ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಪೌಷ್ಟಿಕ ತೋಟ ನಿರ್ಮಾಣಕ್ಕೆ ‘ಖಾತ್ರಿ’ ಅನುದಾನ

13 ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಲು ₹ 2,400 ಸಹಾಯಧನ: ಪೌಷ್ಟಿಕ ಆಹಾರ ದೊರೆಯಬೇಕು ಎಂಬ ಉದ್ದೇಶ
Last Updated 13 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಉಡುಪಿ: ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೂ ಪೌಷ್ಟಿಕ ಆಹಾರ ದೊರೆಯಬೇಕು ಎಂಬ ಉದ್ದೇಶದಿಂದ ಸರ್ಕಾರ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪೌಷ್ಟಿಕ ತೋಟಗಳ ನಿರ್ಮಾಣಕ್ಕೆ ಅವಕಾಶ ನೀಡಿದೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಜಾಬ್‌ ಕಾರ್ಡ್ ಹೊಂದಿರುವ ಕುಟುಂಬಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬಹುದು. ಯೋಜನೆಯಡಿ ಒಂದು ಕುಟಂಬಕ್ಕೆ ಗರಿಷ್ಠ ₹ 2,400 ಸಹಾಯಧನ ಸಿಗಲಿದೆ.

ಪೌಷ್ಟಿಕ ತೋಟ ನಿರ್ಮಾಣಕ್ಕೆ ವಿಶಾಲವಾದ ಜಾಗದ ಅವಶ್ಯಕತೆ ಇಲ್ಲ. ಮನೆಯ ಹಿತ್ತಲು, ಅಂಗಳ ಹಾಗೂ ಖಾಲಿ ಜಾಗದಲ್ಲಿಯೂ ತೋಟ ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಕನಿಷ್ಠ ಒಂದು ಗುಂಟೆ (2.5 ಸೆಂಟ್ಸ್‌) ಜಾಗ ಇದ್ದವರೂ ಲಾಭ ಪಡೆಯಬಹುದು ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿ ಶ್ಯಾಂ.

13 ಹಣ್ಣಿನ ಗಿಡ ಬೆಳೆಯಬಹುದು: ಪೌಷ್ಟಿಕ ತೋಟ ಕಾರ್ಯಕ್ರಮದಡಿ 13 ಬಗೆಯ ಹಣ್ಣಿನ ಗಿಡಗಳನ್ನು ಬೆಳೆಸಬಹುದು. ಜಿಲ್ಲಾ ಪಂಚಾಯಿತಿಯಿಂದ ಒಪ್ಪಂದ ಮಾಡಿಕೊಳ್ಳಲಾದ ನರ್ಸರಿಗಳಿಂದ ಫಲಾನುಭವಿಗಳು ಹಣ್ಣಿನ ಗಿಡಗಳನ್ನು ಖರೀದಿಸಬೇಕು. ಮಾವು, ಕರಿಬೇವು, ಪಪ್ಪಾಯ, ಸಪೋಟ, ಬಾಳೆ, ನುಗ್ಗೆ, ತೆಂಗು, ಸೀಬೆ, ನಿಂಬೆ ಹೀಗೆ ಹಲವು ಗಿಡಗಳನ್ನು ಕೊಂಡುಕೊಳ್ಳಲು ಅವಕಾಶವಿದೆ.

ನರ್ಸರಿಯಲ್ಲಿ ನಿರ್ಧಿಷ್ಟ ಹಣ್ಣಿನ ಗಿಡಗಳು ಸಿಗದಿದ್ದರೆ, ಒಂದೇ ಗಿಡವನ್ನು ಹೆಚ್ಚು ಖರೀದಿಸಲು ಅವಕಾಶವಿದೆ. ಆದರೆ, ಹಣ್ಣಿನ ಗಿಡಗಳ ಬದಲು ತರಕಾರಿ ಗಿಡಗಳನ್ನು ಖರೀದಿಸುವಂತಿಲ್ಲ. ಸ್ವಂತ ಖರ್ಚಿನಲ್ಲಿ ಖರೀದಿಸಿ ಪೌಷ್ಟಿಕ ತೋಟದ ಮಧ್ಯೆ ಬೆಳೆಸಲು ಅಡ್ಡಿ ಇಲ್ಲ ಎಂದು ಮಾಹಿತಿ ನೀಡಿದರು ಶ್ಯಾಂ.

ಯಾರು ಅರ್ಹರು: ಬಿಪಿಎಲ್‌ ಕಾರ್ಡ್‌ದಾರರು, ಎಸ್‌ಸಿ, ಎಸ್‌ಟಿ, ಅಲೆಮಾರಿಗಳು, ಸ್ತ್ರೀಪ್ರಧಾನ ಕುಟುಂಬಗಳು (ಎಪಿಎಲ್‌), ಅಂಗವಿಕಲರು, ಭೂ ಸುಧಾರಣಾ ಹಾಗೂ ಇಂದಿರಾ ಆವಾಸ್‌ ಯೋಜನೆ ಫಲಾನುಭವಿಗಳು, ಸಣ್ಣ ಹಾಗೂ ಅತಿ ಸಣ್ಣ ರೈತರು, ಅನುಸೂಚಿತ ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯವಾಸಿಗಳು ಯೋಜನೆಯಡಿ ಲಾಭ ಪಡೆಯಬಹುದು. ಮುಖ್ಯವಾಗಿ ಜಾಬ್‌ ಕಾರ್ಡ್‌ ಹೊಂದಿರಬೇಕು.

ಪೌಷ್ಟಿಕ ತೋಟ ನಿರ್ಮಾಣ ಮಾಡುವ ಜಾಗದ ದಾಖಲೆಯನ್ನು ಸಂಬಂಧಪಟ್ಟ ಪಂಚಾಯಿತಿಗೆ ಸಲ್ಲಿಸಬೇಕು. ಹಣ್ಣಿನ ಗಿಡಗಳನ್ನು ಖರೀದಿಸಿದ ಬಿಲ್‌ ಸಲ್ಲಿಸಿದರೆ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಈಚೆಗಷ್ಟೆ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ಇದುವರೆಗೂ 40ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ಮಾಹಿತಿ ನೀಡಿದರು ಶ್ಯಾಂ.

‘ಗ್ರಾಮೀಣ ಭಾಗದ ಆರೋಗ್ಯಕ್ಕೆ ಒತ್ತು’
‘ನಮ್ಮ ಆರೋಗ್ಯಕ್ಕಾಗಿ ಬೇಕು ಪೌಷ್ಟಿಕ ತೋಟ’ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ಇದು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಯಾಗಿದ್ದು, ಅನಾರೋಗ್ಯ ದೂರ ಮಾಡಬೇಕು, ಗ್ರಾಮೀಣ ಭಾಗದ ಕುಟುಂಬಗಳಿಗೆ ಪೌಷ್ಟಿಕ ಆಹಾರ ದೊರೆಯಬೇಕು ಎಂಬುದು ಯೋಜನೆಯ ಉದ್ದೇಶ. ಯೋಜನೆಯಡಿ ಹಲವರು ಪೌಷ್ಟಿಕ ತೋಟ ನಿರ್ಮಿಸಿಕೊಳ್ಳಲು ಮುಂದೆ ಬಂದಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT