ಶುಕ್ರವಾರ, ಏಪ್ರಿಲ್ 16, 2021
20 °C
ಮತ್ತೆ ಟ್ರಸ್ಟ್‌ಗೆ ಗೊರವನಹಳ್ಳಿ ದೇವಾಲಯ ಆಡಳಿತ

ಮಹಾಲಕ್ಷ್ಮಿ ದೇಗುಲ: ದಾಸೋಹ ಪುನರಾರಂಭ

ಎ.ಆರ್.ಚಿದಂಬರ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೊರವನಹಳ್ಳಿಯ ಮಹಾಲಕ್ಷ್ಮಿ ದೇವಾಲಯದಲ್ಲಿನ ದಾಸೋಹ ಕಾರ್ಯಕ್ರಮ ಪುನರಾರಂಭಿಸಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಿಂದ ಇಲ್ಲಿನ ಪ್ರಸಾದ ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು. ಈಚೆಗೆ ಕೋವಿಡ್ ಪ್ರಕರಣ ಕಡಿಮೆಯಾದ ನಂತರ ದೇವಸ್ಥಾನಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ನಿತ್ಯ ದಾಸೋಹ ಪುನರಾರಂಭಿಸಲಾಗಿದೆ.

ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳ ನಡುವೆ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕಳೆದ ಆರೂವರೆ ವರ್ಷಗಳ ಹಿಂದೆ ದೇವಸ್ಥಾನದ ಆಡಳಿತವನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಧುಗಿರಿ ಉಪವಿಭಾಗಾಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಸಂಪೂರ್ಣ ಆಡಳಿತವನ್ನು ಸರ್ಕಾರ ವಹಿಸಿಕೊಂಡಿತ್ತು.

ಟ್ರಸ್ಟ್ ಧರ್ಮದರ್ಶಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಆರೂವರೆ ವರ್ಷಗಳ ನಂತರ ಮತ್ತೆ ದೇವಸ್ಥಾನದ ಆಡಳಿತವನ್ನು ಹೈಕೋರ್ಟ್ ಆದೇಶದ ಮೇರೆಗೆ ಟ್ರಸ್ಟ್ ಆಡಳಿತಕ್ಕೆ ಬಿಟ್ಟುಕೊಡಲಾಗಿದೆ. ಈ ಹಿಂದೆ ಟ್ರಸ್ ಆಡಳಿತದಲ್ಲಿದ್ದ ವೇಳೆ ಸ್ಥಳೀಯವಾಗಿ ಅನೇಕ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಸಲಾಗುತ್ತಿತ್ತು. ಆದರೆ ಸರ್ಕಾರ ಆಡಳಿತ ವಹಿಸಿಕೊಂಡ ನಂತರ ಈ ಎಲ್ಲ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿ ದಾಸೋಹ ಮಾತ್ರ ನಡೆಸುತ್ತಿತ್ತು.

ಸ್ಥಳೀಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೈಗೊಂಡಿದ್ದ ಪ್ರತಿಭಾ ಪುರಸ್ಕಾರ, ಉನ್ನತ ಶಿಕ್ಷಣ ಮಾಡುವ ವಿದ್ಯಾರ್ಥಿಗಳಿಗೆ ಧನಸಹಾಯ, ತಾಲ್ಲೂಕಿನ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉಚಿತ ನೋಟ್ ಪುಸ್ತಕ ಕಾರ್ಯಕ್ರಮ ನಿಲ್ಲಿಸಲಾಗಿತ್ತು.

ತಾಲ್ಲೂಕು, ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಬರುವ ಬಡವರಿಗೆ ಉಚಿತ ಸಾಮೂಹಿಕ ವಿವಾಹ ನಡೆಸುವುದರ ಜೊತೆಗೆ ವಧು-ವರರಿಗೆ ಬಟ್ಟೆ, ತಾಳಿಯನ್ನು ಉಚಿತವಾಗಿ ನೀಡುವುದರೊಂದಿಗೆ ಮದುವೆಗೆ ಬರುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು.

ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡಿ ಡಿಪ್ಲೊಮಾ ಕಾಲೇಜು ಕೂಡ ಪ್ರಾರಂಭಿಸಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಸರ್ಕಾರ ವಹಿಸಿಕೊಂಡ ನಂತರ ಡಿಪ್ಲೊಮಾ ಕಾಲೇಜು ಮುಚ್ಚಲಾಗಿದೆ.

ದೇಗುಲದ ಟ್ರಸ್ಟ್‌ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತಿತ್ತು. ಆದರೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿದ ನಂತರ ಈ ಎಲ್ಲ ಕಾರ್ಯಕ್ರಮಗಳು ಒಂದೊಂದಾಗಿ ಸ್ಥಗಿತಗೊಂಡಿದ್ದವು. ಇದರಿಂದಾಗಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆಯಲ್ಲೂ ಇಳಿಮುಖವಾಗಿತ್ತು. ಈಗ ಮತ್ತೆ ದೇವಸ್ಥಾನದ ಆಡಳಿತವನ್ನು ಟ್ರಸ್ಟ್ ವಹಿಸಿಕೊಂಡಿದೆ. ಈ ಹಿಂದೆ ಟ್ರಸ್ಟ್‌ನಿಂದ ನಡೆಯುತ್ತಿದ್ದ ಎಲ್ಲ ಕಾರ್ಯಕ್ರಮಗಳು ಪುನರಾರಂಭವಾಗುತ್ತವೆ ಎಂಬ ಭರವಸೆ ಭಕ್ತರದ್ದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.