ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು | ಬಾರದ ಮಳೆ: ಬಯಲುಸೀಮೆಯಲ್ಲಿ ‘ಬರ’ದ ಆತಂಕ

ಬಿತ್ತನೆ ಸಮಯದಲ್ಲೇ ಕೈಕೊಟ್ಟ ಮಳೆ*ಕೃಷಿ ಚಟುವಟಿಕೆಗೆ ಹಿನ್ನಡೆ
Published : 30 ಜುಲೈ 2023, 16:02 IST
Last Updated : 30 ಜುಲೈ 2023, 16:02 IST
ಫಾಲೋ ಮಾಡಿ
Comments

ತುಮಕೂರು: ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಪ್ರಮುಖವಾಗಿ ಶೇಂಗಾ ಸೇರಿದಂತೆ ಎಣ್ಣೆ ಕಾಳುಗಳು, ದ್ವಿದಳ ಧಾನ್ಯ ಹಾಗೂ ರಾಗಿ ಬಿತ್ತನೆ ಮೇಲೆ ತೀವ್ರ ಪರಿಣಾಮ ಬೀರಿದ್ದು, ಆಹಾರ ಉತ್ಪಾದನೆ ಗಣನೀಯವಾಗಿ ಕುಸಿತ ಕಾಣಲಿದೆ.

ಮುಂಗಾರು ಮಳೆ ಕೈಕೊಟ್ಟಿದ್ದು, ಶೇಂಗಾ ಬಿತ್ತನೆ ಸಾಧ್ಯವಾಗಿಲ್ಲ. 70,250 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ ಹೊಂದಿದ್ದು ಈವರೆಗೂ ಅರ್ಧದಷ್ಟು ಪ್ರದೇಶದಲ್ಲಷ್ಟೇ ಬಿತ್ತನೆ ಮಾಡಲಾಗಿದೆ. ಕಳೆದ ಒಂದೆರಡು ದಿನಗಳಿಂದ ಸೋನೆ ಮಳೆಯಾಗುತ್ತಿದ್ದು, ಅಲ್ಲಲ್ಲಿ ಬಿತ್ತನೆ ಮುಂದುವರಿದಿದೆ.

ಹೆಸರು ಕಾಳು 10,780 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಬೇಕಿದ್ದು, ಸುಮಾರು 7 ಸಾವಿರ ಹೆಕ್ಟೇರ್‌ನಲ್ಲಷ್ಟೇ ಬಿತ್ತನೆಯಾಗಿತ್ತು. ಅದು ಮಳೆ ಕೊರತೆಯಿಂದ ಬಾಡಿ ಹೋಗಿದ್ದು, ಸರಿಯಾಗಿ ಕಾಳು ಕಟ್ಟಿಲ್ಲ. ತೊಗರಿ (16,044 ಹೆಕ್ಟೇರ್ ಗುರಿ), ಜೋಳ (3,500 ಹೆಕ್ಟೇರ್), ಮುಸುಕಿನ ಜೋಳ (30,577 ಹೆಕ್ಟೇರ್), ಅವರೆ (3,524 ಹೆಕ್ಟೇರ್), ಅಲಸಂದೆ (3,621 ಹೆಕ್ಟೇರ್), ಸಿರಿ ಧಾನ್ಯ (4,396 ಹೆಕ್ಟೇರ್) ಬಿತ್ತನೆಯಾಗಿಲ್ಲ. ಒಟ್ಟಾರೆಯಾಗಿ ಶೇಂಗಾ, ಹೆಸರು ಕಾಳು ಬಿಟ್ಟರೆ ಇತರೆ ಯಾವುದೇ ಬಿತ್ತನೆಯಾಗಿಲ್ಲ.

ರಾಗಿ 1.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಜುಲೈ 15ರ ವರೆಗೂ ಬಿತ್ತನೆ ಆಗಿರಲಿಲ್ಲ. ಕಳೆದ ಕೆಲ ದಿನಗಳಿಂದ ಸೋನೆ ಮಳೆ ಆಗುತ್ತಿದ್ದು, ಈಗಷ್ಟೇ ಬಿತ್ತನೆ ಕೆಲಸ ಆರಂಭವಾಗಿದೆ. ಮಳೆ ಇಲ್ಲದೆ ಸಾಕಷ್ಟು ಕಡೆಗಳಲ್ಲಿ ಭೂಮಿಯನ್ನು ಉಳುಮೆ ಮಾಡದೆ ಇರುವುದರಿಂದ ಬಿತ್ತನೆ ಪ್ರಮಾಣ ಕಡಿಮೆಯಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಬಿತ್ತನೆ ಸಮಯದಲ್ಲೇ ಕೈಕೊಟ್ಟ ಮಳೆ

ಕೋಲಾರ ಜಿಲ್ಲೆಯಲ್ಲಿ ಬಿತ್ತನೆ ಅವಧಿಯಲ್ಲೇ ಮಳೆ ಕೈಕೊಟ್ಟಿದ್ದು, ಕೃಷಿ ಚಟುವಟಿಕೆ ಕುಂಠಿತಗೊಂಡಿದೆ. ಆರು ತಾಲ್ಲೂಕುಗಳಿಂದ ಸೇರಿ ಈ ವರ್ಷ 1,02,590 ಹೆಕ್ಟೇರ್‌ ಕೃಷಿ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಈವರೆಗೆ ಕೇವಲ 4,269 ಹೆಕ್ಟೇರ್‌ ಬಿತ್ತನೆ ಆಗಿದೆ. ಬಿತ್ತನೆಯಾಗಿರುವ ಒಟ್ಟು ಪ್ರಮಾಣ ಶೇ 4 ಅಷ್ಟೆ.

ಮುಂಗಾರು ಹಂಗಾಮು ಚುರುಕು ಪಡೆಯಬೇಕಿದ್ದ ಸಮಯದಲ್ಲಿ ಮಳೆ ಕಣ್ಣಾಮುಚ್ಚಾಲೆ ಆಟದಲ್ಲಿ ತೊಡಗಿದೆ. ಜುಲೈ 1ರಿಂದ 25ರವರೆಗೆ ಶೇ 31ರಷ್ಟು ಮಳೆ ಕೊರತೆ ಉಂಟಾಗಿದೆ. ಈ ತಿಂಗಳಲ್ಲಿ 6.1 ಸೆ.ಮೀ. (61 ಮಿ.ಮೀ) ವಾಡಿಕೆ ಮಳೆ ಆಗಬೇಕಿತ್ತು. ಆದರೆ, 4.2 ಸೆ.ಮೀ (42 ಮಿ.ಮೀ) ಮಳೆಯಾಗಿದೆ.

10,980 ಹೆಕ್ಟೇರ್‌ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆ ಗುರಿಯಿದ್ದು, ಈವರೆಗೆ ಕೇವಲ 2,708 ಹೆಕ್ಟೇರ್‌ ಬಿತ್ತನೆಯಾಗಿದೆ. ಹಾಗೆಯೇ, 4,620 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಇದ್ದು, ಕೇವಲ 628 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ. ಬಿತ್ತನೆ ಕಾಲಾವಧಿಯೂ ಬಹುತೇಕ ಮುಗಿದು ಹೋಗಿದೆ. ಹೀಗಾಗಿ, ಕೃಷಿ ಇಲಾಖೆ ದಾಸ್ತಾನು ಇಟ್ಟಿದ್ದ ಬೀಜ ಬಳಕೆ ಆಗಿಲ್ಲ.

‘ತಡವಾಗಿ ಆರಂಭವಾದ ಮುಂಗಾರು ಮಳೆ ಬಿತ್ತನೆ ಸಮಯದಲ್ಲಿ ಕಡಿಮೆಯಾಗಿದೆ. ರಾಗಿ, ತೊಗರಿ, ಅಲಸಂದೆ, ನೆಲಗಡಲೆ ಮುಂತಾದ ಬಿತ್ತನೆ ಬೀಜಗಳ ಶೇಖರಣೆ ಮಾಡಿಡಲಾಗಿದೆ. ಆದರೆ, ಮಳೆ ಕೊರತೆ ಕಾರಣ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ. ರಾಗಿ ಬಿತ್ತನೆಗೆ ಇನ್ನೂ ಬಹಳಷ್ಟು ಕಾಲಾವಕಾಶ ಇದೆ. ಮಳೆ ಬರುವ ನಿರೀಕ್ಷೆಯಲ್ಲಿ ಇದ್ದೇವೆ’ ಎಂದು ಕೃಷಿ ಜಂಟಿ ನಿರ್ದೇಶಕಿ ವಿ.ಡಿ.ರೂಪಾದೇವಿ ‘ಪ್ರಜಾವಾಣಿ’ಗೆ ತಿಳಿಸಿದರು. ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆ ಆಗುತ್ತಿದೆ. ಆದರೆ, ಅದು ಬಿತ್ತನೆಗೆ ಸಾಲಾಗಿದೆ. 

ಕೊಳವೆ ಬಾವಿಗಳ ಆಶ್ರಯ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎರಡು ವರ್ಷ ಅಬ್ಬರಿಸಿದ್ದ ಮಳೆ ಪ್ರಸಕ್ತ ವರ್ಷ ತುಂತುರು ರೂಪ ಪಡೆದಿದೆ. ಮಳೆ ಕೊರತೆಯಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಂಗಾ ಮತ್ತು ತೊಗರಿ ಬಿತ್ತನೆಗೆ ಹಿನ್ನಡೆ ಆಗಿದೆ. ಈಗ ಮುಸುಕಿನ ಜೋಳ ಮತ್ತು ರಾಗಿ ಬಿತ್ತನೆಯತ್ತ ರೈತರು ದೃಷ್ಟಿ ಹರಿಸಿದ್ದಾರೆ.

ಜೂನ್‌ನಲ್ಲಿ 64.1 ಮಿ. ಮೀ ವಾಡಿಕೆ ಮಳೆ ಆಗಬೇಕು. ಆದರೆ 53.4 ಮಿ. ಮೀ ಮಾತ್ರ ಮಳೆಯಾಗಿದೆ. ಜುಲೈನಲ್ಲಿ ಈವರೆಗೆ ವಾಡಿಕೆ ಪ್ರಮಾಣದಲ್ಲಿ ಮಳೆಯಾಗದೆ ಶೇ 28ರಷ್ಟು ಕೊರತೆಯಾಗಿದೆ.

ಜಿಲ್ಲೆಯಲ್ಲಿ ತೊಗರಿಯನ್ನು 11,400 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿಯನ್ನು ಕೃಷಿ ಇಲಾಖೆ ಹೊಂದಿತ್ತು. ಆದರೆ 1,359 ಹೆಕ್ಟೇರ್‌ಗಳಷ್ಟು ಮಾತ್ರ ಬಿತ್ತನೆಯಾಗಿದೆ. 27,142 ಹೆಕ್ಟೇರ್‌ನಲ್ಲಿ ಜಿಲ್ಲೆಯಲ್ಲಿ ಶೇಂಗಾ ಬೆಳೆ ಬಿತ್ತನೆಯ ಗುರಿಯನ್ನು ಇಲಾಖೆ ಹೊಂದಿತ್ತು. ಆದರೆ 6,294 ಹೆಕ್ಟೇರ್‌ ಬಿತ್ತನೆ ಆಗಿದೆ.

ಮಳೆಗಾಲದಲ್ಲಿಯೂ ಜಿಲ್ಲೆಯ 15 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದೆ. ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಖಾಸಗಿಯವರಿಂದ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ.

ಮಳೆ ಕೊರತೆ  

ಪ್ರಸಕ್ತ ಸಾಲಿನಲ್ಲಿ ಮುಂಗಾರು ಕೈ ಕೊಟ್ಟಿದ್ದರಿಂದ ರಾಮನಗರ ಜಿಲ್ಲೆ ಬರದ ಹೊಸ್ತಿಲಿಗೆ ಬಂದು ನಿಂತಿದೆ. ಕೃಷಿ ಚಟುವಟಿಕೆಗಳಿಗೂ ಹಿನ್ನಡೆಯಾಗಿದ್ದು, ಬಿತ್ತನೆ ಪ್ರಗತಿ ಪೈಕಿ ಶೇ 25ರಷ್ಟನ್ನು ತಲುಪಿಲ್ಲ.

ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳ ವಾಡಿಕೆ 569 ಮಿ.ಮೀ. ಮಳೆ ಪೈಕಿ, ಸದ್ಯ (ಜುಲೈ 25ರವರೆರೆಗೆ) 371 ಮಿ.ಮೀ. ಮಾತ್ರ ಸುರಿದಿದೆ. ನಾಲ್ಕು ತಾಲ್ಲೂಕು ಪೈಕಿ ಮಾಗಡಿಯಲ್ಲಿ ವಾಡಿಕೆ 166 ಮಿ.ಮೀ. ಮಳೆ ಪೈಕಿ 144 ಮಿ.ಮೀ. ಸುರಿದಿದೆ. ಉಳಿದೆಡೆ ಶೇ 60ರಷ್ಟು ಸಹ ಸುರಿದಿಲ್ಲ.

‘ಜಿಲ್ಲೆಯ 92,655 ಹೆಕ್ಟೇರ್ ಬಿತ್ತನೆ ಪ್ರದೇಶದ ಪೈಕಿ, ಕೇವಲ 12,167 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ. ಪ್ರತಿ ವರ್ಷ ಇಷ್ಟೊತ್ತಿಗಾಗಲೇ 20 ಸಾವಿರ ಹೆಕ್ಟೇರ್ ಬಿತ್ತನೆಯಾಗಿರುತ್ತಿತ್ತು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಮಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋಲಾರದಲ್ಲಿ ಮಳೆಗಾಗಿ ಮುಗಿಲಿನತ್ತ ರೈತನ ನೋಟ
ಕೋಲಾರದಲ್ಲಿ ಮಳೆಗಾಗಿ ಮುಗಿಲಿನತ್ತ ರೈತನ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT