ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಅರ್ಧದಿನದಲ್ಲೇ ₹ 1.50 ಕೋಟಿ ಮದ್ಯ ಖಾಲಿ

ಇಂದಿನಿಂದ ರಾತ್ರಿ 7ರವರೆಗೆ ಮದ್ಯ ಮಾರಾಟ: ಅಬಕಾರಿ ಉಪ ಆಯುಕ್ತ ನಾಗೇಶ್‌
Last Updated 5 ಮೇ 2020, 2:44 IST
ಅಕ್ಷರ ಗಾತ್ರ

ಉಡುಪಿ: ಲಾಕ್‌ಡೌನ್ ಅವಧಿಯಲ್ಲಿ ಮದ್ಯ ಸಿಗದೆ ಕಂಗೆಟ್ಟಿದ್ದ ಮದ್ಯಪ್ರಿಯರು ಸೋಮವಾರ ಅರ್ಧದಿನದಲ್ಲೇ ಅಂದಾಜು ₹ 1.50 ಕೋಟಿ ಮೌಲ್ಯದ ಮದ್ಯ ಖರೀದಿಸಿದ್ದಾರೆ. ಲಾಕ್‌ಡೌನ್‌ಗೂ ಮುನ್ನ ನಡೆದ ಮಾರಾಟಕ್ಕೆ ಹೋಲಿಸಿದರೆ ಶೇ 20ಕ್ಕಿಂತ ಹೆಚ್ಚು ಮದ್ಯ ಮಾರಾಟವಾಗಿದೆ ಎನ್ನುತ್ತಾರೆ ಅಬಕಾರಿ ಇಲಾಖೆ ಅಧಿಕಾರಿಗಳು.

ಲಿಕ್ಕರ್‌ಗೆ ಚಿಯರ್ಸ್‌

ಅಬಕಾರಿ ಇಲಾಖೆಯ ಪ್ರಕಾರ ಸೋಮವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ವರೆಗೆ ಜಿಲ್ಲೆಯ 89 ವೈನ್‌ಸ್ಟೋರ್ಸ್ ಹಾಗೂ 14 ಎಂಎಸ್‌ಐಎಲ್‌ ಮಳಿಗೆಗಳಲ್ಲಿ ₹ 1.25 ಕೋಟಿ ಮೌಲ್ಯದ 4850 ಬಾಕ್ಸ್‌ ಲಿಕ್ಕರ್ (ಹಾಟ್‌ ಡ್ರಿಂಕ್ಸ್‌) ಹಾಗೂ ₹ 25 ಲಕ್ಷದ 2,035 ಬಾಕ್ಸ್‌ ಬಿಯರ್‌ ಮಾರಾಟವಾಗಿದೆ.

ಲಾಕ್‌ಡೌನ್ ಜಾರಿಗೂ ಮುನ್ನ ಒಂದು ದಿನಕ್ಕೆ 4,150 ಬಾಕ್ಸ್‌ ಲಿಕ್ಕರ್ ಹಾಗೂ 4,850 ಬಾಕ್ಸ್‌ ಬಿಯರ್ ಮಾರಾಟವಾಗುತ್ತಿತ್ತು. ಸೋಮವಾರ ಅರ್ಧದಿನದಲ್ಲೇ ಒಂದು ದಿನದಲ್ಲಿ ನಡೆಯುವ ವ್ಯಾಪಾರಕ್ಕಿಂತ ಹೆಚ್ಚಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಲಿಕ್ಕರ್ ಖರೀದಿಗೆ ತೋರಿದ ಆಸಕ್ತಿ ಬಿಯರ್‌ ಖರೀದಿಯಲ್ಲಿ ಕಂಡುಬಂದಿಲ್ಲ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಮಾರಾಟ ಶೇ 50ರಷ್ಟು ಕುಸಿದಿದೆ. ಮುಂದೆ, ಚೇತರಿಕೆ ಕಾಣಬಹುದು ಎಂದು ಅಧಿಕಾರಿಗಳು ತಿಳಿಸಿದರು.

ಮದ್ಯಕ್ಕೆ ಮುಗಿಬಿದ್ದರು

ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೂ ಕಂಡುಬರದಷ್ಟು ದಟ್ಟಣೆ ಮದ್ಯ ಖರೀದಿಗೆ ಕಂಡುಬಂತು. ಸೋಮವಾರ ಬೆಳಿಗ್ಗಿನಿಂದಲೇ ಮದ್ಯದಂಗಡಿ ಮುಂದೆ ಗ್ರಾಹಕರು ಸರದಿ ಸಾಲಿನಲ್ಲಿ ನಿಂತಿದ್ದರು.ಬೆಳಿಗ್ಗೆ 9ಕ್ಕೆ ಆರಂಭವಾದ ಮದ್ಯಮಾರಾಟ ಮಧ್ಯಾಹ್ನ 1ರವರೆಗೂ ಬಿಡುವಿಲ್ಲದೆ ಸಾಗಿತು. ದಟ್ಟಣೆ ನಿಯಂತ್ರಿಸಲು ಹಾಗೂ ಅಂತರ ಕಾಯ್ದುಕೊಳ್ಳಲು ಬ್ಯಾರಿಕೇಡ್‌ ಹಾಗೂ ಮಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.

ಪ್ರತಿಯೊಂದು ಮಳಿಗೆಯ ಮುಂದೆಯೂ ಕನಿಷ್ಠ 100 ಮೀಟರ್‌ವರೆಗೂ ಗ್ರಾಹಕರು ನಿಂತಿದ್ದರು. ಖರೀದಿಗೆ ಬರುವವರಿಗೆ ಸ್ಯಾನಿಟೈಸರ್ ಹಾಕಿ ಒಳಬಿಡಲಾಯಿತು. ಏಕಕಾಲಕ್ಕೆ ಐವರು ಗ್ರಾಹಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಯಿತು. ಹೆಚ್ಚಿನವರು ಮಾಸ್ಕ್‌ ಧರಿಸಿ ಬಂದಿದ್ದರು.

ಯುವತಿಯರು ಮುಗಿಬಿದ್ದರು

ಮಣಿಪಾಲದಲ್ಲಿ ಮದ್ಯಕ್ಕಾಗಿ ಯುವತಿಯರೂ ಮುಗಿಬಿದ್ದಿದ್ದರು. ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿ ಖುಷಿಪಟ್ಟರು. ಮಣಿಪಾಲದಲ್ಲಿ ನೆರೆ ರಾಜ್ಯ ಹಾಗೂ ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ನೆಲೆಸಿದ್ದು, ಯುವಕ ಯುವತಿಯರಲ್ಲಿ ಮದ್ಯಸೇವನೆಯ ಪ್ರಮಾಣ ಹೆಚ್ಚು.

ಅವಧಿ ಮುಗಿದರೂ ಕರಗದ ಸಾಲು

ಮಧ್ಯಾಹ್ನ 1ರವರೆಗೆ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ಅವಧಿ ಮೀರಿದರೂ ದಟ್ಟಣೆ ಕಡಿಮೆಯಾಗಿರಲಿಲ್ಲ. ಅವಧಿ ಮೀರುತ್ತಿದ್ದಂತೆ ಪೊಲೀಸರು ಮಧ್ಯೆ ಪ್ರವೇಶಿಸಿ ಅಂಗಡಿಗಳನ್ನು ಮುಚ್ಚಿಸಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT