ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಬಸ್‌ಗಳಿಲ್ಲದೆ ಜನರ ಪರದಾಟ

ಬೆಂಗಳೂರಿಗೆ ಹೊರಟ 330 ಬಸ್‌, ನಗರದಲ್ಲಿ ಬಸ್‌ಗಳ ಸಂಖ್ಯೆ ವಿರಳ
Published 25 ಫೆಬ್ರುವರಿ 2024, 13:18 IST
Last Updated 25 ಫೆಬ್ರುವರಿ 2024, 13:18 IST
ಅಕ್ಷರ ಗಾತ್ರ

ತುಮಕೂರು: ನಗರ ಒಳಗೊಂಡಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾನುವಾರ ಕೆಎಸ್‌ಆರ್‌ಟಿಸಿ ಬಸ್‌ಗಳು ಸಿಗದೆ ಸಾರ್ವಜನಿಕರು ಪರದಾಡಿದರು. ನಗರದಲ್ಲಿ ಸಂಚರಿಸುವ ಬಸ್‌ಗಳು ಸಹ ವಿರಳವಾಗಿದ್ದವು.

ಬೆಂಗಳೂರಿನಲ್ಲಿ ನಡೆದ ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶಕ್ಕೆ ಜನರನ್ನು ಕರೆತರಲು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಪಡೆದುಕೊಳ್ಳಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಬಸ್‌ಗಳ ಕೊರತೆ ಎದುರಾಯಿತು. ಗ್ರಾಮೀಣ ಭಾಗದ ಬಸ್‌ ಸಂಚಾರದಲ್ಲೂ ವ್ಯತ್ಯಯ ಉಂಟಾಗಿತ್ತು. ಸೂಕ್ತ ಸಮಯಕ್ಕೆ ಬಸ್‌ಗಳು ಸಿಗದೆ ಪ್ರಯಾಣಿಕರು ಬಸ್‌ ನಿಲ್ದಾಣದಲ್ಲಿಯೇ ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಜಿಲ್ಲೆಯ ಪ್ರತಿ ಪಂಚಾಯಿತಿಗೆ ಒಂದು ಕೆಎಸ್‌ಆರ್‌ಟಿಸಿ ಬಸ್‌ ಬಿಡಲಾಗಿದೆ. ಜಿಲ್ಲೆಯಿಂದ 230 ಬಸ್‌ ಮತ್ತು ಹೊರ ಜಿಲ್ಲೆಗಳಿಂದ 100 ಬಸ್‌ ಪಡೆದುಕೊಂಡು ಒಟ್ಟು 330 ಬಸ್‌ಗಳಲ್ಲಿ ಜನರನ್ನು ಕಾರ್ಯಕ್ರಮಕ್ಕೆ ಕಳುಹಿಸಿಕೊಡಲಾಗಿದೆ. ಜಿಲ್ಲೆಯ 650 ಬಸ್‌ಗಳಲ್ಲಿ 230 ಬಸ್‌ಗಳನ್ನು ಬಳಸಿಕೊಳ್ಳಲಾಗಿದೆ. ಇದರಿಂದ ಗ್ರಾಮಾಂತರ ಪ್ರದೇಶದಲ್ಲಿ ಬಸ್‌ಗಳ ಓಡಾಟ ತೀರಾ ಕಡಿಮೆಯಾಗಿತ್ತು.

ತಾಲ್ಲೂಕಿನ ಸೀಬಿ ಗ್ರಾಮದಲ್ಲಿ ಭಾನುವಾರ ನಡೆದ ಸೀಬಿ ನರಸಿಂಹ ಸ್ವಾಮಿ ರಥೋತ್ಸವಕ್ಕೆ ಹೋಗಲು ಬಸ್‌ಗಳು ಇಲ್ಲದೆ ಜನರು ಸಂಕಷ್ಟ ಅನುಭವಿಸಿದರು. ತುಮಕೂರು ನಗರ ಸೇರಿದಂತೆ ವಿವಿಧ ಕಡೆಗಳಿಂದ ಜಾತ್ರೆಗೆ ಹೋಗಲು ಬಂದವರು ಬೆಳಗ್ಗೆಯಿಂದಲೇ ಬಸ್‌ಗಾಗಿ ಕಾಯುತ್ತಾ ಕುಳಿತಿದ್ದ ದೃಶ್ಯಗಳು ಕಂಡು ಬಂದವು.

ಕಳೆದ ಜ.29ರಂದು ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಗ ಕೂಡ ಕಾರ್ಯಕ್ರಮಕ್ಕೆ ಜನರನ್ನು ಕರೆ ತರುವ ಉದ್ದೇಶದಿಂದ 650 ಸರ್ಕಾರಿ ಹಾಗೂ ಖಾಸಗಿ ಬಸ್‌ಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು. ಬಸ್‌ಗಳ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು.

‘ಯಾವುದೇ ಕಾರ್ಯಕ್ರಮ ನಡೆದಾಗ ಸರ್ಕಾರಿ ಬಸ್‌ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯುತ್ತಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಯಾಣಿಕರನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ಸಾರಿಗೆ ಅಧಿಕಾರಿಗಳು ಗ್ರಾಮೀಣ ಭಾಗಕ್ಕೆ ಬಂದು ನೋಡಿದರೆ ಅಲ್ಲಿನ ಜನರ ಕಷ್ಟ ಅವರಿಗೆ ತಿಳಿಯುತ್ತದೆ. ಕಚೇರಿಯಲ್ಲಿ ಕುಳಿತುಕೊಂಡು ಬಸ್‌ಗಳ ‘ಕೊರತೆ’ ಇಲ್ಲ ಎಂದರೆ ಹೇಗೆ?’ ಎಂದು ಮಾಯಸಂದ್ರದ ನಿವಾಸಿ ಮಂಜುನಾಥ್‌ ಅಸಮಾಧಾನ ವ್ಯಕ್ತಪಡಿಸಿದರು.

ತುಮಕೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತಲು ಜನರ ಪರದಾಟ
ತುಮಕೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತಲು ಜನರ ಪರದಾಟ
ಜಿಲ್ಲೆಯಿಂದ 230 ಬಸ್‌ಗಳನ್ನು ಮಾತ್ರ ಕಳುಹಿಸಿಕೊಡಲಾಗಿದೆ. ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅವಶ್ಯಕತೆ ಇರುವ ಕಡೆಗೆ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಚಂದ್ರಶೇಖರ್‌ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ
ಪರ್ಯಾಯ ವ್ಯವಸ್ಥೆ ಮಾಡಿಲ್ಲ ಎಲ್ಲ ಬಸ್‌ಗಳನ್ನು ಸಮಾವೇಶಕ್ಕೆ ಕಳುಹಿಸಿದ್ದಾರೆ. ಜನರಿಗೆ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ತಾಲ್ಲೂಕಿನ ಸೀಬಿ ಗ್ರಾಮಕ್ಕೆ ಹೋಗಲು ಬಸ್‌ ಇಲ್ಲ ಎಂದರೆ ಗಡಿಭಾಗಗಳ ಪರಿಸ್ಥಿತಿ ಹೇಗಾಗಿರಬೇಡ. ವಾರಾಂತ್ಯದಲ್ಲಿ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಿರುತ್ತದೆ. ಅಧಿಕಾರಿಗಳು ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು. ಲೋಕೇಶ್‌ ತುಮಕೂರು ಶಿರಾಗೆ ಹೋಗಲೂ ಬಸ್ ಇಲ್ಲ ತುಮಕೂರಿನಿಂದ ಶಿರಾಗೆ ಹೋಗಲು ಬಸ್‌ಗಳಿಲ್ಲ. ಅಧಿಕಾರಿಗಳನ್ನು ಕೇಳಿದರು ಸ್ವಲ್ಪ ಹೊತ್ತು ಕಾಯಿರಿ ಬಸ್‌ ಬರುತ್ತದೆ ಎಂದು ಹೇಳುತ್ತಾರೆ. ಬೆಳಗ್ಗೆಯಿಂದ ಕಾಯುತ್ತಿದ್ದೇವೆ ಒಂದೇ ಒಂದೂ ಬಸ್‌ ಬಂದಿಲ್ಲ.
ರಾಮಾಂಜಿನಿ ಶಿರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT