ಶುಕ್ರವಾರ, ಅಕ್ಟೋಬರ್ 22, 2021
21 °C
ರೈತ ಸಂಘ, ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ತುಮಕೂರು: ಅನ್ನದಾತರ ಸಾವು; ಹೆಚ್ಚಿದ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೃಷಿ ಕಾಯ್ದೆಗಳ ವಾಪಸ್‌ಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹತ್ತಿಸಿ ಮೂವರು ರೈತರ ಸಾವಿಗೆ ಕಾರಣರಾದ ಕೇಂದ್ರ ಸಚಿವರ ವಿರುದ್ಧ ತೀವ್ರ ಆಕ್ರೋಶ
ವ್ಯಕ್ತವಾಗಿದೆ.

ರೈತರನ್ನು ಬಲಿ ಪಡೆದ ಕೇಂದ್ರ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು. ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ ಸಮಿತಿ– ಕರ್ನಾಟಕ ವತಿಯಿಂದ ನಗರದ ಬಿಎಸ್ಎನ್ಎಲ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

ರೈತ ಸಂಘ, ಹಸಿರು ಸೇನೆ, ಆರ್‌ಕೆಎಸ್, ಸಿಐಟಿಯು, ಪ್ರಾಂತ ರೈತ ಸಂಘ, ಎಐಡಿಎಸ್‌ಒ ಹಾಗೂ ಇತರೇ ಸಂಘಟನೆಗಳ ಮುಖಂಡರು ಪ್ರತಿಭಟನೆಗೆ ನಡೆಸಿದರು. ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವರ ಬೆಂಗಾವಲು ಪಡೆಯ ವಾಹನ ಹರಿದು ರೈತರು ಹುತಾತ್ಮರಾಗಿದ್ದಾರೆ. ಯೋಗಿ ಆದಿತ್ಯನಾಥ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ. ಗೋವಿಂದರಾಜು, ‘ಉತ್ತರ ಪ್ರದೇಶದಲ್ಲಿರುವ ಯೋಗಿ ಆದಿತ್ಯನಾಥ ಸರ್ಕಾರದ ಧೋರಣೆ ಸರಿಯಿಲ್ಲ. ಪ್ರತಿಭಟನೆಯಲ್ಲಿ ತೊಡಗಿದ್ದ ರೈತರ ಮೇಲೆ ವಾಹನ ಹತ್ತಿಸುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೂಡಲೇ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಹಾಗೂ ಅವರ ಮಗನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ರೈತರೊಂದಿಗೆ ಮಾತುಕತೆ ನಡೆಸಿ, ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು’ ಎಂದು ಒತ್ತಾಯಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಪಟೇಲ್, ‘ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಮುಂದುವರಿಸಿದೆ. ಹಲವು ರೀತಿಯಲ್ಲಿ ಪ್ರತಿಭಟನೆ ಹತ್ತಿಕ್ಕಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಹಕ್ಕುಗಳಿಗಾಗಿ ಹೋರಾಟ ನಡೆಸುವುದು ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು. ಬಿಜೆಪಿಯ ಹತ್ಯಾ ಸಂಸ್ಕೃತಿ ನಿಲ್ಲಬೇಕು. ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಕೂಡಲೇ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ನಮ್ಮ ಹಕ್ಕುಗಳಿಗೆ ಹೋರಾಟ ನಡೆಸಿದರೆ ಅವರನ್ನು ದೇಶದ್ರೋಹಿಗಳು ಎಂದು ಬಿಜೆಪಿ ಬಿಂಬಿಸುತ್ತಿದೆ. ಹಾಗಾದರೆ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಿಜೆಪಿಯವರು ನಡೆಸಿ ಹೋರಾಟವೂ ದೇಶದ್ರೋಹವೆ, ನಿಮ್ಮದು ನಕಲಿ ಹೋರಾಟವೆ ಎಂದು ಪ್ರಶ್ನಿಸಿದರು. ದೇಶದಲ್ಲಿ ಸಂವಿಧಾನ, ನ್ಯಾಯಾಂಗ ವ್ಯವಸ್ಥೆ ಬದುಕಿದೆಯೇ ಎಂಬ ಅನುಮಾನ ಕಾಡುತ್ತಿದೆ. ಬಿಜೆಪಿ ಮುಖಂಡರಿಗೂ, ಬೀದಿ ರೌಡಿಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಅದಕ್ಕಿಂತಲೂ ಕೀಳು ನಡೆಯನ್ನು ಅನುಸರಿಸಲಾಗುತ್ತಿದೆ ಎಂದು ಟೀಕಿಸಿದರು.

ಸಿಐಟಿಯು ಮುಖಂಡ ಸೈಯದ್ ಮುಜೀಬ್, ‘ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು. ಕೂಡಲೇ ರೈತರ ಸಾವಿಗೆ ಕಾರಣರಾದ ಸಚಿವರನ್ನು ವಜಾಗೊಳಿಸಿ, ಸ್ವತಂತ್ರ ತನಿಖೆ ನಡೆಸಬೇಕು’ ಎಂದು
ಹೇಳಿದರು.

ಸಂಯುಕ್ತ ಹೋರಾಟ ಸಮಿತಿ–ಕರ್ನಾಟಕದ ಜಿಲ್ಲಾ ಸಂಚಾಲಕ ಸಿ. ಯತಿರಾಜು, ಆರ್‌ಕೆಎಸ್‍ನ ಸ್ವಾಮಿ ಮಾತನಾಡಿದರು. ಮುಖಂಡರಾದ ಶಂಕರಪ್ಪ, ರವೀಶ್, ಶಿರಾ ಕೆಂಚಪ್ಪ, ಗುಬ್ಬಿ ತಾಲ್ಲೂಕಿನ ನಾಗರತ್ನಾ, ಲೋಕೇಶ್, ವೆಂಕಟೇಗೌಡ, ರುದ್ರೇಶ್, ಸಿದ್ದರಾಜು, ಲಕ್ಕಣ್ಣ, ಚಿರತೆ ಚಿಕ್ಕಣ್ಣ, ಎಐಟಿಯುಸಿ ಕಂಬೇಗೌಡ, ಕೊಳೆಗೇರಿ ಹಿತರಕ್ಷಣಾ ಸಮಿತಿಯ ನರಸಿಂಹಮೂರ್ತಿ, ಮಹಿಳಾ ಸಂಘಟನೆಯ ಕಲ್ಯಾಣಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು