಒಂದಷ್ಟು ಜನರು ಉಳಿಯಲು ಸಾಧ್ಯವಾಗಿದೆ.

- ಆರ್.ಜಿ. ಮೋಹನ್ ರೆಡ್ಡಿಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT