ತುಮಕೂರು: ಜಿಲ್ಲೆಯಲ್ಲಿ ತೀವ್ರ ಬರ ಇರುವುದರಿಂದ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು. ಈ ಸಂಬಂಧ ಜಿಲ್ಲಾ ಆಡಳಿತಕ್ಕೆ ಎರಡು ದಿನಗಳಿಗೆ ಒಮ್ಮೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ (ಕೆಡಿಪಿ) ಬರ ನಿರ್ವಹಣೆ ಬಗ್ಗೆ ಸುಧೀರ್ಘ ಚರ್ಚೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಎಚ್ಚರಿಕೆಯಿಂದ ಇರುವಂತೆ ನಿರ್ದೇಶಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಪಿಡಿಒ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಒಟ್ಟಾಗಿ ಎರಡು ದಿನಕ್ಕೆ ಒಮ್ಮೆ ಯಾವ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬ ಬಗ್ಗೆ ಚರ್ಚಿಸಿ ವರದಿ ನೀಡಬೇಕು. ವರದಿ ಬಂದ ತಕ್ಷಣ ಜಿಲ್ಲಾ ಆಡಳಿತ ಕ್ರಮ ಕೈಗೊಳ್ಳುತ್ತದೆ. ಬರದ ತೀವ್ರತೆ ಕಡಿಮೆ ಆಗುವವರೆಗೂ ವರದಿ ನೀಡುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಹೇಳಿದರು.
ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಕೆಲಸ ಸಿಗದೆ ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯೋಗ ನೀಡಬೇಕು ಎಂದು ಸೂಚಿಸಿದರು.
ಕಾರ್ಯಪಡೆ: ಹಿಂದಿನ ಸಭೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸದ ಬಗ್ಗೆ ಪ್ರಸ್ತಾಪಿಸಿದ್ದರೂ ಈವರೆಗೂ ಕ್ರಮ ಕೈಗೊಳ್ಳದ ಬಗ್ಗೆ ಶಾಸಕರಾದ ಬಿ.ಸುರೇಶ್‌ಗೌಡ, ಸಿ.ಬಿ.ಸುರೇಶ್‌ಬಾಬು, ಕೆ.ಷಡಾಕ್ಷರಿ, ಎಂ.ಟಿ.ಕೃಷ್ಣಪ್ಪ, ಎಚ್.ಡಿ.ರಂಗನಾಥ್ ಸೇರಿದಂತೆ ಬಹುತೇಕ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ‘ಐದು ಮಂದಿ ಅಧಿಕಾರಿಗಳ ಕಾರ್ಯಪಡೆಯನ್ನು ತಕ್ಷಣ ರಚಿಸಬೇಕು. ದೂರುಗಳು ಬಂದಿರುವ ಸ್ಥಳಗಳಿಗೆ ಈ ತಂಡ ಭೇಟಿನೀಡಿ ಒಂದು ವಾರದಲ್ಲಿ ವರದಿ ನೀಡಬೇಕು. ಈ ವರದಿ ಆಧಾರದ ಮೇಲೆ ನೀರಿನ ಘಟಕಗಳು ಕಾರ್ಯನಿರ್ವಹಿಸುವಂತೆ ಮಾಡಬೇಕು’ ಎಂದು ಜಿ.ಪಂ ಸಿಇಒಗೆ ಸೂಚಿಸಿದರು.
ಇದಕ್ಕೆ ವಿವರಣೆ ನೀಡಿದ ಜಿ.ಪಂ ಸಿಇಒ ಜಿ.ಪ್ರಭು, ‘ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 1,466 ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಿದ್ದು, ಅದರಲ್ಲಿ 1,421 ಘಟಕಗಳು ಕೆಲಸ ಮಾಡುತ್ತಿವೆ. ಪ್ರತಿ ಘಟಕದ ನಿರ್ವಹಣೆಗೆ ಪ್ರತಿ ತಿಂಗಳು ಜಿ.ಪಂನಿಂದ ₹3 ಸಾವಿರ ಹಣ ನೀಡಲಾಗುತ್ತಿದೆ. ಖಾಸಗಿ ಸಂಸ್ಥೆಗಳು 91 ಘಟಕಗಳನ್ನು ನಿರ್ಮಿಸಿದ್ದು, ಅವುಗಳಲ್ಲಿ 41 ಕೆಲಸ ಮಾಡುತ್ತಿಲ್ಲ. ಎಲ್ಲವನ್ನೂ ಇಲಾಖೆ ವ್ಯಾಪ್ತಿಗೆ ವಹಿಸಿಕೊಳ್ಳುವ ಕೆಲಸ ಪೂರ್ಣಗೊಂಡ ನಂತರ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಲಾಗುವುದು. ಇನ್ನು ಮುಂದೆ ಘಟಕ ಸ್ಥಾಪಿಸುವ ಮುನ್ನ ಜಿ.ಪಂ ಅನುಮತಿ ಪಡೆಯಬೇಕು. ನಂತರ ಕಡ್ಡಾಯವಾಗಿ ಇಲಾಖೆಗೆ ವರ್ಗಾವಣೆ ಮಾಡುವಂತೆ ನಿರ್ದೇಶಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.
ಬೋರ್‌ವೆಲ್: ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಶಾಸಕರ ನೇತೃತ್ವದ ಕಾರ್ಯಪಡೆಯಲ್ಲಿ ನಿರ್ಧಾರ ತೆಗೆದುಕೊಂಡು ತಕ್ಷಣವೇ ಕೊಳವೆ ಬಾವಿ ಕೊರೆಸಲಾಗುತಿತ್ತು. ಈಗ ನಿರ್ಧಾರ ತೆಗೆದುಕೊಂಡು ಜಿಲ್ಲಾ ಆಡಳಿತಕ್ಕೆ ವರದಿ ಕಳುಹಿಸಬೇಕು. ಅಧಿಕಾರಿಗಳು ಒಪ್ಪಿಗೆ ನೀಡಿದ ನಂತರ ಕೊರೆಸಬೇಕಿದೆ. ಇದರಿಂದ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿದ್ದು, ಹಿಂದಿನಂತೆ ಅವಕಾಶ ನೀಡಬೇಕು ಎಂದು ಶಾಸಕರು ಒತ್ತಾಯಿಸಿದರು. ಇದಕ್ಕೆ ಸಚಿವರು ಒಪ್ಪಿಗೆ ಸೂಚಿಸಲಿಲ್ಲ. ನಿಯಮ ರೂಪಿಸಿದ್ದು, ಅದರಂತೆ ನಡೆದುಕೊಳ್ಳಬೇಕು. ಕಾರ್ಯಪಡೆಯಿಂದ ವರದಿ ಬಂದ ಅರ್ಧ ಗಂಟೆಯಲ್ಲಿ ಒಪ್ಪಿಗೆ ನೀಡಲಾಗುತ್ತದೆ ಎಂದರು.
ಹೇಮೆ ನೀರು: ಮುಂಗಾರು ಮಳೆ ಆರಂಭದವರೆಗೂ ಕುಡಿಯುವ ನೀರು ಕೊಡಬೇಕಾಗಿದೆ. ಅದಕ್ಕಾಗಿ ಕೆರೆಗಳನ್ನು ತುಂಬಿಸಿ, ಕುಡಿಯಲು ಮಾತ್ರ ಬಳಕೆ ಮಾಡಲಾಗುತ್ತಿದೆ. ಬೆಳೆಗೆ ನೀರು ಕೊಡುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.