ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ವೇತನ, ಸೇವಾ ಭದ್ರತೆ ಕಲ್ಪಿಸಿ

ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಸಂಘ ಮನವಿ
Last Updated 27 ಜೂನ್ 2019, 17:17 IST
ಅಕ್ಷರ ಗಾತ್ರ

ತುಮಕೂರು: ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು. ಸೇವಾ ಭದ್ರತೆ ಒದಗಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಸಂಘವು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಪಂಚಾಯಿತಿ ಗ್ರಂಥಾಲಯಕ್ಕೆ ರೋಸ್ಟರ್ ಪದ್ಧತಿಯಡಿ ಗೌರವ ಧನ ಆಧಾರದ ಮೇಲೆ ಒಟ್ಟು 5766 ಜನರನ್ನು ನೇಮಿಸಿಕೊಂಡಿತ್ತು. ₹ 7 ಸಾವಿರ ಗೌರವಧನ ನೀಡಲಾಗುತ್ತಿತ್ತು. ಬಳಿಕ ಕಾರ್ಮಿಕ ಇಲಾಖೆಯು 2016ರಲ್ಲಿ ಕನಿಷ್ಠ ವೇತನ ₹ 13,200 ನಿಗದಿಪಡಿಸಿ ರಾಜ್ಯ ಪತ್ರದಲ್ಲಿ ಪ್ರಕಟಿಸಿತು.

ಆದರೆ, ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಓದುಗರಿಗಿದ್ದ 8 ಗಂಟೆಯನ್ನು ಕಡಿತಗೊಳಿಸಿ 4 ಗಂಟೆಗೆ ಮಾತ್ರ ಸೀಮಿತಗೊಳಿಸಿತು. ಸೇವಾ ಅವಧಿ ಕಡಿಮೆ ಮಾಡಿದ್ದಕ್ಕೆ, ಕನಿಷ್ಠ ವೇತನ ಜಾರಿ ಮಾಡಲಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ನಾಲ್ಕು ತಾಸು ಕೆಲಸ ಮಾಡುವುದರಿಂದ ಕನಿಷ್ಠ ವೇತನ ಜಾರಿ ಮಾಡಲು ಸಾಧ್ಯವಿಲ್ಲ. ಗ್ರಂಥಾಲಯಗಳಲ್ಲಿ ಹೆಚ್ಚು ಪುಸ್ತಕಗಳಿಲ್ಲ ಎಂದು ಹೇಳಿ ಇಲಾಖೆ ಅಧಿಕಾರಿಗಳು ಸರ್ಕಾರದ ದಿಕ್ಕು ತಪ್ಪಿಸಿದರು ಎಂದು ದೂರಿದರು.

2019ರ ಫೆಬ್ರುವರಿ 26ರಿಂದ ಗ್ರಾಮ ಪಂಚಾಯಿತಿಗಳಿಗೆ ಗ್ರಾಮೀಣ ಗ್ರಂಥಾಲಯಗಳನ್ನು ವರ್ಗಾಯಿಸಿದ್ದು, ಮೇಲ್ವಿಚಾರಕರಿಗೆ ಮೊದಲು ಬರುತ್ತಿದ್ದ ಗೌರವ ಧನವೂ ಇಲ್ಲ. ಕನಿಷ್ಠ ವೇತನವೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.

ಗ್ರಂಥಾಲಯ ಇಲಾಖೆಗೆ ವೇತನ ಕುರಿತು ವಿಚಾರಿಸಿದರೆ ಪಂಚಾಯಿತಿಗೆ ವರ್ಗಾವಣೆಯಾಗಿದೆ ಎನ್ನುತ್ತಾರೆ. ಪಂಚಾಯಿತಿಯವರು ತಮಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಬೇಸತ್ತು ಕೆಲ ಗ್ರಂಥಾಲಯ ಮೇಲ್ವಿಚಾರಕರು ಆತ್ಮಹತ್ಯೆ ಯತ್ನ ಮಾಡಿದ್ದಾರೆ. ವಿಧಾನಸೌಧದಲ್ಲಿ ಈಚೆಗೆ ಆತ್ಮಹತ್ಯೆ ಮಾಡಿಕೊಂಡ ಚಿಕ್ಕಬಳ್ಳಾಪುರ ಆನೂರು ಗ್ರಾಮದ ರೇವಣಕುಮಾರ್ ಅವರೂ ಗ್ರಂಥಾಲಯ ಮೇಲ್ವಿಚಾರಕರಾಗಿದ್ದರು ಎಂದು ಸಮಸ್ಯೆ ವಿವರಿಸಿದರು.

ಸರ್ಕಾರ ಇನ್ನಾದರೂ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ನೀಡಿ ಸೇವಾ ಭದ್ರತೆ ಒದಗಿಸಬೇಕು. ಬಾಕಿ ವೇತನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಂಘದ ಪ್ರತಿನಿಧಿಗಳಾದ ಸಿರಿವರ ಶಿವಮೂರ್ತಿ, ದಯಾನಂದಸ್ವಾಮಿ, ಟಿ.ಎಲ್.ಸಿದ್ದಗಂಗಣ್ಣ, ಮಹದೇವಯ್ಯ, ಮಾಯಿಗಯ್ಯ ಅವರು ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT