ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟಿದ ಊರಿಗೆ 25 ವರ್ಷ ಕಾಲಿಡದ ಸ್ವಾಮೀಜಿ

Last Updated 21 ಜನವರಿ 2019, 11:16 IST
ಅಕ್ಷರ ಗಾತ್ರ

ತುಮಕೂರು: ಶಿವಕುಮಾರ ಸ್ವಾಮೀಜಿ ತಾವು ಹುಟ್ಟಿದ ಗ್ರಾಮ ವೀರಾಪುರಕ್ಕೆ 25 ವರ್ಷ ಕಾಲಿಟ್ಟಿರಲಿಲ್ಲ! ಅದಕ್ಕೆ ಕಾರಣ ಗುರುಗಳಾದ ಉದ್ಧಾನ ಶಿವಯೋಗಿಗಳ ಮೇಲಿನ ಭಕ್ತಿ. ಶಿವಣ್ಣ ಸ್ವಾಮೀಜಿಯಾಗುವುದು ಅವರ ತಂದೆ ವೀರಾಪುರದ ಪಟೇಲ್ ಹೊನ್ನೇಗೌಡರಿಗೆ ಇಷ್ಟ ಇರಲಿಲ್ಲ.

ಬಿ.ಎ.ವ್ಯಾಸಂಗ ಮಾಡಿರುವ ಮಗ ಉನ್ನತ ಅಧಿಕಾರಿ ಆಗಬೇಕು ಎನ್ನುವುದು ಅವರ ಆಸೆ. ಬೇಸರದಲ್ಲಿರುವ ಹೊನ್ನೇಗೌಡರಿಗೆ ಸಾಂತ್ವನ ಹೇಳಬೇಕು ಎಂದು ಸ್ವತಃ ಉದ್ದಾನ ಶಿವಯೋಗಿಗಳು ವೀರಾಪುರಕ್ಕೆ ಹೋದರು. ಅವರಿಗೆ ಸಿಗಬಾರದೆಂಬ ಕಾರಣಕ್ಕಾಗಿಯೇ ಗೌಡರು ಮನೆಯಲ್ಲಿ ಇರಲಿಲ್ಲ.

ವೀರಾಪುರ ಗ್ರಾಮದಲ್ಲಿರುವ ಹೊನ್ನಪ್ಪ (ಶಿವಕುಮಾರಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ) ಅವರ ಮನೆ
ವೀರಾಪುರ ಗ್ರಾಮದಲ್ಲಿರುವ ಹೊನ್ನಪ್ಪ (ಶಿವಕುಮಾರಸ್ವಾಮೀಜಿ ಅವರ ಪೂರ್ವಾಶ್ರಮದ ತಂದೆ) ಅವರ ಮನೆ

‘ಒಂದು ಮನೆಯ ಉದ್ಧಾರಕ್ಕಿಂತ ಲಕ್ಷೋಪಲಕ್ಷ ಮನೆಗಳ ಉದ್ಧಾರ ಮಾಡಬಲ್ಲವರನ್ನಾಗಿ ಇವರ ಮಗನನ್ನು ಸ್ವೀಕರಿಸುವುದರಲ್ಲಿ ತಪ್ಪೇನೂ ಇಲ್ಲ’ ಎಂಬ ನಿರ್ಧಾರಕ್ಕೆ ಶಿವಯೋಗಿಗಳು ಬಂದರು. ಮಠಕ್ಕೆ ಮರಳಿದರು. ‘ಶಿವಯೋಗಿಗಳು ನಡೆದುಕೊಂಡು ಮನೆಗೆ ಬಂದಾಗ ನಮ್ಮ ತಂದೆ ಉದಾಸೀನವಾಗಿ ನಡೆದುಕೊಳ್ಳಬಾರದಿತ್ತು’ ಎನಿಸಿತು ಶಿವಣ್ಣ ಅವರಿಗೆ. ಇದು ಬೇಸರಕ್ಕೂ ಕಾರಣವಾಯಿತು. ಮಠದ ಅಧಿಕಾರ ವಹಿಸಿಕೊಂಡ ಮೇಲೂ ವೀರಾಪುರಕ್ಕೆ ಹೋಗಲೇ ಇಲ್ಲ.

ತಂದೆ ಹೊನ್ನಪ್ಪ ಮತ್ತು ತಾಯಿ ಗಂಗಮ್ಮ ಅವರ ಸಮಾಧಿ.
ತಂದೆ ಹೊನ್ನಪ್ಪ ಮತ್ತು ತಾಯಿ ಗಂಗಮ್ಮ ಅವರ ಸಮಾಧಿ.

ಗ್ರಾಮದ ಜನರು ‘ನಮ್ಮ ಊರಿಗೆ ಬನ್ನಿ’ ಎಂದು 1930ರಿಂದ 1955ರ ಮನವಿ ಮಾಡಿದರೂ ಹೋಗಲೇ ಇಲ್ಲ. ಅವರು ಗ್ರಾಮಕ್ಕೆ ತೆರಳಲು ಮನಸ್ಸು ಮಾಡಿದ ಪ್ರಸಂಗ ಸ್ವಾರಸ್ಯವಾಗಿದೆ. ಶ್ರೀಗಳ ಪೂರ್ವಾಶ್ರಮದ ಅಣ್ಣನ ಮಗನ ಗೃಹಪ್ರವೇಶ ಇತ್ತು. ಆಮಂತ್ರಣ ಪತ್ರಿಕೆ ಹಿಡಿದು ಬಂದವರಿಗೆ ‘ನಾವು ನಿಮ್ಮೂರಿಗೆ ಬರುವುದಿಲ್ಲ. ಶಿವಯೋಗಿಗಳ ಕೃಪೆಯಿಂದ ದೂರವಾದ ಆ ಮನೆಗೆ ಭಕ್ತನಾದ ನಾನು ಪ್ರವೇಶ ಮಾಡುವುದು ಹೇಗೆ’ ಎಂದು ಖಡಾಖಂಡಿತವಾಗಿ ಹೇಳಿದರು.

‘ಸಿದ್ದಲಿಂಗನ ಪ್ರತಿನಿಧಿಗಳೇ ಆದ ತಮ್ಮನಿಂದ ಈ ಗೃಹಪ್ರವೇಶ ಮಾಡಿಸಬೇಕು ಎನ್ನುವ ಸಂಕಲ್ಪ ಇದೆ. ಆ ಮನೆ ಹಾಳು ಬಿದ್ದರೂ ಚಿಂತೆ ಇಲ್ಲ. ತಾವು ಬಂದು ಗೃಹ ಪ್ರವೇಶ ನಡೆಸಿಕೊಟ್ಟರೆ ಆಯಿತು. ಇಲ್ಲದಿದ್ದರೆ ತಮ್ಮ ಇಚ್ಛೆ ಇದ್ದಂತೆ ಆಗಲಿ’ ಎಂದು ಬಂದವರು ಹೊರಟು ಹೋದರು. ‘ಭಕ್ತನ ಭಕ್ತಿ ದೊಡ್ಡದು, ಅದಕ್ಕೂ ಶಕ್ತಿ ಇದೆ’ ಎಂಬುದನ್ನು ಅರಿತಿದ್ದ ಶಿವಕುಮಾರ ಶ್ರೀ, ಗೃಹಪ್ರವೇಶಕ್ಕೆ ಬರುವುದಾಗಿ ಅಭಯವಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT