ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಂದಣಿ ವಿಳಂಬಕ್ಕೆ ಆಕ್ರೋಶ

ಕುಣಿಗಲ್‌ನಲ್ಲಿ ಹೆದ್ದಾರಿ ತಡೆ ನಡೆಸಿದ ರಾಗಿ ಬೆಳೆಗಾರರು
Last Updated 26 ಏಪ್ರಿಲ್ 2022, 6:36 IST
ಅಕ್ಷರ ಗಾತ್ರ

ಕುಣಿಗಲ್: ಪಟ್ಟಣದ ಎಪಿಎಂಸಿ ಕಚೇರಿ ಆವರಣದ ರಾಗಿ ಖರೀದಿ ಕೇಂದ್ರದಲ್ಲಿ ಸೋಮವಾರ ಪ್ರಾರಂಭವಾಗಬೇಕಾಗಿದ್ದ ನೋಂದಣಿ ಪ್ರಕ್ರಿಯೆಯು ತಾಂತ್ರಿಕ ಕಾರಣದಿಂದ ವಿಳಂಬವಾದ ಪರಿಣಾಮ ಅಸಮಾಧಾನಗೊಂಡ ರೈತರು, ರಾಷ್ಟ್ರೀಯ ಹೆದ್ದಾರಿ 48ಕ್ಕೆ ಕಲ್ಲುಗಳನ್ನು ಅಡ್ಡಲಾಗಿ ಇಟ್ಟು ಪ್ರತಿಭಟನೆ ನಡೆಸಿದರು.

ಬೆಂಗಳೂರು- ಮಂಗಳೂರು ರಸ್ತೆಯಲ್ಲಿ ರೈತರು ಜಮಾವಣೆಗೊಂಡಿದ್ದರಿಂದ ಎರಡೂ ಕಡೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಪ್ರಯಾಣಿಕರು ಪರದಾಡಿದರು.

ರೈತರ ಆಕ್ರೋಶ ಹೆಚ್ಚಿದ ಹಿನ್ನೆಲೆಯಲ್ಲಿ ಶಾಸಕ ಡಾ.ರಂಗನಾಥ್ ಮತ್ತು ಮಾಜಿ ಶಾಸಕ ಬಿ.ಬಿ. ರಾಮಸ್ವಾಮಿಗೌಡ ಪ್ರತ್ಯೇಕವಾಗಿ ಸಭೆ ನಡೆಸಿದರು. ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ತಾತ್ಕಾಲಿಕ ಪರಿಹಾರದ ವ್ಯವಸ್ಥೆ ಮಾಡಿದರು.

ನೋಂದಣಿ ಪ್ರಾರಂಭದ ಮಾಹಿತಿ ತಿಳಿದ ತಾಲ್ಲೂಕಿನ ಸಾವಿರಾರು ರೈತರು ಭಾನುವಾರ ರಾತ್ರಿಯಿಂದಲೇ ಕೇಂದ್ರಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹ್ನವಾದರೂ ತಾಂತ್ರಿಕ ಕಾರಣಗಳಿಂದ ನೋಂದಣಿ ಕಾರ್ಯ ಪ್ರಾರಂಭವಾಗುವ ಲಕ್ಷಣ ಕಂಡುಬರಲಿಲ್ಲ. ಮತ್ತೊಂದೆಡೆ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಇಲ್ಲದೆ ಬಿಸಿಲಿನಲ್ಲಿ ಬಳಲಿದ ರೈತರು, ಅಧಿಕಾರಶಾಹಿಯ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಶಾಸಕ ರಾಮಸ್ವಾಮಿಗೌಡ ಆಗಮಿಸಿ ರೈತರಿಗೆ ನೀರಿನ ಬಾಟಲಿಗಳನ್ನು ವಿತರಿಸಿದರು. ಶಾಸಕ ರಂಗನಾಥ್‌ ಬಿಸ್ಕೆಟ್‌ ವಿತರಿಸಿದರು. ಈ ಇಬ್ಬರೂ ಪ್ರತ್ಯೇಕವಾಗಿ ತಹಶೀಲ್ದಾರ್‌ ಅವರೊಟ್ಟಿಗೆ ಚರ್ಚಿಸಿದರು.

ಮೊದಲಿಗೆ ಎರಡು ಕಡೆಗಳಲ್ಲಿ ನೋಂದಣಿ ಮಾಡಲಾಗುತ್ತಿದ್ದು, ಎಪಿಎಂಸಿಯಲ್ಲಿಯೇ ಆರು ಹೋಬಳಿಗಳಿಗೆ ಅನ್ವಯಿಸುವಂತೆ ಪ್ರತ್ಯೇಕವಾಗಿ ನೋಂದಣಿಗೆ ವ್ಯವಸ್ಥೆ ಮಾಡಲು ನಿರ್ಧಾರ ಕೈಗೊಂಡ ಬಳಿಕ ರೈತರು ಪ್ರತಿಭಟನೆ ಕೈಬಿಡುವ ನಿರ್ಧಾರ ಪ್ರಕಟಿಸಿದರು. ರೈತರಿಗೆ ಟೋಕನ್ ವ್ಯವಸ್ಥೆ ಮಾಡಲಾಗಿದೆ.

ರಾಮಸ್ವಾಮಿಗೌಡ ಮಾತನಾಡಿ, ‘ತಾಲ್ಲೂಕಿನಲ್ಲಿ ಶಾಸಕರು ಮತ್ತು ಅಧಿಕಾರಿಗಳ ನಡುವಿನ ಸಮನ್ವಯತೆಯ ಕೊರತೆಯಿಂದ ಈ ಸಮಸ್ಯೆಯಾಗಿದೆ. ರೈತರಿಗೆ ಸಮರ್ಪಕ ಮಾಹಿತಿ ನೀಡಲು ಅಧಿಕಾರಿಗಳು ವಿಫಲರಾಗಿದ್ದಾರೆ. ಸಣ್ಣ ಹಿಡುವಳಿದಾರರ ರಾಗಿ ಖರೀದಿಗೆ ಅವಕಾಶ ನೀಡಿರುವಂತೆ ದೊಡ್ಡ ಹಿಡುವಳಿದಾರರಿಂದಲೂ ಖರೀದಿ ಮಾಡಬೇಕಿದೆ’ ಎಂದು
ಹೇಳಿದರು.

ಸರ್ಕಾರದ ವಿರುದ್ಧ ಟೀಕೆ: ಶಾಸಕ ಡಾ.ರಂಗನಾಥ್ ಅವರು, ತಹಶೀಲ್ದಾರ್ ಮಹಬಲೇಶ್ವರ್, ಆಹಾರ ಶಿರಸ್ತೇದಾರ್ ಮಲ್ಲಿಕಾರ್ಜುನ ಮತ್ತು ರೈತರೊಂದಿಗೆ ಚರ್ಚಿಸಿದರು.

‘ರಾಗಿ ಖರೀದಿ ವ್ಯವಸ್ಥೆ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ತಾಲ್ಲೂಕಿನಲ್ಲಿ ಇನ್ನೂ 5 ಸಾವಿರ ರೈತರಿಂದ ರಾಗಿ ಖರೀದಿಯಾಗಬೇಕಿದೆ. ಕಳೆದ ವರ್ಷ 12 ಸಾವಿರ ರೈತರಿಂದ ಖರೀದಿ ಮಾಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಕೇವಲ 8 ಸಾವಿರ ರೈತರಿಂದ ಖರೀದಿಸಲಾಗಿದೆ’ ಎಂದು ಶಾಸಕ ಡಾ.ರಂಗನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT