ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿಗೆ ಜಾಗವಿಲ್ಲ; ಹೋಗಲು ಶೌಚಾಲಯವಿಲ್ಲ

ತುಮಕೂರು ನಗರ ಕೇಂದ್ರ ಗ್ರಂಥಾಲಯದಲ್ಲಿ ಹತ್ತಾರು ಸಮಸ್ಯೆ; ಪರಿಹರಿಸಲು ಓದುಗರ ಒತ್ತಾಯ
Last Updated 4 ಮಾರ್ಚ್ 2020, 9:37 IST
ಅಕ್ಷರ ಗಾತ್ರ

ತುಮಕೂರು: ಕುಳಿತು ಓದಲು ಸ್ಥಳಾವಕಾಶದ ಕೊರತೆ, ಬೆಳಕಿನ ವ್ಯವಸ್ಥೆಯೂ ಸರಿಯಾಗಿಲ್ಲ, ದುರ್ವಾಸನೆ ಬೀರುವ ಶೌಚಾಲಯ, ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಅಗತ್ಯ ಪುಸ್ತಕಗಳ ಕೊರತೆ...

ಟೌನ್‌ಹಾಲ್ ಸಮೀಪದ ನಗರ ಕೇಂದ್ರ ಗ್ರಂಥಾಲಯಕ್ಕೆ ಓದಲು ನಿತ್ಯ ಬರುವವರಿಗೆ ಕಾಡುತ್ತಿರುವ ಸಮಸ್ಯೆಗಳಿವು.

ಇವುಗಳನ್ನು ಆದಷ್ಟು ಬೇಗ ಪರಿಹರಿಸಿ ‘ಓದುವ ವಾತಾವರಣ ನಿರ್ಮಿಸಿ ಕೊಡಿ’ ಎಂದು ಸಾರ್ವಜನಿಕರು ಬಹಳ ದಿನಗಳಿಂದ ಒತ್ತಾಯಿಸುತ್ತಲೇ ಇದ್ದಾರೆ. ಆದರೂ ಜನಪ್ರತಿನಿಧಿಗಳುಹಾಗೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬುದು ಓದುಗರ ದೂರು.

ಕರ್ನಾಟಕ ಲೋಕಸೇವಾ ಆಯೋಗದಿಂದ ಈಗಾಗಲೇ ಗೆಜೆಟೆಡ್‌ ಪ್ರೊಬೇಷನರಿ, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕೆ–ಸೆಟ್‌ ಪರೀಕ್ಷೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದಾಗಿ ಸರ್ಕಾರಿ ನೌಕರಿಯ ಕನಸು ಹೊತ್ತ ನೂರಾರು ಆಕಾಂಕ್ಷಿಗಳು ನಗರ ಕೇಂದ್ರ ಗ್ರಂಥಾಲಯಕ್ಕೆ ನಿತ್ಯ ಬಂದು ಅಧ್ಯಯನ ಮಾಡುತ್ತಾರೆ.

ನೆಲದ ಮೇಲೆ ಕುಳಿತು ಅಧ್ಯಯನ: ಗ್ರಂಥಾಲಯದಲ್ಲಿ ಇರುವ ಕುರ್ಚಿಗಳ ಸಾಮರ್ಥ್ಯಕ್ಕಿಂತ ಹೆಚ್ಚು ಮಂದಿ ಓದಲು ಬರುತ್ತಿದ್ದಾರೆ. ಜಾಗ ಸಾಲದೆ, ಪುಸ್ತಕಗಳ ಕಪಾಟುಗಳ ನಡುವಿನ ಸಂದಿಯಂತಹ ಜಾಗದಲ್ಲೇ ಕುಳಿತು ಪರೀಕ್ಷಾ ತಯಾರಿ ನಡೆಸುತ್ತಿದ್ದಾರೆ. ಇಂತಹ ಜಾಗದಲ್ಲಿ ಸಮರ್ಪಕವಾದ ಬೆಳಕಿನ ವ್ಯವಸ್ಥೆಯೂ ಇಲ್ಲದೆ, ಓದುಗರಿಗೆ ತೊಂದರೆಯಾಗಿದೆ.

ಬಯಲು ಶೌಚಾಲಯ: ಗ್ರಂಥಾಲಯ ಶೌಚಾಲಯಕ್ಕೆ ನೀರಿನ ಸಂಪರ್ಕ ಇಲ್ಲ. ಗಬ್ಬು ನಾರುತ್ತಿದೆ. ಒಳಚರಂಡಿ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಇದರಿಂದಾಗಿ ಗಲೀಜು ನೀರು ಸರಾಗವಾಗಿ ಹರಿಯುತ್ತಿಲ್ಲ. ಹಾಗಾಗಿ ‘ಪತ್ರಿಕೆಗಳ ಓದುವ ವಿಭಾಗ’ದಲ್ಲಿನ ಶೌಚಾಲಯಕ್ಕೆ ಬೀಗ ಹಾಕಲಾಗಿದೆ.

ಗ್ರಂಥಾಲಯ ಪ್ರವೇಶ ದ್ವಾರದ ಬಲಭಾಗದಲ್ಲಿ ತಡಗಿನ ಶೀಟುಗಳನ್ನು ಜೋಡಿಸಿ, ತಾತ್ಕಾಲಿಕವಾಗಿ ಮೂತ್ರಾಲಯದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಯೂ ನೀರಿನ ವ್ಯವಸ್ಥೆ ಇಲ್ಲ. ಗ್ರಂಥಾಲಯಕ್ಕೆ ಬಂದವರು, ಆವರಣದ ಮೂಲೆಗಳಿಗೆ ಹೋಗಿ ನಿತ್ಯಕ್ರಿಯೆ ಮುಗಿಸುತ್ತಿದ್ದಾರೆ. ಇದರಿಂದ ಸ್ವಚ್ಛತೆ ಮಾಯವಾಗಿದೆ.

ವಾರದ ಏಳೂ ದಿನ ಬಾಗಿಲು ತೆರೆಯಿರಿ: ಸರ್ಕಾರಿ ರಜಾ ದಿನಗಳು, ಪ್ರತಿ ಸೋಮವಾರ, ಎರಡನೇ ಶನಿವಾರ, ಎರಡನೇ ಮಂಗಳವಾರ, ನಾಲ್ಕನೇ ಮಂಗಳವಾರದಂದು ಗ್ರಂಥಾಲಯದ ಬಾಗಿಲು ತೆರೆಯುವುದಿಲ್ಲ. ಇದರಿಂದ ತೊಂದರೆ ಆಗುತ್ತಿದೆ. ವಾರದ ಏಳೂ ದಿನವೂ ಗ್ರಂಥಾಲಯದ ಬಾಗಿಲು ತೆರೆದರೆ ಅನುಕೂಲ ಆಗುತ್ತದೆ ಎಂದು ಸ್ಪರ್ಧಾರ್ಥಿಗಳು ಹೇಳಿದರು.

ಸದ್ಯ ನಿತ್ಯ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಗ್ರಂಥಾಲಯ ತೆರೆದಿರುತ್ತದೆ. ಸಂಜೆ 7.30ರ ಹೊತ್ತಿಗೆಗಾಗಲೇ ಹೊರನಡೆಯಿರಿ ಎಂದು ಸಿಬ್ಬಂದಿ ದಬಾಯಿಸುತ್ತಾರೆ. ರಾತ್ರಿ 9 ಗಂಟೆಯ ವರೆಗೆ ಗ್ರಂಥಾಲಯ ತೆರೆದರೆ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರುವವರಿಗೆ ಅನುಕೂಲ ಆಗುತ್ತದೆ ಎಂದು ಸ್ಪರ್ಧಾರ್ಥಿ ಮಾರೇಗೌಡ ತಿಳಿಸಿದರು.

ಮೊಬೈಲ್‌ ಶೌಚಾಲಯ ವ್ಯವಸ್ಥೆ

ಗ್ರಂಥಾಲಯದಲ್ಲಿ ಮೂಲಸೌಕರ್ಯಗಳನ್ನು ಒದಗಿಸುವಂತೆ ಸ್ಪರ್ಧಾರ್ಥಿಗಳು ಪಾಲಿಕೆಯ ಕಚೇರಿಗೆ ತೆರೆಳಿ ಮೇಯರ್ ಫರಿದಾ ಬೇಗಂ ಗಮನ ಸೆಳೆದರು.

ಮೇಯರ್‌ ಗ್ರಂಥಾಲಯಕ್ಕೆ ಬಂದು ಓದುಗರ ಅಹವಾಲು ಆಲಿಸಿದರು. ಪಾಲಿಕೆಯಿಂದ ಸಂಚಾರಿ ಶೌಚಾಲಯ ವ್ಯವಸ್ಥೆ ಮಾಡಲಾಗುವುದು. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುವುದು ಎಂದು ಭರವಸೆ ನೀಡಿದರು.

‘ಓದುಗ ಸಮುದಾಯದ ನಾಲ್ವರು ಪ್ರತಿನಿಧಿಗಳು (ಇಬ್ಬರು ಯುವತಿಯರು ಸೇರಿ), ಗ್ರಂಥಾಲಯ ಇಲಾಖೆ ಮತ್ತು ಪಾಲಿಕೆ ಅಧಿಕಾರಿಗಳನ್ನು ಸೇರಿಸಿ, ಕೆಲವೇ ದಿನಗಳಲ್ಲಿ ಸಭೆ ಕರೆಯುತ್ತೇನೆ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಹೊಸ ಗ್ರಂಥಾಲಯದ ಕಟ್ಟಡ ಉದ್ಘಾಟನೆಯಾಗುವವರೆಗೆ ಬೇಕಾಗಿರುವ ಮೂಲಸೌಕರ್ಯಗಳನ್ನು ಕಲ್ಪಿಸುತ್ತೇನೆ’ ಎಂದು ಮೇಯರ್ ಭರವಸೆ ನೀಡಿದರು.

ಓದುಗರ ಒತ್ತಾಯಗಳು

* ಸ್ಪರ್ಧಾತ್ಮಕ ಪರೀಕ್ಷಾ ತಯಾರಿಗೆ ಉತ್ತಮ ಪುಸಕ್ತಗಳು ಬೇಕು

* ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಬೇಕು

* ವಾರದ ಏಳೂ ದಿನವೂ ಗ್ರಂಥಾಲಯ ತೆರೆಯಬೇಕು

* ಓದುಗರೆಲ್ಲರಿಗೂ ಆಸನ ವ್ಯವಸ್ಥೆ ಮಾಡಬೇಕು.

*

ಹಳೆಯ ಪುಸ್ತಕಗಳ ಕಪಾಟುಗಳನ್ನು ಸ್ಥಳಾಂತರಿಸಿ ನಾವು ಆರಾಮಾಗಿ ಕುಳಿತು ಓದಲು ವ್ಯವಸ್ಥೆ ಮಾಡಿಸಿ. ಯುಪಿಎಸ್‌ ಮತ್ತು ಸೌರಶಕ್ತಿಯಿಂದ ಅಗತ್ಯ ಬೆಳಕಿನ ವ್ಯವಸ್ಥೆ ಮಾಡಿಸಿ.

- ಮಹಮ್ಮದ್‌ ಇಬ್ರಾಹಿಂ, ಉಪ್ಪಾರಹಳ್ಳಿ

*

ಶೌಚಕಾರ್ಯಕ್ಕಾಗಿ ಪಾಲಿಕೆ ಸಮೀಪದಲ್ಲಿ ಇರುವ ಪೇ ಆ್ಯಂಡ್‌ ಯೂಜ್‌ ಶೌಚಾಲಯಕ್ಕೆ ಹೋಗಬೇಕಿದೆ. ಅಷ್ಟು ದೂರ ಹೋಗಿ ಬರಲು ನಮ್ಮ ಓದುವ ಸಮಯ ವ್ಯರ್ಥವಾಗುತ್ತಿದೆ.

- ಕೆ.ಎನ್‌.ಜ್ಯೋತಿ, ಬೆಳ್ಳಾವೆ

*

ಪುಸ್ತಕ ಖರೀದಿಗಾಗಿ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ₹2 ಲಕ್ಷ ಮೀಸಲಿಟ್ಟಿದ್ದೇನೆ. ಪುಸ್ತಕಗಳ ಪಟ್ಟಿಯನ್ನು ಓದುಗರಿಂದಲೇ ತಯಾರಿಸಿ, ತರಿಸುತ್ತೇನೆ.

- ಜಿ.ಬಿ.ಜ್ಯೋತಿ ಗಣೇಶ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT