ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಮೇಹಿಗಳಿಗಾಗಿಯೇ ಹೊಸ ತಳಿ ಅಕ್ಕಿ! ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪ್ರಯೋಗ

ಬೊಜ್ಜು ಕರಗಿಸಲೂ ನೆರವು
Published 21 ಡಿಸೆಂಬರ್ 2023, 23:30 IST
Last Updated 22 ಡಿಸೆಂಬರ್ 2023, 10:04 IST
ಅಕ್ಷರ ಗಾತ್ರ

ತುಮಕೂರು: ಬಿಳಿ ಅಕ್ಕಿ ಅನ್ನ ಕಂಡರೆ ಭಯಬೀಳುವ ಮಧುಮೇಹಿಗಳಿಗಾಗಿ ಸಕ್ಕರೆ ಅಂಶ ಕಡಿಮೆ ಇರುವ ಭತ್ತವನ್ನು ಈಗ ರಾಜ್ಯದ ರೈತರು ಬೆಳೆಯಲು ಆರಂಭಿಸಿದ್ದಾರೆ.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ‘ಆರ್‌ಎನ್‌ಆರ್–15048’ ಎಂಬ ಭತ್ತದ ತಳಿಯನ್ನು ಪರಿಚಯಿಸಲಾಗಿದೆ. ಸೋನಾ ಮಸೂರಿ ಸೇರಿದಂತೆ ಇತರೆ ಅಕ್ಕಿಗಳಿಗೆ ಹೋಲಿಸಿದರೆ ಈ ಅಕ್ಕಿ ಕಡಿಮೆ ‘ಗ್ಲೈಸಿಮಿಕ್ ಇಂಡೆಕ್ಸ್’ (ಜಿ.ಐ–ಕಾರ್ಬೋಹೈಡ್ರೇಟ್‌ ಹೊಂದಿರುವ ಆಹಾರಗಳಿಗೆ ರೇಟಿಂಗ್) ಹೊಂದಿದೆ. ಇತರ ತಳಿಯ ಅಕ್ಕಿ ಸಾಮಾನ್ಯವಾಗಿ ಶೇ 56.5ರಷ್ಟು ಜಿ.ಐ ಹೊಂದಿದ್ದರೆ, ಈ ತಳಿಯ ಅಕ್ಕಿ ಶೇ 51.5ರಷ್ಟು ಹೊಂದಿದೆ.  

ರಾಗಿ ಹಾಗೂ ಸಿರಿ ಧಾನ್ಯಗಳ ರೀತಿಯಲ್ಲಿಯೇ  ಆರ್‌ಎನ್‌ಆರ್–15048 ಭತ್ತದ ತಳಿಯ ಅಕ್ಕಿಯು ನಿಧಾನವಾಗಿ ದೇಹಕ್ಕೆ ಸಕ್ಕರೆ ಅಂಶ ಬಿಡುಗಡೆ ಮಾಡುವ ವಿಶೇಷ ಗುಣ ಹೊಂದಿದೆ.  

ಆರ್‌ಎನ್‌ಆರ್ ತಳಿಯ ಭತ್ತದಿಂದ ತಯಾರಿಸಿದ ಅಕ್ಕಿಯು ಸೋನಾ ಮಸೂರಿಯಂತೆ ಗಾತ್ರದಲ್ಲಿ ಸಣ್ಣ ಹಾಗೂ ರುಚಿ, ಸ್ವಾದ ಹೊಂದಿದೆ. ಮಧುಮೇಹಿಗಳಿಗೆ ಅನುಕೂಲಕರವಾಗುವುದರ ಜಜೊತೆಗೆ, ಬೊಜ್ಜು ಕರಗಿಸಲೂ ಸಹಕಾರಿಯಾಗಲಿದೆ. ರಾಗಿ, ಇತರ ಕಿರು ಧಾನ್ಯಗಳ ಆಹಾರ ಬಳಸಿದಂತೆ ಈ ಅಕ್ಕಿಯಿಂದ ತಯಾರಿಸಿದ ಅನ್ನ ಸೇವಿಸಬಹುದು.

ತಿಪಟೂರು ತಾಲ್ಲೂಕು ಕೊನೆಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ರಾಜ್ಯದಲ್ಲಿ ಈ ಭತ್ತದ ತಳಿಯನ್ನು ಪರಿಚಯಿಸಿದ್ದು, ಕುಣಿಗಲ್ ತಾಲ್ಲೂಕಿನ ರೈತರು ಬೆಳೆದಿದ್ದಾರೆ. ಮಧುಮೇಹ ಇರುವ
ವರಿಗಾಗಿಯೇ ಹೊಸ ತಳಿಯ ಭತ್ತವನ್ನು ಸಂಶೋಧಿಸಲಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ತೆಲಂಗಾಣ ರಾಜ್ಯದಲ್ಲಿ ಈ ಭತ್ತದ ತಳಿಯನ್ನು (ತೆಲಂಗಾಣ ಸೋನಾ) ಮೊದಲಿಗೆ ಪರಿಚಯಿ
ಸಲಾಗಿತ್ತು. ತುಮಕೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಬೆಳೆಸಲಾಗಿದೆ. ಕುಣಿಗಲ್ ಭಾಗದ 15 ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಈಗ ಕಟಾವು ಮಾಡಲಾಗಿದೆ.

ಹೊಸ ತಳಿಯ ಭತ್ತ ಅಲ್ಪಾವಧಿ ಬೆಳೆಯಾಗಿದ್ದು, 125 ದಿನಗಳಿಗೆ ಕೊಯ್ಲು ಮಾಡಬಹುದು. ಇದು ಬೆಂಕಿರೋಗ ನಿರೋಧಕ ಶಕ್ತಿ ಹೊಂದಿದ್ದು, ನೀರಾವರಿ, ಅರೆನೀರಾವರಿ ಪ್ರದೇಶದಲ್ಲಿ ಬೆಳೆಸಬಹುದಾಗಿದೆ. ಏರೋಬಿಕ್ ಪದ್ಧತಿಯಲ್ಲೂ (ವಾರದಲ್ಲಿ ಒಂದೆರಡು ದಿನ ನೀರು ಹಾಯಿಸುವುದು) ಬೆಳೆ ಬೆಳೆಯಲು ಸಾಧ್ಯವಿದೆ. ಎಕರೆಗೆ 26ರಿಂದ 28 ಕ್ವಿಂಟಲ್‌ ಇಳುವರಿ ಬರುತ್ತದೆ. ಒಂದು ಕ್ವಿಂಟಲ್ ಭತ್ತಕ್ಕೆ 68ರಿಂದ 70 ಕೆ.ಜಿ ಅಕ್ಕಿ ಲಭ್ಯವಾಗುತ್ತದೆ.

ಕುಣಿಗಲ್ ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಹೊಸ ತಳಿಯ ಭತ್ತ ಬೆಳೆಸಲಾಗಿದೆ. ನಮ್ಮಲ್ಲಿಯ ಹವಾಮಾನಕ್ಕೆ ಹೊಂದಿಕೊಳ್ಳುವ ಗುಣ ಹೊಂದಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರದೇಶಗಳಿಗೆ ವಿಸ್ತರಣೆ ಮಾಡುವ ಗುರಿ ಇದೆ.
–ವಿ.ಗೋವಿಂದೇಗೌಡ, ಮುಖ್ಯಸ್ಥ ಕೃಷಿ ವಿಜ್ಞಾನ ಕೇಂದ್ರ ಕೊನೆಹಳ್ಳಿ ತಿಪಟೂರು ತಾಲ್ಲೂಕು
ವಿವಿಧ ಮಾದರಿಯ ಅಕ್ಕಿಗಳಿಗೆ ಹೋಲಿಸಿದರೆ ಹೊಸ ತಳಿಯ ಅಕ್ಕಿಯಲ್ಲಿ ಸಕ್ಕರೆ ಅಂಶ ಕಡಿಮೆ ಇದ್ದು ಮಧುಮೇಹಿಗಳು ಬಳಸಬಹುದು. ಜನರು ಬಳಸಲು ಆರಂಭಿಸಿದರೆ ಸಹಜವಾಗಿ ಬೆಳೆಯುವ ಪ್ರದೇಶವೂ ವಿಸ್ತರಣೆಯಾಗಲಿದೆ.
–ಎಂ.ಪದ್ಮನಾಭನ್, ವಿಜ್ಞಾನಿ ಕೃಷಿ ವಿಜ್ಞಾನ ಕೇಂದ್ರ ಕೊನೆಹಳ್ಳಿ ತಿಪಟೂರು ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT