ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರಿಗೆ ರುದ್ರಭೂಮಿ ಒದಗಿಸಲು ಕ್ರಮ

ಕುಂದು- ಕೊರತೆ ಸಭೆಯಲ್ಲಿ ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ಮಾಹಿತಿ
Last Updated 22 ಜನವರಿ 2021, 1:42 IST
ಅಕ್ಷರ ಗಾತ್ರ

ಮಧುಗಿರಿ: ‘ಜನಸಂಖ್ಯೆ ಅನುಗುಣವಾಗಿ ಪರಿಶಿಷ್ಟರಿಗೆ ರುದ್ರಭೂಮಿ ಒದಗಿಸಲು ಖಾಸಗಿ ಜಮೀನು ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಗುರುವಾರ ಉಪವಿಭಾಗ ಮಟ್ಟದ ಪ.ಜಾತಿ ಮತ್ತು ಪಂಗಡದ ಕುಂದು, ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆಲವು ಗ್ರಾಮಗಳಲ್ಲಿ ಜನಸಂಖ್ಯೆ ಆಧಾರದ ಮೇಲೆ ರುದ್ರ ಭೂಮಿ ಮಂಜೂರಾಗಿದೆ. ಇನ್ನುಳಿದ ಗ್ರಾಮಗಳಲ್ಲಿ ರುದ್ರಭೂಮಿ ಸೌಕರ್ಯ ಒದಗಿಸಲು ಪ್ರತ್ಯೇಕ ಸಭೆ ಕರೆಯಲಾಗುವುದು ಎಂದರು.

ತಹಶೀಲ್ದಾರ್ ಡಾ.ಜಿ. ವಿಶ್ವನಾಥ್ ಮಾತನಾಡಿ, ಎಲ್ಲ ಅಧಿಕಾರಿಗಳು ಹಂತ ಹಂತವಾಗಿ ಪರಿಶಿಷ್ಟರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ಪಾವಗಡ ಹಾಗೂ ಮಧುಗಿರಿ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳನ್ನು ಪರಿಶಿಷ್ಟರಿಗೆ ಮೀಸಲಿಟ್ಟು ಹರಾಜು ಮಾಡಬೇಕು. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಹಾಗೂ ನ್ಯಾಯಾಲಯ ಆದೇಶ ಮಾಡಿದ್ದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮುಖಂಡರು ಆರೋಪಿಸಿದರು. ಈ ಬಗ್ಗೆ ಸಂಪೂರ್ಣ ಮಾಹಿತಿ‌ ನೀಡುವಂತೆ ಮುಖ್ಯಾಧಿಕಾರಿಗಳಿಗೆ ಉಪವಿಭಾಗಾಧಿಕಾರಿ ಸೂಚಿಸಿದರು.

ತಾಲ್ಲೂಕಿನಲ್ಲಿ 916 ಜೀತದಾಳುಗಳು ಬಿಡುಗಡೆಯಾಗಿದ್ದು, ಅವರಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದು ಜೀವಿಕ ತಾಲ್ಲೂಕು ಸಂಚಾಲಕ ಮಂಜುನಾಥ್ ಪ್ರಸ್ತಾಪಿಸಿದಾಗ, ತಾ.ಪಂ ಇಒ ಡಿ. ದೊಡ್ಡಸಿದ್ದಯ್ಯ ಮಾತನಾಡಿ ‘₹23.08 ಲಕ್ಷ ರೂ ಹಣವಿದ್ದು, ಮುಂದಿನ ದಿನಗಳಲ್ಲಿ ವಿತರಿಸಲಾಗುವುದು’ ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಮಾತನಾಡಿ, ತಾಲ್ಲೂಕಿನ ಕೆಲ ಪರಿಶಿಷ್ಟರ ಜಮೀನುಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಭೂ ಪರಿವರ್ತನೆ ಮಾಡಿ, ಪ್ರಾಭಾವಿಗಳಿಗೆ ಮಾರಾಟ ಮಾಡುತ್ತಿದ್ದು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಶಿರಾ ತಹಶೀಲ್ದಾರ್ ಮಮತಾ, ಪಾವಗಡ ತಹಶೀಲ್ದಾರ್ ನಾಗರಾಜು, ಮಧುಗಿರಿ ಪುರಸಭೆ ಮುಖ್ಯಾಧಿಕಾರಿ ಅಮರನಾರಾಯಣ, ಸಿಡಿಪಿಒ ಎಸ್.ಅನಿತಾ, ಆಹಾರ ಶಿರಸ್ತೆದಾರ್ ಗಣೇಶ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಅಧಿಕಾರಿ ಹರೀಶ್, ಜೀವಿಕ ಸಂಚಾಲಕಿ ಚಿಕ್ಕಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT