ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿಯನ್ನು ವಿರೋಧಿಸುವ ಮುನ್ನ ಅರಿಯಿರಿ- ಇಮ್ಮಡಿ ಕರಿಬಸವದೇಶೀಕೇಂದ್ರ ಸ್ವಾಮೀಜಿ

Last Updated 6 ಅಕ್ಟೋಬರ್ 2021, 4:05 IST
ಅಕ್ಷರ ಗಾತ್ರ

ತಿಪಟೂರು: ‘ಗಾಂಧೀಜಿಯನ್ನು ಕೇವಲ ಸ್ವಾತಂತ್ರ್ಯ ಹೋರಾಟಗಾರ ಅಥವಾ ರಾಜಕಾರಣಿಯಾಗಿ ನೋಡುವವರು ವಿರೋಧಿಸುವುದೇ ಹೆಚ್ಚು. ಆದರೆ ಪೂರ್ಣವಾಗಿ ಅವರ ಬಗ್ಗೆ ತಿಳಿದವರಿಗೆ ಗಾಂಧಿಯ ಮಹತ್ವ ಅರಿವಾಗಲಿದೆ’ ಎಂದು ಸಿಡ್ಲೇಹಳ್ಳಿ ಸಂಸ್ಥಾನಮಠ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವದೇಶೀಕೇಂದ್ರ ಸ್ವಾಮೀಜಿ ಹೇಳಿದರು.

ನಗರದ ಗುರುಕುಲ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಯೋಜಿಸಿದ್ದ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿಸ್ಮೃತಿ ಮತ್ತು ನವಜೀವನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಶರಣ ನಂತರ ನುಡಿದಂತೆ ತಮ್ಮ ಜೀವನದಲ್ಲಿ ನಡೆದವರು ವಿರಳ. ಅದರಲ್ಲಿ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ ಗಾಂಧೀಜಿ. ಬುದ್ಧನ ಶಾಂತಿ, ಏಸುಕ್ರಿಸ್ತನ ಪ್ರೇಮ, ಮಹಮದ್ ಪೈಗಂಬರರ ಸೋದರತ್ವ ಗುಣಗಳು ಗಾಂಧೀಜಿಯವರಲ್ಲಿದ್ದವು. ಗಾಂಧೀಜಿ ರಾಜಕೀಯ ವಿಚಾರಗಳನ್ನು ಮಾತ್ರ ಚಿಂತಿಸಲಿಲ್ಲ ಬದಲಿಗೆ ದೇಶದ ಸರ್ವತೋಮುಖ ಅಭಿವೃದ್ಧಿಯತ್ತ ಚಿಂತನೆ ನಡೆಸಿದ್ದಾರೆ ಎಂದರು.

ನಗರಸಭೆ ಅಧ್ಯಕ್ಷ ಪಿ.ಜೆ.ರಾಮಮೋಹನ್ ಮಾತನಾಡಿ, ಗಾಂಧೀಜಿ ಅವರ ಚಿಂತನೆಗಳು ಸಕಾಲಿಕ ಮತ್ತು ಸಾರ್ವಕಾಲಿಕ.
ಗಾಂಧೀಜಿ ಅವರ ಸ್ವಚ್ಛತೆ ಮತ್ತು ಸಾಮಾಜಿಕ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಅವರ ವಿಚಾರ ಮತ್ತು ಆದರ್ಶ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಜನಜಾಗೃತಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಪ್ರೆಸ್ ರಾಜಣ್ಣ ಮಾತನಾಡಿ, ಜಗತ್ತಿನಲ್ಲಿ ಅತಿ ಹೆಚ್ಚು ವಿಮರ್ಶೆಗೆ ಒಳಗಾದವರಲ್ಲಿ ಗಾಂಧೀಜಿಯು ಒಬ್ಬರಾಗಿದ್ದಾರೆ. ನುಡಿದಂತೆ ನಡೆಯುವುದನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಮದ್ಯವ್ಯಸನಿಗಳನ್ನು ಪಾನ ಮುಕ್ತರನ್ನಾಗಿಸಿ ಹೊಸ ಜೀವನ ಸೃಷ್ಟಿಸುವುದು ಶ್ಲಾಘನೀಯ ಎಂದರು.

ಗುರುಕುಲಾನಂದಾಶ್ರಮ ಎಜುಕೇಷನ್ ಟ್ರಸ್ಟ್‌ನ ಸಿಇಒಹರಿಪ್ರಸಾದ್ ಮಾತನಾಡಿ, ಜಾಗತಿಕ ಹಾಗೂ ರಾಷ್ಟ್ರದ ಬಿಕ್ಕಟ್ಟಿನ ಸಂದರ್ಭದಲ್ಲಿ ಗಾಂಧೀಜಿ ಪ್ರಸ್ತುತವಾಗಿದ್ದಾರೆ. ಯುವಜನರು ಬದುಕಿನ ಆದರ್ಶಗಳಿಗೆ ಮುಖ್ಯ ನಿದರ್ಶನಗಳು ಗಾಂಧೀಜಿ ಬದುಕಿನಲ್ಲಿ ದೊರೆಯುತ್ತವೆ. ಅದನ್ನು ಅಭ್ಯಾಸಿಸುವ ಮನಸ್ಥಿತಿ ಎಲ್ಲರಲ್ಲಿಯೂ ಮೂಡಬೇಕಿದೆ ಎಂದರು.

ಕುಮಾರ ಆಸ್ಪತ್ರೆ ವೈದ್ಯ ಡಾ.ಶ್ರೀಧರ್, ಜನ ಜಾಗೃತಿ ಸಮಿತಿಯ ಸದಸ್ಯ ಪ್ರತಾಪ್ ಸಿಂಗ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ದಯಾಶೀಲ, ತಾಲ್ಲೂಕು ಯೋಜನಾಧಿಕಾರಿ ಪ್ರವೀಣ್ ಕುಮಾರ್, ಜಾಗೃತಿ ವೇದಿಕೆ ಯೋಜನಾಧಿಕಾರಿ ಗಣೇಶ್.ಪಿ.ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT