ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಕಾಡೆಮಿಕ್ ಚೌಕಟ್ಟಿ’ಗೆ ಬಾರದ ಸಿನಿಮಾ: ಕಾಸರವಳ್ಳಿ ಕಿಡಿ

Published 23 ಫೆಬ್ರುವರಿ 2024, 14:06 IST
Last Updated 23 ಫೆಬ್ರುವರಿ 2024, 14:06 IST
ಅಕ್ಷರ ಗಾತ್ರ

ತುಮಕೂರು: ಶೈಕ್ಷಣಿಕ ವಲಯದಲ್ಲಿ ಸಿನಿಮಾ ಕ್ಷೇತ್ರದ ಅಧ್ಯಯನ ಮಾಡಲು ಅವಕಾಶ ಸಿಗದಿರುವುದಕ್ಕೆ ಕನ್ನಡ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರು ವಿಶ್ವವಿದ್ಯಾಲಯ ಡಿವಿಜಿ ಕನ್ನಡ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಹಮ್ಮಿಕೊಂಡಿದ್ದ ‘ತಿಳಿಯ ಪೇಳುವೆ ಇಳೆಯ ಕಥೆಯನ್ನು’ ಐದು ದಿನಗಳ ಸಿನಿಮೋತ್ಸವದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿದರು.

ಈವರೆಗಿನ ಸರ್ಕಾರಗಳು ಮೂರು ಸಮಿತಿಗಳನ್ನು ರಚಿಸಿ ವರದಿಗಳನ್ನು ಪಡೆದುಕೊಂಡಿದ್ದರೂ ಅನುಷ್ಠಾನಕ್ಕೆ ತಂದಿಲ್ಲ. ಎಲ್ಲಾ ವರದಿಗಳಲ್ಲೂ ಪಠ್ಯದಲ್ಲಿ ಸಿನಿಮಾ ಅಧ್ಯಯನ ಅಳವಡಿಸುವಂತೆ ಸಲಹೆ ಮಾಡಿದ್ದರೂ ಅನುಷ್ಠಾನಗೊಳಿಸಿಲ್ಲ. ಶೈಕ್ಷಣಿಕವಾಗಿ ಅಧ್ಯಯನಗಳು ನಡೆದು ಸಮಾಜದಲ್ಲಿ ಸಿನಿಮಾ ಮಾಧ್ಯಮ ಮೂಲಕ ಶಿಸ್ತು ತಂದುಕೊಟ್ಟರೆ ತನಗೆ ಮುಳುವಾಗುತ್ತದೆ ಎಂದು ಆಡಳಿತ ನಡೆಸಿದ ಯಾವ ಸರ್ಕಾರಗಳೂ ‘ಅಕಾಡೆಮಿಕ್ ಚೌಕಟ್ಟಿ’ಗೆ ತರುವ ಪ್ರಯತ್ನ ಮಾಡುತ್ತಿಲ್ಲ. ಹೆಚ್ಚು ಪ್ರಭಾವ ಬೀರುವ ಸಿನಿಮಾ ಮಾಧ್ಯಮವನ್ನು ಅರ್ಥಮಾಡಿಕೊಂಡು ಮನಸ್ಸು ಬೆಸೆಯುವಂತಹ ಪ್ರಯತ್ನ ಇಲ್ಲವಾಗಿದೆ ಎಂದು ವಿಷಾದಿಸಿದರು.

ಕಥೆ, ಪಾತ್ರ, ಮೊದಲಾದ ಸನ್ನಿವೇಶಗಳ ಮೂಲಕ ನೋಡುಗರ ಅರಿವನ್ನು ಹೆಚ್ಚಿಸುತ್ತದೆ. ಸಮಾಜದಲ್ಲಿನ ಸಮಸ್ಯೆಗಳನ್ನು ಸಿನಿಮಾ ಮೂಲಕ ತೋರಿಸಿದರೆ ಅದಕ್ಕೆ ಪರಿಹಾರ ರೂಪಿಸುವ, ನಿಯಂತ್ರಿಸುವ, ನಿಭಾಯಿಸುವ ಕೆಲಸ ಮಾಡುವುದಿಲ್ಲ. ಆದರೆ ಇಂತಹ ಸಿನಿಮಾಗಳಿಗೆ ಪ್ರಶಸ್ತಿ ಕೊಡುತ್ತಾರೆ. ಕೊನೆಗೆ ಪ್ರದರ್ಶನವಾಗದಂತೆ ಆಡಳಿತ ಪ್ರಭುಗಳು ನೋಡಿಕೊಳ್ಳುತ್ತಾರೆ ಎಂದು ಟೀಕಿಸಿದರು.

ಒಳ್ಳೆಯ ಸಾಹಿತ್ಯ ಓದಿದರೆ ಮುಂದೇನು ಎಂದು ಕೇಳುವುದಿಲ್ಲ. ಸಿನಿಮಾದಲ್ಲಿ ಕಥೆಯನ್ನೂ ಮೀರಿದ ವಿಚಾರಗಳು ಇರುತ್ತವೆ. ಅದನ್ನು ನೋಡುಗರು ಅರ್ಥಮಾಡಿಕೊಳ್ಳುವ, ಗ್ರಹಿಸುವುದರ ಮೇಲೆ ನಿಂತಿರುತ್ತದೆ. ಬಹಳಷ್ಟು ಸಾರಿ ಸಿನಿಮಾ ನೋಡುವುದು ಸುಲಭ. ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿರುತ್ತದೆ. ವಸ್ತು ಸ್ಥಿತಿಯನ್ನು ತೋರಿಸುವ, ‘ಕಾಲ’ವನ್ನು ಹಿಡಿದಿಡುವ ಶಕ್ತಿ ಸಿನಿಮಾಗೆ ಮಾತ್ರ ಇದೆ. ಬೇರೆ ಮಾಧ್ಯಮ, ಕಲೆಯಿಂದ ಇಂತಹ ಪ್ರಯತ್ನ ಸಾಧ್ಯವಿಲ್ಲ. ಸಿನಿಮಾದಿಂದ ಕೇವಲ ಮನರಂಜನೆಯಷ್ಟೇ ಸಿಗುವುದಿಲ್ಲ. ಅದರ ಮೂಲ ಸಾಮಗ್ರಿ ಅರ್ಥಮಾಡಿಕೊಂಡರೆ ನಿಜವಾದ ವಿಚಾರಗಳು ತಿಳಿಯುತ್ತವೆ ಎಂದು ಅಭಿಪ್ರಾಯಪಟ್ಟರು.

ಹಾಲಿವುಡ್ ಸಿನಿಮಾಗಳನ್ನು ನಾವು ಮಾದರಿಯಾಗಿ ತೆಗೆದುಕೊಂಡಿದ್ದೇವೆ. ಆದರೆ ಅಲ್ಲಿಂದ ಶ್ರೇಷ್ಠ, ಉತ್ತಮ ಚಿತ್ರಗಳು ಮೂಡಿ ಬಂದಿಲ್ಲ. ತೃತೀಯ ಜಗತ್ತಿನ ರಾಷ್ಟ್ರಗಳಿಂದಲೇ ಉತ್ತಮ ಚಿತ್ರಗಳು ರೂಪುಗೊಂಡಿವೆ. ಸೌಲಭ್ಯಗಳು ಅಗತ್ಯಕ್ಕಿಂತ ಹೆಚ್ಚು ಸಿಗುತ್ತಿದ್ದು, ಅದನ್ನು ಬಳಸಿಕೊಂಡರೆ ಮತ್ತಷ್ಟು ಉತ್ತಮ ಚಿತ್ರಗಳನ್ನು ನಿರ್ಮಿಸಲು ಸಾಧ್ಯವಾಗಿದೆ ಎಂದರು.

ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ಉನ್ನತ ಶಿಕ್ಷಣದ ಅಧ್ಯಯನದ ಭಾಗವಾಗಿ ಸಿನಿಮಾ ವಿಷಯವನ್ನು ಕಲಿಯಲು ಬಿದರೆಕಟ್ಟೆಯಲ್ಲಿರುವ ವಿ.ವಿಯ ಹೊಸ ಕ್ಯಾಂಪಸ್‍ನಲ್ಲಿ 10 ಎಕರೆ ಜಾಗದಲ್ಲಿ ಸಿನಿಮಾ ಕೋರ್ಸ್, ಸ್ಟುಡಿಯೋ ಸ್ಥಾಪಿಸಲಾಗುವುದು’ ಎಂದು ಹೇಳಿದರು.

‘ಎ’ ಸರ್ಟಿಫಿಕೇಟ್ ಮಾನ್ಯತೆ ಪಡೆಯುತ್ತಿರುವ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಸಾಹಿತ್ಯವು ಸಿನಿಮಾ ಆಗಿ ಬದಲಾಗುತ್ತಿದ್ದ ಕಾಲವಿತ್ತು. ಮನೋವಿಕಾಸದ ಬದಲು ಮನೋವಿಕೃತ ವಿಚಾರದ ಮೇಲೆ ಸಿನಿಮಾಗಳು ಬರುತ್ತಿವೆ. ಸಿನಿಮಾ ಯಶಸ್ಸು ನೂರರಿಂದ ಮೂರು ದಿನಕ್ಕೆ ಇಳಿದಿದೆ ಎಂದು ವಿಷಾದಿಸಿದರು.

ಕೊನೆಯ ದಿನ ಅನನ್ಯಾ ಕಾಸರವಳ್ಳಿ ನಿರ್ದೇಶನದ ‘ಹರಿಕಥಾ ಪ್ರಸಂಗ’, ಅಮಿತ್ ರಾಯ್ ನಿರ್ದೇಶನದ ‘ರೋಡ್ ಟು ಸಂಗಮ್’ ಚಿತ್ರ ಪ್ರದರ್ಶನ ಮಾಡಲಾಯಿತು. ಸಿನಿಮಾ ಕುರಿತು ಅನನ್ಯಾ ಕಾಸರವಳ್ಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿ.ವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT