ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಶೇಂಗಾ ಇಳುವರಿ: ‘ಮಳೆ’ ಪ್ರಭಾವದಿಂದ ಇಳುವರಿ ಕುಂಠಿತ

ನ.21ರಿಂದ ನಾಫೆಡ್ ಮೂಲಕ ಖರೀದಿ ಆರಂಭ
Last Updated 7 ನವೆಂಬರ್ 2020, 1:08 IST
ಅಕ್ಷರ ಗಾತ್ರ

ತುಮಕೂರು: ಈ ಬಾರಿ ಜಿಲ್ಲೆಯ ಶೇಂಗಾ ಬೆಳೆಗಾರರಲ್ಲಿ ಮೂಡಿದ್ದ ‘ಬಂಪರ್‌’ ಆಶಾವಾದ ಕಮರಿದೆ. ಜಿಲ್ಲೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ ಆಗಿತ್ತು. ಬಿತ್ತನೆ ಸಮಯದಲ್ಲಿ ಉತ್ತಮ ಮಳೆ ಸಹ ಬಿದ್ದಿತು. ಇದರಿಂದ ಸಹಜವಾಗಿ ರೈತರು ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಇದ್ದರು.

ಆದರೆ ಈ ಬಾರಿ ಬೆಳೆ ಆಗಿದ್ದರೂ ಇಳುವರಿ ಕುಸಿದಿದೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ ರೈತರು ಕೈ ಕೈ ಹಿಸುಕಿಕೊಳ್ಳುವಂತೆ ಮಾಡಿದೆ. ಗುಣಮಟ್ಟ ಎನ್ನಬಹುದಾದ ಶೇಂಗಾ ಪ್ರಮಾಣ ತೀರಾ ಕಡಿಮೆ ಇದೆ.

‘ಬಿತ್ತನೆ ಆರಂಭದಲ್ಲಿ ಉತ್ತಮ ಮಳೆ ಬಂದಿತು. ಆದರೆ ಕಾಯಿ ಕಟ್ಟುವ ಹಂತದಲ್ಲಿ ಮಳೆ ಬರಲಿಲ್ಲ. ಮತ್ತೊಂದು ಕಡೆ ಕಟಾವಿನ ಸಮಯದಲ್ಲಿಯೂ ಮಳೆ ಸುರಿಯಿತು. ಕಾಯಿ ನೀರಿಡಿಯಿತು. ಇಳುವರಿ ಕುಸಿಯಲು ಇದು ಪ್ರಮುಖವಾಗಿ ಕಾರಣವಾಯಿತು’ ಎಂದು ರೈತರು ಅಸಹಾಯಕತೆ ವ್ಯಕ್ತಪಡಿಸುವರು.

ಶೇಂಗಾ ಗಿಡಗಳು ನೀರುಂಡು ದೊಡ್ಡದಾಗಿ ಬೆಳೆದವು. ಆದರೆ ಕಾಯಿ ಮಾತ್ರ ಬಲಗೊಳ್ಳಲಿಲ್ಲ. ಎಕರೆಗೆ ಕನಿಷ್ಠ 4ರಿಂದ 5 ಕ್ವಿಂಟಲ್ ಇಳುವರಿ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಪ್ರಮಾಣದ ಇಳುವರಿ ದೊರೆತಿಲ್ಲ. ಕ್ವಿಂಟಲ್ ಶೇಂಗಾಕ್ಕೆ ಸರಾಸರಿ ₹ 4,590 ಬೆಲೆ ಇದೆ. ಆದರೆ ಇಳುವರಿ ಇಲ್ಲದ ಕಾರಣ ಈ ಸರಾಸರಿ ಬೆಲೆಯೂ ರೈತರಿಗೆ ದೊರೆಯುತ್ತಿಲ್ಲ.

ನಾಫೆಡ್ ಆರಂಭ: ಈಗಾಗಲೇ ಬಹಳಷ್ಟು ರೈತರು ವರ್ತಕರಿಗೆ ಶೇಂಗಾ ಮಾರಾಟ ಮಾಡಿದ್ದಾರೆ. ಈಗ ರಾಜ್ಯ ಸರ್ಕಾರ ನಾಫೆಡ್ ಮೂಲಕ ಜಿಲ್ಲೆಯಲ್ಲಿ ಶೇಂಗಾ ಖರೀದಿಗೆ ಅಡಿ ಇಟ್ಟಿದೆ. ನ.21ರಿಂದ ಖರೀದಿ ಆರಂಭಿಸುವಂತೆ ಸರ್ಕಾರದಿಂದ ಆದೇಶ ಸಹ ಬಂದಿದೆ. ಪಾವಗಡ ಮತ್ತು ಮಧುಗಿರಿ ತಾಲ್ಲೂಕಿನಲ್ಲಿ ತಲಾ 3 ಮತ್ತು ಶಿರಾ ತಾಲ್ಲೂಕಿನಲ್ಲಿ ಎರಡು ಕಡೆ ಖರೀದಿ ಕೇಂದ್ರ ಆರಂಭಿಸುವ ಸಾಧ್ಯತೆ ಇದೆ.

‘90 ದಿನಗಳ ಕಾಲ ರೈತರಿಂದ ನೋಂದಣಿ ಮಾಡಿಸಿಕೊಂಡು ಶೇಂಗಾ ಖರೀದಿಸಲಾಗುವುದು. ಗರಿಷ್ಠ ಮೂರು ಎಕರೆ ಬೆಳೆ ಅಥವಾ 15 ಕ್ವಿಂಟಲ್ ಶೇಂಗಾ ಖರೀದಿ ಮಾಡಲಾಗುವುದು. ‌ಖರೀದಿಗೆ, ನಾಫೆಡ್ ಮಾನದಂಡಗಳ ಅನುಸಾರ ಖರೀದಿ ನಡೆಸಲಾಗುವುದು. 100 ಗ್ರಾಂ ಶೇಂಗಾದಲ್ಲಿ ಕನಿಷ್ಠ 75 ಗ್ರಾಂ ಕಾಳು ಇರಬೇಕು. ಶೇ 4ರಷ್ಟು ತ್ಯಾಜ್ಯ ಮತ್ತು ಶೇ 4ರಷ್ಟು ಒಡಕು ಕಾಳುಗಳು ಇರಬೇಕು. ಕ್ವಿಂಟಲ್‌ಗೆ ₹ 5,275 ನಿಗದಿಗೊಳಿಸಲಾಗಿದೆ. ಈ ಮಾನದಂಡಗಳನ್ನು ಹೊಂದಿರುವ ಶೇಂಗಾ ಮಾತ್ರ ಖರೀದಿಸಲಾಗುವುದು’ ಎಂದು ಕರ್ನಾಟಕ ಎಣ್ಣೆ ಬೀಜ ನಿಗಮದ ಜಿಲ್ಲಾ ಮಟ್ಟದ ಅಧಿಕಾರಿ ಶಿವಲಿಂಗಯ್ಯ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT