ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಾಲೂರಿನ ‘ತಟ್ಟೆಇಡ್ಲಿ’ಗೆ ಕಾಯುವ ಜನ

25 ವರ್ಷಗಳಿಂದ ನಡೆಯುತ್ತಿರುವ ಹೋಟೆಲ್‌, ಸೌದೆಯಲ್ಲಿ ಆಹಾರ ತಯಾರಿ
Published 16 ಜೂನ್ 2024, 4:38 IST
Last Updated 16 ಜೂನ್ 2024, 4:38 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ತಟ್ಟೆ ಇಡ್ಲಿ ಎಂದಾಕ್ಷಣ ಕೊಡಿಗೇನಹಳ್ಳಿ ಭಾಗದಲ್ಲಿನ ಜನರಿಗೆ ತಟ್ಟನೆ ನೆನಪಾಗುವುದು ಚಿಕ್ಕಮಾಲೂರಿನ ಗುಡಿಸಲು ಹೋಟೆಲ್‌.

ಮಧುಗಿರಿ– ಹಿಂದೂಪುರ ಮುಖ್ಯ ರಸ್ತೆಯಲ್ಲಿನ ಜೋಪಡಿಯಲ್ಲಿ ನಡೆಯುವ ಹೋಟೆಲ್‌ಗೆ ಪ್ರತಿದಿನ ನೂರಾರು ಜನ ಬರುತ್ತಾರೆ. ಇಡ್ಲಿಗಾಗಿ ಕಾದು ನಿಂತು ರುಚಿ ಸವಿದು ಹೋಗುತ್ತಾರೆ. ಚಿಕ್ಕಮಾಲೂರಿನ ಗೌರಮ್ಮ, ನಾಗಭೂಷಣಪ್ಪ ಸುಮಾರು 25 ವರ್ಷಗಳ ಹಿಂದೆ ಈ ಹೋಟೆಲ್‌ ಆರಂಭಿಸಿದ್ದಾರೆ. ತಟ್ಟೆ ಇಡ್ಲಿ, ಚಿತ್ರಾನ್ನ, ಪಲಾವ್, ಬೋಂಡಾ ಈ ಹೋಟೆಲ್‌ ವಿಶೇಷ. ತಟ್ಟೆ ಇಡ್ಲಿ, ಬೋಂಡ ತಿನ್ನಲು ಆಹಾರ ಪ್ರಿಯರು ಮುಗಿಬೀಳುತ್ತಾರೆ.

ಪ್ರತಿ ದಿನ ಬೆಳಗ್ಗೆ 7ರಿಂದ 11 ಗಂಟೆ ವರೆಗೆ ಹೋಟೆಲ್‌ ತೆರೆದಿರುತ್ತದೆ. ಎಲ್ಲ ತಿಂಡಿಯನ್ನು ಸೌದೆ ಒಲೆಯಲ್ಲಿ ತಯಾರಿಸುತ್ತಾರೆ. ಆರೋಗ್ಯಕ್ಕೆ ಹಾನಿಕಾರಕವಾದ ಯಾವುದೇ ಪದಾರ್ಥ ಬಳಸುವುದಿಲ್ಲ. ಇಲ್ಲಿನ ರುಚಿಗೆ ಮನ ಸೋತವರು ಮತ್ತೆ ಮತ್ತೆ ಹೋಟೆಲ್‌ಗೆ ಭೇಟಿ ಕೊಡುತ್ತಾರೆ. ಕೊಡಿಗೇನಹಳ್ಳಿ, ಪುರವರ ಹೋಬಳಿಯಿಂದ ಜನರು ಬಂದು ಹೋಗುತ್ತಾರೆ. ಮುಖ್ಯರಸ್ತೆಯಲ್ಲಿ ಸಂಚರಿಸುವ ಆಟೊ, ಟೆಂಪೊ ಚಾಲಕರು, ಪಟ್ಟಣಕ್ಕೆ ಹೋಗುವವರು, ವಕೀಲರು, ಶಿಕ್ಷಕರು, ಕೂಲಿ ಕೆಲಸಕ್ಕೆ ಹೋಗುವವರು ತಪ್ಪದೇ ಹೋಟೆಲ್‌ನ ಇಡ್ಲಿಯ ರುಚಿ ನೋಡಿ ಮುಂದೆ ಸಾಗುತ್ತಾರೆ.

ಒಂದು ಇಡ್ಲಿಗೆ ₹ 15, ಎರಡು ಇಡ್ಲಿ, ಎರಡು ಬೋಂಡಾಗೆ ₹ 35, ಒಂದು ಪ್ಲೇಟ್‌ ಚಿತ್ರಾನ್ನ, ಬೋಂಡಾಗೆ ₹ 40 ಬೆಲೆ ಇದೆ. 25 ವರ್ಷಗಳ ಹೋಟೆಲ್‌ ಇಂದಿಗೂ ಜನ ನಂಬಿಕೆ ಉಳಿಸಿಕೊಂಡಿದೆ.

‘ಇಡ್ಲಿ ಕೊಡುವ ತನಕ ಜನರು ಕಾಯುತ್ತಾರೆ. ಇಲ್ಲಿಂದ ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತಾರೆ. ಸೌದೆ ಒಲೆಯ ತಿಂಡಿ ತಯಾರಿಸುವುದರಿಂದ ಜನ ಬರುತ್ತಾರೆ. ಯಾವುದೇ ತೊಂದರೆ ಇಲ್ಲದೆ ಹೋಟೆಲ್‌ ನಡೆಯುತ್ತಿದೆ’ ಎಂದು ಮಾಲೀಕರಾದ ಗೌರಮ್ಮ, ನಾಗಭೂಷಣಪ್ಪ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT