ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಚುನಾವಣೆಯಲ್ಲಿ ರಾಜಕೀಯ: ಆರೋಪ

ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಬಿ.ಸಿ.ಶೈಲಾ ನಾಗರಾಜ್
Last Updated 16 ಏಪ್ರಿಲ್ 2021, 4:57 IST
ಅಕ್ಷರ ಗಾತ್ರ

ತುಮಕೂರು: ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸುವ ಸಲುವಾಗಿ ಗ್ರಾಮೀಣ ಶಾಲೆಗಳನ್ನು ದತ್ತು ಪಡೆಯುವಂತಹ ಯೋಜನೆ ರೂಪಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಬಿ.ಸಿ.ಶೈಲಾ ನಾಗರಾಜ್ ಇಲ್ಲಿ ಗುರುವಾರ ಸ್ಪಷ್ಟಪಡಿಸಿದರು.

‘ತಾಲ್ಲೂಕು ಕೇಂದ್ರಗಳಲ್ಲಿ ಸಾಹಿತ್ಯ ಭವನ ನಿರ್ಮಿಸುವ ಆಶಯ ಹೊಂದಿದ್ದೇನೆ. ಯುವಜನರನ್ನು ಸಾಹಿತ್ಯದ ಕಡೆಗೆ ಸೆಳೆಯುವ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶದ ಶಾಲೆ, ಕಾಲೇಜುಗಳಲ್ಲಿ ಸಾಹಿತ್ಯ ಸೌರಭ, ವಿದ್ಯಾರ್ಥಿ ಕವಿಗೋಷ್ಠಿ ಹೆಸರಿನಲ್ಲಿ ಸಾಹಿತ್ಯ ಕಾರ್ಯಕ್ರಮ ಗಳನ್ನು ರೂಪಿಸ ಲಾಗುವುದು. ಭಾಷಾ ಕಮ್ಮಟಗಳು, ದೇಶಿ ಉತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕನ್ನಡ ಸಾಹಿತ್ಯ ಪರಿಷತ್ ರಾಜಕೀಯ ವೇದಿಕೆಯಲ್ಲ. ಸ್ಪರ್ಧಿಸಿರುವ ಕೆಲವರು ಅಲ್ಲಲ್ಲಿ ರಾಜಕೀಯ ಚುನಾವಣೆ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಆದರೆ ಅಂತಹ ಕೀಳುಮಟ್ಟದ ಪ್ರಚಾರಕ್ಕೆ ನಾನು ಇಳಿಯುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ‘ಪರಿಷತ್, ರಾಜಕೀಯಕ್ಕೆ ಹೊರತಾದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ.ಹಾಗಾಗಿ ರಾಜಕೀಯಕ್ಕೆ ಹೊರತಾದ ವ್ಯಕ್ತಿಗಳು ಆಯ್ಕೆಯಾಗಿ ಬರಬೇಕು ಎಂಬುದು ನನ್ನ ಆಶಯ’ ಎಂದು ಹೇಳಿದರು.

‘ವಿದ್ಯಾರ್ಥಿ ದೆಸೆಯಿಂದಲೂ ಪರಿಷತ್ ಆಜೀವ ಸದಸ್ಯಳಾಗಿ ಕನ್ನಡಪರವಾದ ಹಲವಾರು ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ಕನ್ನಡ ನಾಡು, ನುಡಿ ಕಟ್ಟುವ ಕೆಲಸದಲ್ಲಿ ತೊಡಗಿಸಿ ಕೊಂಡಿದ್ದೇನೆ. ಕನ್ನಡದ ಮನಸ್ಸುಗಳನ್ನು ಒಗ್ಗೂಡಿಸಿದ್ದೇನೆ. ಈವರೆಗೂ 15 ಕೃತಿಗಳನ್ನು ರಚಿಸಿದ್ದು, ಐವರ ವ್ಯಕ್ತಿ ಚಿತ್ರ ಸಂಗ್ರಹಿಸಿದ್ದೇನೆ. ಕಳೆದ ಐದು ವರ್ಷಗಳಿಂದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಕಟ್ಟುವಲ್ಲಿ ಮಂಚೂಣಿಯಲ್ಲಿದ್ದೇನೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಕನ್ನಡ ಸಾಹಿತ್ಯಾಸಕ್ತರು ನನ್ನನ್ನು ಬೆಂಬಲಿಸಲಿದ್ದಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ‘ಶೈಲಾ ನಾಗರಾಜು ಉತ್ತಮ ಸಂಘಟನಾಕಾರರು. ಹಲವಾರು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಸಂಘ ಅವರನ್ನು ಬೆಂಬಲಿಸಲು ತೀರ್ಮಾನಿಸಿದೆ’ ಎಂದು ತಿಳಿಸಿದರು.

ಲೇಖಕಿಯರಾದ ಅನ್ನಪೂರ್ಣ ವೆಂಕಟನಂಜಪ್ಪ, ಸಿ.ಎನ್.ಸುಗುಣಾದೇವಿ, ಪರಿಷತ್ ಪದಾಧಿಕಾರಿಗಳಾದ ರಾಣಿ ಚಂದ್ರಶೇಖರ್, ರಾಕ್‍ಲೈನ್ ರವಿಕುಮಾರ್, ಮಹಾಲಿಂಗಪ್ಪ, ಜಯಮ್ಮ ಕವನಯ್ಯ, ಶಿವರಾಜು, ಮಂಜುಳ, ಅಂಬಿಕಾ, ತೋಪನಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT