ಭಾನುವಾರ, ಅಕ್ಟೋಬರ್ 25, 2020
21 °C
ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಸರ್ಕಾರಕ್ಕೆ ಸಲ್ಲಿಕೆ; ಹಂತ ಹಂತವಾಗಿ ಪ್ರವಾಸೋದ್ಯಮ ಚೇತರಿಕೆ

ತುಮಕೂರು: 30 ಸ್ಥಳಗಳಿಗೆ ಪ್ರವಾಸಿತಾಣ ಮಾನ್ಯತೆಗೆ ಪ್ರಸ್ತಾವ

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಲಾಕ್‌ಡೌನ್ ಮತ್ತು ಕೊರೊನಾ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿದ್ದ ಪ್ರವಾಸೋದ್ಯಮ ಜಿಲ್ಲೆಯಲ್ಲಿ ಚೇತರಿಕೆ ಕಾಣುತ್ತಿದೆ. ಅಲ್ಲದೆ ಮತ್ತೊಂದು ಖುಷಿಯ ವಿಷಯ ಎಂದರೆ ಜಿಲ್ಲೆಯ 30 ಸ್ಥಳಗಳನ್ನು ಪ್ರವಾಸಿತಾಣಗಳನ್ನಾಗಿ ಮಾನ್ಯ ಮಾಡುವಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯು ರಾಜ್ಯ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.

ಒಂದು ವೇಳೆ ಸರ್ಕಾರ ಈ ತಾಣಗಳ ವಿಚಾರದಲ್ಲಿ ಹಸಿರು ನಿಶಾನೆ ತೋರಿದರೆ ಭವಿಷ್ಯದಲ್ಲಿ ತುಮಕೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಮತ್ತಷ್ಟು ಅವಕಾಶಗಳು ದೊರೆಯಲಿವೆ. ತುಮಕೂರು ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ನಗರಗಳಲ್ಲಿ ಪ್ರಮುಖವಾದುದು. ಬೆಂಗಳೂರಿಗರ ವಾರಾಂತ್ಯದ ಪ್ರವಾಸಕ್ಕೆ ತುಮಕೂರು ಸಹ ನೆಚ್ಚಿನತಾಣಗಳಲ್ಲಿ ಒಂದು.

ಹಸಿರು ವನಸಿರಿಯನ್ನು ಹೊದ್ದಿರುವ ದೇವರಾಯದುರ್ಗ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರ ವಜ್ರ, ಸಿದ್ಧಗಂಗಾ ಮಠ, ಸಿದ್ಧರಬೆಟ್ಟ, ತೀತಾ ಜಲಾಶಯ, ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯ, ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲ, ತಿಪಟೂರು ತಾಲ್ಲೂಕು ಅರಳಗುಪ್ಪೆಯ ನಟರಾಜ, ಮಧುಗಿರಿಯ ಏಕಶಿಲಾ ಬೆಟ್ಟ, ಜಯಮಂಗಲಿ ಕೃಷ್ಣಮೃಗ ವನ್ಯಧಾಮ, ಪಾವಗಡ, ಶಿರಾದಲ್ಲಿ ಕೋಟೆ... ಸದ್ಯ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಾಗಿವೆ.

ಈಗ ಜಿಲ್ಲೆಯಲ್ಲಿ 30 ಐತಿಹಾಸಿಕ ಮತ್ತು ಪ್ರವಾಸಿ ತಾಣಗಳನ್ನು ಜಿಲ್ಲಾಡಳಿತ ಗುರುತಿಸಿ ಪ್ರವಾಸಿ ತಾಣಗಳ ಮಾನ್ಯತೆ ನೀಡುವಂತೆ ಪ್ರಸ್ತಾವ ಸಲ್ಲಿಸಿದೆ. ಈ ತಾಣಗಳ ಇತಿಹಾಸವನ್ನು ಪ್ರಮುಖವಾಗಿ ಗಮನದಲ್ಲಿ ಇಟ್ಟುಕೊಂಡಿದ್ದು ಪ್ರಸ್ತಾವ ಸಲ್ಲಿಸಲಾಗಿದೆ. ಒಂದು ವೇಳೆ ಈ ಸ್ಥಳಗಳಿಗೆ ಮಾನ್ಯತೆ ದೊರೆತರೆ ಪ್ರವಾಸೋದ್ಯಮ ಅಭಿವೃದ್ಧಿಯ ಜತೆಗೆ ಸ್ಥಳೀಯ ಅಭಿವೃದ್ಧಿಯೂ ಸಾಧ್ಯ.

ಇತ್ತೀಚೆಗೆ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ‘ಜಿಲ್ಲೆಯಲ್ಲಿರುವ ಪಾರಂಪರೀಕ ತಾಣಗಳನ್ನು ಗುರುತಿಸಿ ಪ್ರಸ್ತಾವ ಸಲ್ಲಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು.

ಜಿಲ್ಲೆಯಲ್ಲಿರುವ ಅತ್ಯಂತ ಪುರಾತನ ಹೊಯ್ಸಳ ಕಾಲದ ದೇವಾಲಯಗಳು, ಕಲ್ಯಾಣಿಗಳು, ಜೈನ ಬಸದಿಗಳ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸಲು ಸಂರಕ್ಷಣಾ ಎಂಬ ಹೊಸ ಯೋಜನೆ ಜಾರಿಗೊಳಿಸಲಾಗುತ್ತಿದೆ. ಪುರಾತನ ಇತಿಹಾಸವುಳ್ಳ ಸ್ಥಳಗಳು, ರಾಮಾಯಣಕ್ಕೆ ಸಂಬಂಧಪಟ್ಟ ಪ್ರದೇಶಗಳನ್ನು ಸಂರಕ್ಷಿಸಬೇಕು ಎಂದಿದ್ದರು.

ಚೇತರಿಕೆ ಹಾದಿ: ಲಾಕ್‌ಡೌನ್ ಸಮಯದಲ್ಲಿ ಪ್ರವೇಶ ನಿರ್ಬಂಧ ಮತ್ತು ಕೊರೊನಾ ಭಯದ ಕಾರಣಕ್ಕೆ  ಜಿಲ್ಲೆಯ ಪ್ರವಾಸಿ ತಾಣಗಳತ್ತ ಜನರು ಮುಖಮಾಡಿರಲಿಲ್ಲ. ಈಗ ಲಾಕ್‌ಡೌನ್ ತೆರವಾದ ನಂತರ ಹಂತ ಹಂತವಾಗಿ ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ದೇವರಾಯನ ದುರ್ಗಕ್ಕೆ ಬರುವ ಪ್ರವಾಸಿಗರು ಮತ್ತು ಪ್ರೇಮಿಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಎಡೆಯೂರು ಸಿದ್ಧಲಿಂಗೇಶ್ವರ ದೇವಾಲಯ, ಜಯಮಂಗಲಿ ಕೃಷ್ಣಮೃಗ ವನ್ಯಧಾಮ, ಗೊರವನಹಳ್ಳಿ ಮಹಾಲಕ್ಷ್ಮಿ ದೇಗುಲಗಳಿಗೆ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಏರುಮುಖದಲ್ಲಿ ಸಾಗುತ್ತಿದೆ.

39 ಕೋಟಿ ಮಂಜೂರು: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಡಿ 84 ಕಾಮಗಾರಿಗಳಿಗೆ ₹ 39.41 ಕೋಟಿ ಬಿಡುಗಡೆ ಮಾಡಲಾಗಿದೆ. ಇದು ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಲಿದೆ.

ಪ್ರಚಾರಕ್ಕೆ ವೇದಿಕೆ: ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ‘ಕಾಫಿಟೇಬಲ್ ಬುಕ್‌’ ರೂಪಿಸಲು ಮತ್ತು ಡ್ರೋನ್ ಕ್ಯಾಮೆರಾ ಬಳಸಿ ಪ್ರವಾಸಿತಾಣಗಳನ್ನು ಚಿತ್ರೀಕರಿಸಲು 2019ರಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಯೋಜನೆಗಳನ್ನು ಹಾಕಿಕೊಂಡಿತ್ತು. ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಹೆಚ್ಚು ಜನರಿಗೆ ತಲುಪುವಂತೆ ಮಾಡುವುದು ಇದರ ಉದ್ದೇಶ. ಚಿತ್ರೀಕರಣ, ಕಾಫಿಟೇಬಲ್ ಪುಸ್ತಕದ ಕೆಲಸಗಳು ಪೂರ್ಣವಾಗಿದ್ದು ಅವು ಬಿಡುಗಡೆಗೆ ಸಿದ್ಧವಾಗಿವೆ.

ಹಂತ ಹಂತವಾಗಿ ಬೆಳವಣಿಗೆ

ಪ್ರವಾಸೋದ್ಯಮದಿಂದ ಸ್ಥಳೀಯವಾಗಿ ಒಂದಿಷ್ಟು ಉದ್ಯೋಗಗಳು ಮತ್ತು ವ್ಯಾಪಾರ ಸೃಷ್ಟಿಯಾಗುತ್ತವೆ. ಕೊರೊನಾ ಕಾರಣದಿಂದ ಇಂತಹ ವ್ಯಾಪಾರಿಗಳಿಗೂ ತೊಂದರೆ ಆಗಿತ್ತು. ಆದರೆ ಈಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಹಂತ ಹಂತವಾಗಿ ಗರಿಗೆದರುತ್ತಿವೆ. ಇದು ಈ ಸಣ್ಣ ಪುಟ್ಟ ವ್ಯಾಪಾರಿಗಳ ಬದುಕು ಸುಧಾರಣೆಗೂ ಅನುಕೂಲವಾಗುತ್ತಿದೆ ಎನ್ನುವರು ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಕಿರಣ್.

ಸ್ಥಳೀಯರಿಗೆ ಉದ್ಯೋಗ

ಜಿಲ್ಲೆಯಲ್ಲಿ ಹೊಸ ಪ್ರವಾಸಿ ತಾಣಗಳು ಮಾನ್ಯತೆ ಪಡೆಯುವುದರಿಂದ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ. ಪ್ರವಾಸಿ ತಾಣವಾದ ಕಾರಣ ಅಲ್ಲಿ ರಸ್ತೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಆದ್ಯತೆ ನೀಡುತ್ತದೆ. ಇದು ಆ ಪ್ರದೇಶದ ಬೆಳವಣಿಗೆಗೆ ಪ್ರಮುಖವಾಗಿ ಕಾರಣವಾಗುತ್ತದೆ ಎಂದು ಮಾಹಿತಿ ನೀಡುವರು ಇತಿಹಾಸ ಸಂಶೋಧಕ ಹಾಗೂ ಪ್ರವಾಸಿ ತಾಣಗಳನ್ನು ಗುರುತಿಸುವಲ್ಲಿ ಪ್ರಮುಖಪಾತ್ರವಹಿಸಿದ್ದ ಡಾ.ಡಿ.ಎನ್.ಯೋಗೀಶ್ವರಪ್ಪ.

ಈ ತಾಣಗಳಲ್ಲಿ ಐತಿಹಾಸಿಕ ಸ್ಮಾರಕಗಳು, ದೇವಾಲಯಗಳು, ಕೋಟೆಗಳು, ಜಲಾಶಯಗಳು, ಪಕ್ಷಿಧಾಮಗಳು ಇವೆ. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಈ ವಿಚಾರದಲ್ಲಿ ಪ್ರಮುಖವಾಗಿ ಕೆಲಸ ಮಾಡಿದರು. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಮಾಹಿತಿಯುಳ್ಳ ಪ್ರವಾಸಿ ಕೈಪಿಡಿ ಇಲ್ಲಿಯವರೆಗೂ ಇರಲಿಲ್ಲ. ಈಗ ಅದನ್ನು ರೂಪಿಸಲಾಗಿದೆ ಎಂದರು.

ಸೆಳೆಯುತ್ತಿದೆ ದೇವರಾಯನ ದುರ್ಗ

ದೇವರಾಯನದುರ್ಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ. ವಾರಾಂತ್ಯದಲ್ಲಿ ಬೆಂಗಳೂರಿನಿಂದ ಪ್ರೇಮಿಗಳು, ಪ್ರವಾಸ ಪ್ರಿಯರು, ಭಕ್ತರು ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಬರುತ್ತಾರೆ. ಭೋಗ ನಂದೀಶ್ವರ ಮತ್ತು ಯೋಗನಂದೀಶ್ವರ ದೇಗುಲಗಳಿಗೆ ರಾಜ್ಯದ ನಾನಾ ಕಡೆಗಳ ಭಕ್ತರು ಇದ್ದಾರೆ. ಕೊರೊನಾ ಕಾರಣದಿಂದ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ತೀರಾ ಕಡಿಮೆ ಆಗಿತ್ತು. ಆದರೆ ಈಗ ಯಥಾಪ್ರಕಾರ ದುರ್ಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿಯೇ ಜನರು ಬರತೊಡಗಿದ್ದಾರೆ. ದೇವರಾಯನ ದುರ್ಗದ ಪ್ರಾಕೃತಿಕ ಸವಿ ಸವಿಯುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು