ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೇಶ ಪಾಲಿಸದಿದ್ದರೆ ಒಳಗೆ ಹಾಕಿಸ್ತೀನಿ

ಖಾಸಗಿ ಮಳಿಗೆಯ ವಿರುದ್ಧ ಡಿಸಿ ಗರಂ: ಮಲ್ಪೆ ಬಂದರು ಬಂದ್ ಮಾಡುವಂತೆ ಸೂಚನೆ
Last Updated 24 ಮಾರ್ಚ್ 2020, 17:14 IST
ಅಕ್ಷರ ಗಾತ್ರ

ಉಡುಪಿ: ರಾಜ್ಯದಾದ್ಯಂತ ಕರ್ಫ್ಯೂ ಮಾದರಿ ನಿರ್ಬಂಧ ಜಾರಿಯಲ್ಲಿದ್ದು, ಮಂಗಳವಾರ ಜಿಲ್ಲೆಯೂ ಲಾಕ್‌ ಡೌನ್‌ ಆಗಿತ್ತು. ಜಿಲ್ಲಾಧಿಕಾರಿ ಜಿ.ಜಗದೀಶ್‌ ಹಾಗೂ ಎಸ್‌ಪಿ ವಿಷ್ಣುವರ್ಧನ್‌ ಲಾಕ್‌ಡೌನ್‌ ಪರಿಸ್ಥಿತಿ ಅರಿಯಲು ಖುದ್ದು ರಸ್ತೆಗಿಳಿದಿದ್ದರು. ನಿಯಮ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸಿದರು.

ಥರ್ಮಲ್‌ ಸ್ಕ್ಯಾನ್‌ ಪರೀಕ್ಷೆ

ಮೊದಲಿಗೆ ನಗರದ ರಿಲಯನ್ಸ್‌ ಮಾರಾಟ ಮಳಿಗೆಗೆ ಭೇಟಿ ನೀಡಿದ ಡಿಸಿ, ಎಸ್‌ಪಿ, ಭದ್ರತಾ ಸಿಬ್ಬಂದಿ ಥರ್ಮಲ್‌ ಗನ್‌ನಿಂದ ಗ್ರಾಹಕರ ತಪಾಸಣೆ ಮಾಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿದರು. ಸ್ವತಃ ಪರೀಕ್ಷೆಗೊಳಗಾದರು.

ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಗ್ರಾಹಕರಿಗೆ ಅವಕಾಶ ಕೊಡಬೇಕು. ಎಂಆರ್‌ಪಿಗಿಂತ ಹೆಚ್ಚಿನ ಬೆಲೆ ಪಡೆಯುವಂತಿಲ್ಲ. ಗ್ರಾಹಕರು 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಒಮ್ಮೆಲೆ ಗ್ರಾಹಕರನ್ನು ಒಳಬಿಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಾಸ್ಕ್‌ ಹಾಕಿಕೊಳ್ಳಿ

ಬಳಿಕ ನೇರವಾಗಿ ಡಯಾನ ಸರ್ಕಲ್‌ನಲ್ಲಿರುವ ತರಕಾರಿ ಮಳಿಗೆಗಳಿಗೆ ಭೇಟಿನೀಡಿ, ‘ಗ್ರಾಹಕರ ನಡುವೆ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್‌ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಕೈ ಮೇಲೆ ಸೀಲ್ ಇದ್ದವರು ಖರೀದಿಗೆ ಬಂದರೆ, ಮಾರಾಟ ಮಾಡಬೇಡಿ. ತಕ್ಷಣ ಪೊಲೀಸರಿಗೆ ತಿಳಿಸಬೇಕು ಎಂದು ವ್ಯಾಪಾರಿಗಳಿಗೆ ದೂರವಾಣಿ ಸಂಖ್ಯೆಗಳನ್ನು ನೀಡಿದರು.

ಎಸಿ ಯಾಕೆ ಬಂದ್ ಮಾಡಿಲ್ಲ

ಬಳಿಕ ಜೋಡುಕಟ್ಟೆ ಸರ್ಕಲ್‌ನಲ್ಲಿರುವ ಖಾಸಗಿ ಮಾಲ್‌ಗೆ ಭೇಟಿನೀಡಿದ ಜಿಲ್ಲಾಧಿಕಾರಿ, ಹವಾನಿಯಂತ್ರಕ ಹಾಕಿರುವ ಬಗ್ಗೆ ಅಲ್ಲಿನ ಮ್ಯಾನೇಜರ್‌ಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಮಾಲ್‌ನಲ್ಲಿ 25 ನೌಕರರು ಮಾತ್ರ ಇರಬೇಕು ಎಂಬ ಸೂಚನೆ ಇದ್ದರೂ ಪಾಲನೆಯಾಗಿಲ್ಲ. ಒಟ್ಟಿಗೆ 20 ಜನರನ್ನು ಖರೀದಿಗೆ ಒಳಬಿಟ್ಟಿದ್ದು ಕೂಡ ಸರ್ಕಾರದ ನಿಯಮಗಳ ಉಲ್ಲಂಘನೆ ಎಂದು ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸುವಂತೆ ಎಸ್‌ಪಿಗೆ ಸೂಚನೆ ನೀಡಿದರು.

ನಿಗಧಿಗಿಂತ ಹೆಚ್ಚಿನ ದರಕ್ಕೆ ತರಕಾರಿ ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲಿಸಿ, ಸರಬರಾಜಾದ ತರಕಾರಿಯ ದರ ಹಾಗೂ ಮಾರಾಟ ಮಾಡುತ್ತಿರುವ ದರಕ್ಕೆ ಹೋಲಿಸಿ, ಹೆಚ್ಚು ದರ ಪಡೆಯುತ್ತಿದ್ದರೆ ಕ್ರಮ ಜರುಗಿಸುವಂತೆಯೂ ತಹಶೀಲ್ದಾರ್ ಪ್ರದೀಪ್‌ ಕುರ್ಡೆಕರ್ ಅವರಿಗೆ ಸೂಚಿಸಿದರು.

ಬಂದರಿಗೆ ಭೇಟಿ

ಬಳಿಕ ನೇರವಾಗಿ ಮಲ್ಪೆ ಬಂದರಿಗೆ ಭೇಟಿನೀಡಿದ ಡಿಸಿ, ಅಲ್ಲಿನ ಮೀನುಗಾರ ಮುಖಂಡರ ಜತೆ ಚರ್ಚಿಸಿ ಬುಧವಾರದಿಂದಲೇ ಬಂದರು ಬಂದ್ ಆಗಬೇಕು. ಮೀನು ಮಾರಾಟ ನಡೆಯುವಂತಿಲ್ಲ. ಯಾರೂ ಸಮುದ್ರಕ್ಕೆ ಬೋಟ್‌ ಇಳಿಸುವಂತಿಲ್ಲ. ಸಮುದ್ರದಲ್ಲಿದ್ದವರು ಮರಳಬೇಕು ಎಂದು ಸೂಚನೆ ನೀಡಿದರು.

ಬಂದರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೀನುಗಾರರ ಮಹಿಳೆಯರು ಹಾಗೂ ಕಾರ್ಮಿಕರು ಅಗತ್ಯ ಸುರಕ್ಷಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಎಸ್‌ಪಿ ವಿಷ್ಣುವರ್ಧನ್, ಎಎಸ್‌ಪಿ ಕುಮಾರಚಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT