ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಚಿತಪಡಿಸದ ಬಿಜೆಪಿ ಪ್ರಣಾಳಿಕೆ: ಸಿಪಿಐ

ಅಡ್ಡಗೋಡೆ ಮೇಲೆ ದೀಪ ಇಟ್ಟ ಬಿಜೆಪಿ
Published 15 ಏಪ್ರಿಲ್ 2024, 13:49 IST
Last Updated 15 ಏಪ್ರಿಲ್ 2024, 13:49 IST
ಅಕ್ಷರ ಗಾತ್ರ

ತುಮಕೂರು: ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಜನರಿಗೆ ಏನು ನೀಡುತ್ತೇವೆ ಎಂಬುವುದನ್ನು ನಿಖರವಾಗಿ ಹೇಳಿಲ್ಲ. ಕಿತ್ತು ತಿನ್ನುತ್ತಿರುವ ಬೆಲೆ ಏರಿಕೆ, ಯುವಕರನ್ನು ಕಾಡುತ್ತಿರುವ ನಿರುದ್ಯೋಗದ ಬಗ್ಗೆ ಪ್ರಸ್ತಾಪಿಸಿಲ್ಲ. ಪ್ರಣಾಳಿಕೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತಿದೆ ಎಂದು ಭಾರತ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ಟೀಕಿಸಿದೆ.

ಕಾರ್ಮಿಕರಿಗೆ ಕನಿಷ್ಠ ಕೂಲಿ, ಕಾರ್ಮಿಕರ ಕಾನೂನು, ಕಾಯಂ ಕೆಲಸದ ಬಗ್ಗೆ ಪ್ರಸ್ತಾಪವೇ ಇಲ್ಲ. ಜನ ಸಾಮಾನ್ಯರನ್ನು ಯಾಮಾರಿಸುವ ಬಿಜೆಪಿ ಸೋಲಿಸಬೇಕು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್‌ ಮನವಿ ಮಾಡಿದ್ದಾರೆ.

ಕಳೆದ ಎರಡು ಲೋಕಸಭಾ ಚುನಾವಣೆಗಳ ಸಮಯದಲ್ಲಿ ಬಿಡುಗಡೆ ಮಾಡಿದ ಪ್ರಣಾಳಿಕೆಯ ವಿಚಾರಗಳನ್ನು ಈಗ ಚರ್ಚೆ ಮಾಡುತ್ತಿಲ್ಲ. ಜನರು ಪ್ರಶ್ನೆ ಮಾಡಿದರೆ ‘ನಾವು ಪ್ರಣಾಳಿಕೆಯಲ್ಲಿ ಇಂತಹ ಭರವಸೆ ಕೊಟ್ಟಿಲ್ಲ’ ಎಂದು ಬಿಜೆಪಿ ತನ್ನ ಹಿಂಬಾಲಕರ ಮೂಲಕ ಹೇಳಿಸುತ್ತದೆ. ಸತ್ಯ ಒಪ್ಪಿಕೊಳ್ಳುವ ಜಾಯಮಾನ ಬಿಜೆಪಿಗೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಣಾಳಿಕೆಯು ಬಿಜೆಪಿಯವರ ಕೀಳುಮಟ್ಟದ ಅಭಿರುಚಿ ತೋರುತ್ತದೆ. 70 ವರ್ಷ ದಾಟಿದ ಎಲ್ಲ ಹಿರಿಯರನ್ನು ಆಯುಷ್ಮಾನ್‌ ಆರೋಗ್ಯ ಯೋಜನೆಯಡಿ ಸೇರ್ಪಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದರ ಬದಲಿಗೆ ಎಲ್ಲರಿಗೂ ಉಚಿತ ಆರೋಗ್ಯ ಸೇವೆ ಎಂದು ಘೋಷಿಸಬಹುದಿತ್ತಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಮಹಿಳಾ ಪ್ರಾತಿನಿಧ್ಯದ ಖಾತರಿ, ಫಸಲ್‌ ಭೀಮಾ ಯೋಜನೆಗೆ ಬಲ, ಕೃಷಿ ಮೂಲ ಸೌಕರ್ಯ ವೃದ್ಧಿ, ಭಾರತ್‌ ಕೃಷಿ ಉಪಗ್ರಹ ಉಡಾವಣೆ, ಕೂಲಿ ಪರಿಷ್ಕರಣೆ, ಟ್ಯಾಕ್ಸಿ–ಟ್ರಕ್‌ ಚಾಲಕರ ಒಳಗೊಳ್ಳುವಿಕೆ, ಉದ್ಯೋಗ ಅವಕಾಶ ಹೆಚ್ಚಳ ಈ ಎಲ್ಲ ಶಬ್ದಗಳನ್ನು ಸರಿಯಾಗಿ ಗ್ರಹಿಸಿದರೆ ಜನರಿಗೆ ಮೋಸ ಮಾಡುವ ಉದ್ದೇಶದಿಂದಲೇ ಪ್ರಣಾಳಿಕೆ ರೂಪಿಸಿದ್ದಾರೆ ಎಂಬುವುದು ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.

ಬಿಜೆಪಿಯ ಪ್ರಣಾಳಿಕೆ ಸಂಸ್ಕೃತದ ಯಾವ ಶಬ್ದಗಳಿಂದ ರೂಪಿತವಾಗಿದೆ ಎಂಬುವುದು ತಿಳಿಯುತ್ತಿಲ್ಲ. ಮುಂದೆ ಯಾರಾದರೂ ಪ್ರಣಾಳಿಕೆ ಬಗ್ಗೆ ಪ್ರಶ್ನಿಸಿದರೆ ‘ನಾವು ಯಾವುದನ್ನೂ ನಿಖರವಾಗಿ ಹೇಳಿಲ್ಲ’ ಎಂದು ವಾದ ಮಾಡಲು ಇಂತಹ ಶಬ್ದಗಳನ್ನು ಸೇರಿಸಿದ್ದಾರೆ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT