ಕುಂದಾಪುರ: ‘ಸಂಸ್ಥೆಗಳನ್ನು ಕಟ್ಟುವುದು ಸುಲಭ. ಆದರೆ, ಅದನ್ನು ಸದೃಢವಾಗಿ ಬೆಳೆಸುವುದು ಕಷ್ಟ. 32 ವರ್ಷಗಳ ಕಾಲ ಯಾವುದೇ ಕಪ್ಪುಚುಕ್ಕಿ ಬಾರದಂತೆ ರೋಜರಿ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿ ಬೆಳೆಸುವಲ್ಲಿ ಆಡಳಿತ ಮಂಡಳಿ, ಸಿಬ್ಬಂದಿಗಳ ಪ್ರಾತ್ರ ಶ್ಲಾಘನೀಯ’ ಎಂದು ದಕ್ಷಿಣ ಕನ್ನಡ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ ಹೇಳಿದರು.
ಕೋಟೇಶ್ವರದ ಸಹನಾ ಕನ್ವೆನ್ಷನ್ ಸೆಂಟರ್‌ನಲ್ಲಿ ಭಾನುವಾರ ನಡೆದ ಕುಂದಾಪುರದ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ₹1 ಸಾವಿರ ಕೋಟಿ ವ್ಯವಹಾರದ ಸಂಭ್ರಮದಲ್ಲಿ ಸಂಸ್ಥೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರೋಜರಿ ಬ್ಯಾಂಕಿಗೆ 50 ವರ್ಷ ತುಂಬುವಾಗ ₹1ಸಾವಿರ ಕೋಟಿ ಠೇವಣಿ ಹಾಗೂ ಸಾಕಷ್ಟು ಶಾಖೆಗಳ ಗುರಿ ಇರಿಸಿಕೊಳ್ಳಬೇಕು. ಸೇವಾಪರರಾದ ಹಾಗೂ ಶಾಂತಿ ಪ್ರಿಯರಾದ ಕ್ರೈಸ್ತ ಬಂಧುಗಳು, ತಮ್ಮ ದುಡಿಮೆಯ ಉಳಿತಾಯವನ್ನು ಈ ಸಂಸ್ಥೆಯಲ್ಲಿ ಇಡುವ ಮೂಲಕ ಸಂಸ್ಥೆಯ ಧ್ಯೇಯೋದ್ದೇಶ ಈಡೇರಿಸಲು ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಧರ್ಮ ಪ್ರಾಂತ್ಯದ ಧರ್ಮಗುರು ಫರ್ಡಿನಾಂಡ್ ಗೊನ್ಸಾಲ್ವಿಸ್, ‘₹1 ಸಾವಿರ ಕೋಟಿ ವ್ಯವಹಾರ ನಡೆಸುವುದು ಸಂಸ್ಥೆಯ ಸಾಧನೆಯ ಮೈಲುಗಲ್ಲಿನ ಪ್ರಮುಖ ಭಾಗವಾಗಿದೆ. ಸಹಕಾರಿ ಸಂಸ್ಥೆಗಳು ಪ್ರಗತಿ ಹೊಂದಿದಾಗ ಸಾಮಾನ್ಯ ಜನರ ಬದುಕಿನ ಆಶಾಕಿರಣಗಳು ಅದರಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. 10 ವರ್ಷಗಳಿಂದ ಅಧ್ಯಕ್ಷರಾಗಿ ಸಂಸ್ಥೆ ಅಭಿವೃದ್ಧಿಗೆ ದುಡಿಯುತ್ತಿರುವ ಅಧ್ಯಕ್ಷ ಜೋನ್ಸ್‌ನ್ ಡಿ ಆಲ್ಮೇಡಾ ಅವರ ಅಧಿಕಾರಾವಧಿಯನ್ನು ಕ್ರಾಂತಿಯ ಅವಧಿ ಎಂದು ಪರಿಗಣಿಸಬೇಕು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೋನ್ಸ್‌ನ ಡಿ ಆಲ್ಮೇಡಾ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕಿ ಲಾವಣ್ಯ ಕೆ.ಆರ್, ಪತ್ರಕರ್ತ ವಾಲ್ಟರ್ ಡಿಸೋಜ ನಂದಳಿಕೆ ಮಾತನಾಡಿದರು.
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ, ಅನಿವಾಸಿ ಭಾರತೀಯ ಫಿಲಾಥ್ರೋಪಿಸ್ಟ್ ಡಾ.ರೋನಾಲ್ಡ್ ಕುಲಾಸೊ ಅವರ ಸಂದೇಶಗಳನ್ನು ಭಿತ್ತರಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಂಸ್ಥೆಯಿಂದ ಐದು ವಲಯಗಳ ಫಲಾನುಭವಿಗಳಿಗೆ ನೀಡಲಿರುವ ಮನೆಗಳ ಪ್ರತಿಕೃತಿಯ ಅನಾವರಣ ನಡೆಯಿತು.
ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಪಾಧ್ಯಕ್ಷ ಕಿರಣ್ ಮೆಲ್ವಿನ್ ಲೋಬೊ ಸ್ವಾಗತಿಸಿದರು. ನಿರ್ದೇಶಕ ವಿಲ್ಸನ್ ಡಿಸೋಜ ಶಿರ್ವ ವಂದಿಸಿದರು. ಆಲ್ವಿನ್ ದಾಂತಿ ನಿರೂಪಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಾಣಿಜ್ಯ ಬ್ಯಾಂಕ್‌ಗಳ ಜತೆಯಲ್ಲಿ ಪೈಪೋಟಿ ನಡೆಸಿ ಸಂಸ್ಥೆ ಉಳಿಸಿ-ಬೆಳೆಸುವುದು ಅತ್ಯಂತ ಶ್ರಮದಾಯಕ ಕೆಲಸ. ಕೇವಲ ಯಾಂತ್ರಿಕ ಸಂಬಂಧಗಳನ್ನು ಹೊಂದಿರುವ ವಾಣಿಜ್ಯ ಬ್ಯಾಂಕ್‌ಗಳ ಬದಲಿಗೆ ಅಂತಃಕರಣ ಅಕ್ಕರೆ ಹಾಗೂ ಸಾಂತ್ವನ ಇರುವ ಸೇವೆ ಕೇವಲ ಸಹಕಾರಿ ಸಂಸ್ಥೆಗಳಲ್ಲಿ ದೊರಕುತ್ತಿದೆ’ ಎಂದು ಕುಂದಾಪುರ ರೋಮನ್ ಕ್ರೈಸ್ತ್ ವಲಯದ ಧರ್ಮಗುರು ಪಾವ್ಲ್ ರೇಗೊ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.